Crime News: 4 ಜನರಿಗೆ ಚಾಕುವಿನಿಂದ ಇರಿದ ರೌಡಿಶೀಟರ್; ಕಾರಣ ಕೇಳಿ ದಂಗಾದ ಪೊಲೀಸರು
ಬೆಂಗಳೂರಿನ ಇಂದಿರಾ ನಗರದಲ್ಲಿ 4 ಜನರ ಮೇಲೆ ರೌಡಿಶೀಟರ್ ಕದಂಬ ಚಾಕುವಿನಿಂದ ಇರಿದಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕೈಯಲ್ಲಿ ಚಾಕು ಇತ್ತು. ಯಾಕೆ ಇರಿದೆ ಅಂತಾ ಗೊತ್ತೇ ಇಲ್ಲ ಎಂದು ರೌಡಿಶೀಟರ್ ಹೇಳಿದ್ದಾನೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಇಂದಿರಾ ನಗರದಲ್ಲಿ 4 ಜನರ ಮೇಲೆ ರೌಡಿಶೀಟರ್ ಕದಂಬ ಚಾಕುವಿನಿಂದ ಇರಿದಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಅಚ್ಚರಿಯ ವಿಚಾರ ಗೊತ್ತಾಗಿದೆ. ಯಾಕಾಗಿ ತಾನು ಇರಿದೆ ಎನ್ನುವುದಕ್ಕೆ ಆತ ನೀಡಿದ ಕಾರಣ ಕೇಳಿ ಒಂದುಕ್ಷಣ ಪೊಲೀಸರೇ ದಂಗಾಗಿದ್ದಾರೆ. ಕೈಯಲ್ಲಿ ಚಾಕು ಇತ್ತು. ಯಾಕೆ ಇರಿದೆ ಅಂತಾ ಗೊತ್ತೇ ಇಲ್ಲ ಎಂದು ರೌಡಿಶೀಟರ್ ಹೇಳಿದ್ದಾನೆ. ಪಾನಿಪುರಿ ಅಂಗಡಿಯವನಿಗೆ ಯಾಕೆ ಚಾಕು ಇರಿದೆ ಎಂದು ಗೊತ್ತಿಲ್ಲ ಎಂದಿದ್ದಾನೆ (Crime News). ಇನ್ನು ಬೈಕ್ನಲ್ಲಿ ಡ್ರಾಪ್ ಕೊಟ್ಟಿದ್ದ ವ್ಯಕ್ತಿಗೂ ಆರೋಪಿ ಚಾಕುವಿನಿಂದ ಇರಿದಿದ್ದಾನೆ (Bengaluru News). ಈ ಬಗ್ಗೆ ಪೊಲೀಸರು ಕೇಳಿದಕ್ಕೆ ಎಡ ತಿರುವು ತಗೋ ಅಂದರೆ ಬಲ ತಿರುವು ತಗೊಂಡ. ಅದಕ್ಕೆ ಚಾಕು ಚುಚ್ಚಿದೆ ಎಂದಿದ್ದಾನೆ.
ಅಲ್ಲದೇ ಬೇರೆ ಮೂವರಿಗೂ ಆರೋಪಿ ಚಾಕು ಇರಿದಿದ್ದಾನೆ. ಆದರೆ ಅವರಿಗೆಲ್ಲ ಯಾಕೆ ಚಾಕುವಿನಿಂದ ಇರಿದೆ ಅಂತಾ ಗೊತ್ತೇ ಇಲ್ಲ ಎಂದು ಕದಂಬ ತಿಳಿಸಿದ್ದಾನೆ. ಸದ್ಯ ಆತನನ್ನು ಪೊಲೀಸರು 8 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಇಂದಿರಾನಗರ ರೌಡಿಶೀಟರ್ ಆಗಿರುವ ಕದಂಬ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಇತ್ತೀಚೆಗಷ್ಟೇ ಹೊರಬಂದಿದ್ದ. ಆದರೆ ಜೈಲಿಂದ ಬಂದ ಬಳಿಕ ಮತ್ತೆ ಏರಿಯಾದಲ್ಲಿ ಅಟ್ಟಹಾಸ ಮೆರೆದಿದ್ದಾನೆ. ಕುಡಿದ ಮತ್ತಲ್ಲಿ ಪಾನಿ ಪುರಿ ಅಂಗಡಿ ಬಳಿ ಹೋಗಿ ಮಾಲೀಕನ ಮೇಲೆ ಡ್ರಾಗರ್‌ನಿಂದ ಇರಿದಿದ್ದಾನೆ. ಅದಾದ ಬಳಿಕ ಅಡ್ಡ ಬಂದ ಸಿಬ್ಬಂದಿಯ ಕತ್ತಿನ ಬಳಿಯೂ ಬಲವಾಗಿ ಕೊಯ್ದಿದ್ದಾನೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಮೂವರಿಗೆ ಅಟ್ಯಾಕ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಸ್ಮಿಕವಾಗಿ ಸಿಡಿದ ಗುಂಡು; 3 ವರ್ಷದ ಬಾಲಕ ಸಾವು
ಮಂಡ್ಯ: ಮಕ್ಕಳು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು 3 ವರ್ಷದ ಮಗು ಮೃತಪಟ್ಟ ಘಟನೆ ನಾಗಮಂಗಲ ತಾಲೂಕಿನ ದೊಂದೆಮಾದಿಹಳ್ಳಿಯ ಕೋಳಿ ಫಾರಂ ಒಂದರಲ್ಲಿ ಭಾನುವಾರ (ಫೆ. 16) ನಡೆದಿದೆ. ನೈಜ ಗನ್ ಎನ್ನುವುದು ತಿಳಿಯದೆ ಮಕ್ಕಳು ಅದರಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಮೃತ ಬಾಲಕನ್ನನ್ನು ಪಶ್ಚಿಮ ಬಂಗಾಳ ಮೂಲಕ ಅಭಿಷೇಕ್ (3) ಎಂದು ಗುರುತಿಸಲಾಗಿದೆ. ಈತ ಶಶಾಂಕ್ ಮತ್ತು ಲಿಪಿಕಾ ದಂಪತಿಯ ಪುತ್ರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Self Harming: ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಮಗಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ಗ್ರಾಪಂ ಅಧ್ಯಕ್ಷೆ
ಘಟನೆಯಲ್ಲಿ ಅಭಿಷೇಕ್ ತಾಯಿ ಲಿಪಿಕಾಗೂ ಗಾಯವಾಗಿದೆ. ಶಂಕರ್‌ದಾಸ್ ಎಂಬವರ ಪುತ್ರ, 13 ವರ್ಷದ ಸುದೀಪ್ ದಾಸ್ ಆಟವಾಡುತ್ತಿದ್ದಾಗ ಆತನ ಕೈಯಿಂದ ಆಕಸ್ಮಿಕವಾಗಿ ಫೈರಿಂಗ್ ಆಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಕೋಳಿ ಫಾರಂ ನರಸಿಂಹಮೂರ್ತಿ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಇಲ್ಲಿ ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಮತ್ತು ಲಿಪಿಕಾ ದಂಪತಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಮನೆಗೆ ಸುದೀಪ್ ದಾಸ್ ಬಂದಿದ್ದಾಗ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿದ್ದ ಅಭಿಷೇಕ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.