ಬೆಂಗಳೂರು: ಎಪಿಎಸ್, ಪಿಯು ಮತ್ತು ಪದವಿ ಕಾಲೇಜಿನ ವತಿಯಿಂದ ಅನಂತ ಜ್ಞಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಸ್ತು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ನಾವೀನ್ಯತೆ ಹಾಗೂ ಉದ್ಯಮ ಶೀಲತೆ ಬೆಳೆಸುವ ಉದ್ದೇಶದಿಂದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಎ ಡಾ.ವಿಷ್ಣು ಭರತ್ ಆಲಂಪಲ್ಲಿ ಉದ್ಘಾಟಿಸಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜ್ಞಾನವೆಂದರೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾದ ವಿಷಯವಲ್ಲ; ಅದು ನಮ್ಮ ದೈನಂದಿನ ಜೀವನದ ಪ್ರತಿಯೊಂದು ಹಂತದಲ್ಲೂ ಹಾಸುಹೊಕ್ಕಾಗಿದೆ. ಮೊಬೈಲ್ ಫೋನ್ನಿಂದ ಉಪಗ್ರಹದವರೆಗೆ, ಸಣ್ಣ ಯಂತ್ರಗಳಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಎಲ್ಲವೂ ವಿಜ್ಞಾನದ ಕೊಡುಗೆಗಳೇ ಎಂದು ತಿಳಿಸಿದರು.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
ಇಂದಿನ ಜಗತ್ತು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ವೇಗವಾಗಿ ಬದಲಾಗುತ್ತಿದೆ. ಎ ಐ ಅನೇಕ ಕೆಲಸಗಳನ್ನು ಮಾಡಬಹುದಾದರೂ, ಮಾನವೀಯತೆ, ಮೌಲ್ಯಗಳು, ಕಲ್ಪನಾಶಕ್ತಿ ಮತ್ತು ನಾಯಕತ್ವದ ಗುಣಗಳು ಮನುಷ್ಯನ ವಿಶಿಷ್ಟ ಶಕ್ತಿಗಳಾಗಿ ಉಳಿಯಲಿವೆ ಎಂದು ತಿಳಿಸಿದರು.
ಅದೇ ರೀತಿ, ವಾಣಿಜ್ಯವೆಂದರೆ ಕೇವಲ ಲೆಕ್ಕಪತ್ರ ಮತ್ತು ಹಣಕಾಸಿನ ವ್ಯವಹಾರವಲ್ಲ. ಅದು ಉದ್ಯಮಶೀಲತೆ, ಆರ್ಥಿಕ ಜ್ಞಾನ, ನಿರ್ವಹಣಾ ಕೌಶಲ್ಯ ಹಾಗೂ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ ಎಂದು ವಿವರಿಸಿದರು.
ವಿಜ್ಞಾನ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟರೆ, ವಾಣಿಜ್ಯ ಆ ಆವಿಷ್ಕಾರಗಳನ್ನು ಸಮಾಜಕ್ಕೆ ತಲುಪಿಸುವ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕುತೂಹಲ ಸೃಜನಶೀಲತೆ ಆತ್ಮವಿಶ್ವಾಸ ಈ ಮೂರು ಪ್ರಮುಖ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಪ್ರಶ್ನೆಗಳನ್ನು ಕೇಳಬೇಕು, ಪ್ರಯೋಗಗಳನ್ನು ಮಾಡಬೇಕು, ತಪ್ಪುಗಳಿಂದ ಪಾಠ ಕಲಿಯಬೇಕು ಮತ್ತು ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದು ಪ್ರೇರೇಪಿಸಿದರು.
ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಕೇವಲ ಜ್ಞಾನ ಪಡೆಯುವವರಾಗದೆ, ಹೊಸ ಜ್ಞಾನವನ್ನು ಸೃಷ್ಟಿಸುವವರಾಗಬೇಕು ಎಂದು ಕರೆ ನೀಡಿದರು.
ಪ್ರದರ್ಶನದಲ್ಲಿ ಬಹುಮಾನ ಗೆದ್ದವರನ್ನು ಮಾತ್ರವಲ್ಲದೆ, ಆಸಕ್ತಿಯಿಂದ ಭಾಗವಹಿಸಿ ಪ್ರಯತ್ನಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪ್ರೋತ್ಸಾಹಿಸಬೇಕು. ಏಕೆಂದರೆ ಪ್ರತಿಯೊಂದು ದೊಡ್ಡ ಸಾಧನೆ ಯ ಹಿಂದೆ ಅನೇಕ ಸಣ್ಣ ಪ್ರಯತ್ನಗಳಿರುತ್ತವೆ ಎಂದು ಹೇಳಿದರು.
ಎಪಿಎಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶ್, ಖಜಾಂಚಿ ಎಸ್.ಅಖಿಲೇಶ್ ಬಾಬು, ಉಪಾಧ್ಯಕ್ಷ ವಿಜಯ ಭಾಸ್ಕರ್, ಜಂಟಿ ಕಾರ್ಯದರ್ಶಿ ಎ.ರಾಮಪ್ರಸಾದ್ ಹಾಗೂ ಆಡಳಿತ ಮಂಡಳಿ ಯ ಅಧ್ಯಕ್ಷ ಎ.ಮುರಳಿ ಉಪಸ್ಥಿತರಿದ್ದರು.