ಅಡ್ಡಮತದಾನಿಗಳ ಹೆಸರು, ವರದಿ ಬೇಕು: ವಿಜಯೇಂದ್ರ, ಅಶೋಕ್‌ಗೆ ಸೂಚನೆ
ಧರ್ಮಸ್ಥಳದಲ್ಲಿ ಆಣೆ ಮಾಡಿ, ಮತ್ತೊಂದು ಎಡವಟ್ಟನ್ನು ಮಾಡಬೇಡಿ: ತಾಕೀತು
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವರದಿಯನ್ನು ರಾಜ್ಯ ಬಿಜೆಪಿಗಿಂತ ಮೊದಲೇ ರಾಷ್ಟ್ರೀಯ ನಾಯಕರು ಪಡೆದುಕೊಂಡಿದ್ದಾರೆ ರಾಜ್ಯ ಬಿಜೆಪಿ ನಾಯಕರಿಗೆ ದೆಹಲಿ ವರಿಷ್ಠರು ಮಂಗಳಾರತಿ ಎತ್ತಿದ್ದಾರೆ. ಈ ಕೂಡಲೇ ಸಮಗ್ರ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದು, ಅಡ್ಡಮತದಾನ ಮಾಡಿದ ಶಾಸಕರನ್ನು ಪತ್ತೆ ಮಾಡಲು ಇನ್ನಿಲ್ಲದ ಕಸರತ್ತು ನಡೆದಿದೆ. ಇನ್ನೊಂದೆಡೆ ಬಿಜೆಪಿ ವರಿದಿಷ್ಠರು ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರನ್ನು ದೆಹಲಿಗೆ ಕರೆಯಿಸಿಕೊಂಡು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಗಂಭೀರ ಮಾತುಕತೆ ಮಾಡಿದ್ದಾರೆ. ಅಲ್ಲದೇ ಸೂಕ್ತ ಕ್ರಮದ ಬಗ್ಗೆಯೂ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ನಿತಿನ್ ನವೀನ್ ಸೂಚನೆ ಏನು?: ವರದಿಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ಹೆಸರು ಸಹಿತ ಮಾಹಿತಿ ನೀಡಬೇಕು. ಏಕೆ ಹಾಗೆ ಮಾಡಿದ್ದಾರೆಂಬ ಕಾರಣವನ್ನು ವಿವರವಾಗಿ ನೀಡುವಂತೆ ನಿತಿನ್ ನವೀನ್ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಸಾಂದರ್ಭಿಕ ಸಾಕ್ಷಿ ಮತ್ತು ಹೇಳಿಕೆ ಪರಾಮರ್ಶಿಸಿ ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಇಲ್ಲದಿದ್ದರೆ ಬಿ.ವೈ.ವಿಜಯೇಂದ್ರ ದೆಹಲಿಯಿಂದ ಹಿಂತಿರುಗಿದ ಬಳಿಕ ವರದಿ ಸಲ್ಲಿಕೆ ನಡೆಯಲಿದೆ.
ಇದನ್ನೂ ಓದಿ: MLC Election: ಮತ ಕೊಟ್ಟರೆ ಕಿಸೆಗೆ 50 ಕೋಟಿ, ಕ್ಷೇತ್ರಕ್ಕೆ 100 ಕೋಟಿ ಅನುದಾನದ ಆಮಿಷ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಆರೋಪ
ಆದರೆ ಅಡ್ಡ ಮತದಾನ ಮಾಡಿದವರ ಹೆಸರು ಉಲ್ಲೇಖಿಸುವುದು ಕಷ್ಟಸಾಧ್ಯದ ವಿಚಾರವಾಗಿದ್ದು, ಬಹುತೇಕ ಎಲ್ಲಾ ಶಾಸಕರನ್ನು ದೂರವಾಣಿ ಮೂಲಕ ಅದಾಗಲೇ ಸಮಿತಿ ಸಂಪರ್ಕಿಸಿದೆ. ಜೂನ್ ೨೫ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಜೂನ್ 19ರಂದೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದರು.
ರೆಡ್ ಸಿಗ್ನಲ್: ಬಿಜೆಪಿ ಒಳಗಿನ ಅಡ್ಡಮತದಾನದ ರಾಜಕೀಯಕ್ಕೆ ಧರ್ಮಸ್ಥಳವನ್ನು ಎಳೆದು ತರಲು ಹೊರಟಿದ್ದ ರಾಜ್ಯ ನಾಯಕರ ನಡೆಗೆ ಬಿಜೆಪಿ ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿ ರೆಡ್ ಸಿಗ್ನಲ್ ನೀಡಿದ್ದಾರೆ. ಅಡ್ಡಮತದಾನ ನಡೆದಿರುವುದಕ್ಕೆ ರಾಜ್ಯ ನಾಯಕರ ನಿರ್ಲಕ್ಷವೇ ಕಾರಣ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡಂತಿದೆ.
ನಿಮ್ಮ ತಪ್ಪು ಮತ್ತು ವೈಫಲ್ಯದಿಂದಲೇ ರಾಜ್ಯದಲ್ಲಿ ಅಡ್ಡಮತದಾನ ಚಲಾವಣೆ ಆಯಿತು. ನಿಮಗೆ ಶಾಸಕರ ಮೇಲೆ ಯಾವುದೇ ಹಿಡಿತ ಇರಲಿಲ್ಲ, ಅವರ ಮೇಲೆ ಸರಿಯಾದ ನಿಗಾ ಇಡುವಲ್ಲಿಯೂ ನೀವು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿ ನಿಮ್ಮದೇ ಶಾಸಕರನ್ನು ಸೆಳೆಯಲು ಅವಕಾಶ ಮಾಡಿಕೊಟ್ಟಿದ್ದೇ ನಿಮ್ಮ ಬೇಜವಾಬ್ದಾರಿತನ ಎಂದು ವರಿಷ್ಠರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಧರ್ಮಸ್ಥಳಕ್ಕೆ ರಾಜಕೀಯವನ್ನು ಎಳೆದು ತಂದು ಪಕ್ಷಕ್ಕೆ ಮತ್ತಷ್ಟು ಮುಜುಗರ ತರಬೇಡಿ ಎಂದು ಎಚ್ಚರಿಸಿರುವ ವರಿಷ್ಠರು, ಈಗಾಗಲೇ ಆಗಿರುವ ಎಡವಟ್ಟನ್ನು ಸರಿಪಡಿಸುವುದು ಹೇಗೆ ಎಂಬುದರ ಕಡೆ ಮೊದಲು ಗಮನಹರಿಸಿ. ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಾಟಕವಾಡಿ ಮತ್ತೊಂದು ಹೊಸ ವಿವಾದ ಸೃಷ್ಟಿ ಮಾಡಬೇಡಿ ಎಂದು ರಾಜ್ಯ ನಾಯಕರಿಗೆ ಅತ್ಯಂತ ಕಠಿಣ ಪದಗಳಲ್ಲಿ ಸಂದೇಶ ರವಾನಿಸಿದೆ.
ಅಡ್ಡಮತದಾನ ಮಾಡಿದ ಶಾಸಕರ ಉಚ್ಚಾಟನೆ ಸುಲಭವಿಲ್ಲ!
ಅಡ್ಡ ಮತದಾನ ಮಾಡಿದ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವಂತೆ ರಾಷ್ಟ್ರಿಯ ನಾಯಕರಿಗೆ ರಾಜ್ಯ ಬಿಜೆಪಿ ಘಟಕ ಮನವಿ ಮಾಡಿದರೂ ಅವರ ಉಚ್ಚಾಟನೆ ಸಾಧ್ಯ ವಿಲ್ಲ. ಬದಲಾಗಿ ಮುಂಬರುವ ಚುನಾವಣೆಯಲ್ಲಿ ಕಣ್ಣಿಟ್ಟು ಟಿಕೆಟ್ ಇಲ್ಲದಂತೆ ಮಾಡಬಹುದಷ್ಟೇ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಪಕ್ಷದ ಶಿಸ್ತಿನ ಉಲ್ಲಂಘನೆ ಮತ್ತು ನಂಬಿಕೆ ದ್ರೋಹವಾಗಿ ದ್ದರೂ, ಚುನಾವಣೆಯಲ್ಲಿ ನಡೆದಿರುವುದು ಗೌಪ್ಯ ಮತದಾನ. ಹೀಗಾಗಿ ಅಡ್ಡ ಮತದಾನ ಮಾಡಿ ದವರು ಯಾರು ಎಂಬುದು ಪತ್ತೆಹಚ್ಚಲು ಸದ್ಯಕ್ಕೆ ಸಾಧ್ಯವಿಲ್ಲ. ಅಡ್ನಾಡಿಗಳ ಅಮಾನತಿಗೆ ನೋಟಿಸ್ ನೀಡಿದರೆ ಸಾಲದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅವರನ್ನು ಉಚ್ಛಾಟಿಸಬೇಕು ಎಂದು ರಾಜ್ಯ ನಾಯಕರು ಹೇಳಿದರೂ ಪಕ್ಷದ ವರಿಷ್ಠರು ಈ ವಿಷಯದಲ್ಲಿ ಕಠಿಣಾತಿ ಕಠಿಣ ನೀತಿ ಅನುಸರಿಸಲು ಮುಂದಾಗುವುದು ಕೂಡ ಕಷ್ಟವೇ. ಕಠಿಣ ನಿರ್ಧಾರ ಕೈಗೊಳ್ಳಬಹುದು ಎಂಬ ಆತಂಕದಲ್ಲಿ ಆಡ್ಡ ಮತದಾನದ ಕೆಲ ಶಾಸಕರಿzರೆ. ಕೇಂದ್ರದ ಕೆಲ ನಿರ್ಧಾರಗಳು ರಾಜ್ಯ ಬಿಜೆಪಿಯ ಆಂತರಿಕ ಸಮೀಕರಣದ ಮೇಲೆ ಹಲವು ಬಾರಿ ಉಲ್ಟಾ ಪರಿಣಾಮ ಬೀರಿರುವುದನ್ನು ಈ ಹಂತದಲ್ಲಿ ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ.
ರಾಷ್ಟ್ರೀಯ ಅಧ್ಯಕ್ಷರಿಗೆ ಸವಿಸ್ತಾರ ಮಾಹಿತಿ: ವಿಜಯೇಂದ್ರ
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲವು ಶಾಸಕರು ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಗಮನಕ್ಕೆ ತಂದಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ದೆಹಲಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷರಿಗೂ ಅವರದೇ ಆದ ಮಾಹಿತಿ ಇತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾರು ಅನ್ಯಾಯ ಮಾಡಿದ್ದಾರೋ, ದ್ರೋಹ ಎಸಗಿದ್ದಾರೋ ಅವರ ವಿರುದ್ಧ ಕಠಿಣ ನಿರ್ಣಯ ಮಾಡಲೇಬೇಕಾಗುತ್ತದೆ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಂಘಟ ನಾತ್ಮಕ ಸಲಹೆ ನೀಡಿzರೆ. ಮುಂದಿನ ದಿನಗಳಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಲು ತಿಳಿಸಿದ್ದಾಗಿ ಹೇಳಿದರು.
![]()
ಅಡ್ಡಮತದಾನ ಮಾಡಿ ವಿಪ್ ಉಲ್ಲಂಘಿಸಿದ ಶಾಸಕರ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ಗೆ ನೀಡಲಾಗಿದೆ. ಅಧ್ಯಕ್ಷರಿಗೂ ಅವರದೇ ಆದ ಮಾಹಿತಿ ಇತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾರು ಅನ್ಯಾಯ ಮಾಡಿದ್ದಾರೋ, ದ್ರೋಹ ಎಸಗಿದ್ದಾರೋ ಅವರ ವಿರುದ್ಧ ಕಠಿಣ ನಿರ್ಣಯ ಮಾಡಲೇಬೇಕಾಗುತ್ತದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
![]()
ಅಡ್ಡ ಮತದಾನದ ಸಂಬಂಧ ಅಂಕಿಅಂಶಗಳು ನಮಗೂ ಮೊದಲೇ ರಾಷ್ಟ್ರೀಯ ಅಧ್ಯಕ್ಷರ ಬಳಿ ಇದೆ. ಯಾರು ಈ ಥರ ಮಾಡಿರಬಹುದೆಂಬ ಅಂದಾಜಿದೆ. ನಾವು ಕೊಟ್ಟ ಮಾಹಿತಿ ಮೇರೆಗೆ ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ, ಮೋಸ ಮಾಡಿದವರಿಗೆ ಸರಿಯಾದ ಪಾಠ ಕಲಿಸುವುದಾಗಿ ಹೇಳಿದ್ದಾರೆ.
-ಆರ್.ಅಶೋಕ, ಪ್ರತಿಪಕ್ಷ ನಾಯಕ