ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಚಳಿಗಾಲದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್(Cubbon Park)ನಲ್ಲಿ ನ.25ರಿಂದ ಡಿ.7ರವರೆಗೆ 13 ದಿನಗಳ ಕಾಲ 2026ನೇ ಸಾಲಿನ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ವಿಶೇಷ ಥೀಮ್ ನಲ್ಲಿ ನಡೆಯಲಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಕಬ್ಬನ್ ಪಾರ್ಕ್ ಸಿಂಗಾರಗೊಂಡಿದ್ದು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಶಾಲಾ ಮಕ್ಕಳನ್ನು ಆಕರ್ಷಿಸಲು ಸಿದ್ಧವಾಗಿದೆ. ಬಾಲಭವನದ ಮುಂಭಾಗ ದಿಂದ ಜಯ ಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ವಿವಿಧ ಬಗೆಯ ಹೂವಿನ ಕಲಾಕೃತಿ ಗಳನ್ನು ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಸುಮಾರು 15 ಲಕ್ಷಕ್ಕೂ ಅಧಿಕ ಬಣ್ಣಬಣ್ಣದ ಹ ಬಳಸಿ ನಾಡಿನ ವೀರ ವನಿತೆಯರ ಶೌರ್ಯ, ತಾಯಿ ಭುವ ನೇಶ್ವರಿ, ಕರ್ನಾಟಕದ ನಕ್ಷೆ, ನಮ್ಮ ಮೆಟ್ರೋ ರೈಲಿನ ಮಾದರಿ, ಹೊಯ್ಸಳ ವಾಸ್ತುಶಿಲ್ಪ, ಗಂಡಭೇರುಂಡ ಹಾಗೂ ಇಂಡಿಯಾ ಗೇಟ್ ಪ್ರತಿಕೃತಿ ಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: Cubbon Park Flower Show: ರಾಜಧಾನಿಯ ಕಬ್ಬನ್ ಪಾರ್ಕ್ನಲ್ಲಿ ಇಂದಿನಿಂದ ಫ್ಲವರ್ ಶೋ, ಟಿಕೆಟ್ ಬೆಲೆ ಎಷ್ಟು?
ಮಕ್ಕಳಿಗೆ ವಿಶೇಷ ಆಕರ್ಷಣೆ: ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ವಿವಿಧ ಕಾರ್ಟೂನ್ ಪಾತ್ರಗಳು, ನರ್ತಿಸುವ ನವಿಲು, ಪಾಂಡಾ, ಸ್ಟಾರ್ಫಿಶ್ ಸೇರಿದಂತೆ ಹಲವು ವಿನೂತನ ಕಲಾಕೃತಿ ರೂಪಿಸಲಾಗಿದೆ. ತರಕಾರಿ ಮತ್ತು ಹೂಗಳನ್ನು ಬಳಸಿ ಸಿದ್ಧಪಡಿಸಿರುವ ಆನೆ ಹಾಗೂ ಚಿಟ್ಟೆಗಳ ಮಾದರಿಗಳು ಪ್ರದರ್ಶನದ ವಿಶೇಷ ಆಕರ್ಷಣೆಯಾಗಲಿವೆ. ಪೆಟೂನಿಯಾ, ಟೊರೇನಿಯಾ, ಸಾಲ್ವಿಯಾ, ಚೆಂಡುಹೂವು, ಸೇವಂತಿಗೆ, ಜರ್ಬೆರಾ ಸೇರಿದಂತೆ ದೇಶ-ವಿದೇಶಗಳ ವಿವಿಧ ತಳಿಯ ಹೂವುಗಳು ಕಣ್ಮನ ಸೆಳೆಯಲಿವೆ. ಹೂವಿನ ಸೌಂದರ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯ ಲಿದ್ದು, ಭಾರತೀಯ ಸೇನೆಯ ವತಿಯಿಂದ ವಿಶೇಷ ಜಾಗೃತಿ ಪ್ರದರ್ಶನ ಆಯೋಜಿಸಲಾಗಿದೆ.
ಐದು ಕಡೆ ವಾಹನ ನಿಲುಗಡೆ ವ್ಯವಸ್ಥೆ: ಪ್ರದರ್ಶನಕ್ಕೆ ಆಗಮಿಸುವವರಿಗೆ ಪಾರ್ಕಿಂಗ್ ಸಮಸ್ಯೆ ಯಾಗದಂತೆ ಐದು ಸ್ಥಳಗಳಲ್ಲಿ ಪೇ ಆಂಡ್ ಪಾರ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಎನ್ ಜಿಒ ಹಾಲ್ ವೃತ್ತ, ಕ್ವೀ ಪಾರ್ಕ್, ಹೈಕೋರ್ಟ್ ಪಾರ್ಕಿಂಗ್ ಆವರಣ, ಶ್ರೀ ಕಂಠೀರವ ಕ್ರೀಡಾಂಗಣದ ಆವರಣ ಹಾಗೂ ಸೇಂಟ್ ಜೋಸೆಫ್ ಶಾಲೆಯ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
![]()
ಕಳೆದ ವರ್ಷ ಸರಳವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಈ ಬಾರಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ಥೀಮ್ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದ್ದು, ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ.
- ಜಿ. ಕುಸುಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ