ಬೆಂಗಳೂರು: ದೇಶದ ಸ್ವಾತಂತ್ರ್ಯದ 80ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (CM DK Shivakumar) ಶುಭಾಶಯ ಕೋರಿದ್ದಾರೆ, ಈ ಕುರಿತು ಮಾತನಾಡಿದ ಸಿಎಂ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ‘ಯುವ ಕರ್ನಾಟಕ–ನವ ಭಾರತ’ವನ್ನು ತಮ್ಮ ಮಾರ್ಗದರ್ಶಕ ಧ್ಯೇಯವಾಕ್ಯವನ್ನಾಗಿ ಘೋಷಿಸಿದ ಅವರು, 2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್, ಅಂದರೆ ಸುಮಾರು ₹320 ಲಕ್ಷ ಕೋಟಿ ಆರ್ಥಿಕತೆಯನ್ನಾಗಿ ರೂಪಿಸುವ ಗುರಿಯನ್ನು ಪ್ರಕಟಿಸಿದರು.
ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ ಶೇ.5.5ರಷ್ಟು ಪಾಲು ಹೊಂದಿದ್ದರೂ, ದೇಶದ ಆರ್ಥಿಕತೆಗೆ ಶೇ.9.19ರಷ್ಟು ಕೊಡುಗೆ ನೀಡುತ್ತಿದೆ. 2025–26ನೇ ಸಾಲಿನಲ್ಲಿ ರಾಜ್ಯದ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (GSDP) ₹32.81 ಲಕ್ಷ ಕೋಟಿಗೆ ತಲುಪಿದ್ದು, ತಲಾ ಆದಾಯ ₹4.33 ಲಕ್ಷಕ್ಕೆ ಏರಿದೆ. ಜಿಎಸ್‌ಟಿ ಮತ್ತು ಆದಾಯ ತೆರಿಗೆ ಸಂಗ್ರಹದಲ್ಲಿಯೂ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಪಂಚ ಗ್ಯಾರಂಟಿಗಳಿಗೆ ಒತ್ತು
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಅಡಿಪಾಯ ಹಾಕಿವೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರತಿಯೊಂದು ಕುಟುಂಬಕ್ಕೂ ಭದ್ರತೆ, ಪ್ರತಿಯೊಬ್ಬ ನಾಗರಿಕನಿಗೂ ಗೌರವ ಮತ್ತು ಪ್ರತಿಯೊಬ್ಬ ಯುವಕ–ಯುವತಿಗೂ ಅವಕಾಶ ಕಲ್ಪಿಸುವುದು ಸರ್ಕಾರದ ಮೂಲ ಧ್ಯೇಯವಾಗಿದೆ ಎಂದರು. ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೀಡಲಾಗುತ್ತಿದ್ದು, ಇದುವರೆಗೆ ₹76,908 ಕೋಟಿಗೂ ಅಧಿಕ ಮೊತ್ತವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಹಿಳಾ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದ 3.5 ಕೋಟಿ ಮಹಿಳೆಯರು ಸುಮಾರು 796 ಕೋಟಿ ಉಚಿತ ಬಸ್ ಪ್ರಯಾಣಗಳನ್ನು ಕೈಗೊಂಡಿದ್ದು, ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ₹14,875 ಕೋಟಿಗೂ ಅಧಿಕ ಹಣವನ್ನು ಈ ಯೋಜನೆಗೆ ವೆಚ್ಚ ಮಾಡಿದೆ.
ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನೆರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕರ್ನಾಟಕದಲ್ಲಿ ವಿವಾಹಿತ ಮಹಿಳೆಯರು ಎದುರಿಸುತ್ತಿದ್ದ ಕೌಟುಂಬಿಕ ಹಿಂಸಾಚಾರದ ಪ್ರಮಾಣ ಶೇ.44ರಿಂದ ಶೇ.14ಕ್ಕೆ ಇಳಿಕೆಯಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣವೂ ಶೇ.35ರಿಂದ ಶೇ.26ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಯುವಕರಿಗೆ ಉದ್ಯೋಗ, ಪರೀಕ್ಷಾ ಸುಧಾರಣೆ
ಶಿಕ್ಷಣ ಮತ್ತು ಉದ್ಯೋಗದ ನಡುವೆ ಉಂಟಾಗಿರುವ ಅಂತರ ಯುವಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಾವುದೇ ಭಯ ಅಥವಾ ಆತಂಕವಿಲ್ಲದೆ ಎದುರಿಸುವಂತಾಗಬೇಕು ಎಂಬ ಉದ್ದೇಶದಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ವೈಜ್ಞಾನಿಕ ಸುಧಾರಣೆ ತರಲು ತಜ್ಞ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಎರಡು ತಿಂಗಳಲ್ಲಿ ವರದಿ ಸಲ್ಲಿಸಲಿದ್ದು, ಅದರ ಶಿಫಾರಸುಗಳ ಆಧಾರದ ಮೇಲೆ ದೇಶಕ್ಕೇ ಮಾದರಿಯಾಗುವ ಪರೀಕ್ಷಾ ವ್ಯವಸ್ಥೆ ರೂಪಿಸಲಾಗುವುದು ಎಂದು ಘೋಷಿಸಿದರು.
ಯುವಕರನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವ ಉದ್ದೇಶದಿಂದ ‘AI ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಯೋಜನೆಗಳನ್ನು ಪ್ರಕಟಿಸಲಾಗಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಆರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಪರಿಚಯಿಸುವುದಾಗಿ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಕೋಡಿಂಗ್ ಗುರುಕುಲ ವಿಶೇಷ ತರಗತಿಗಳ ಮೂಲಕ AI ಮತ್ತು ಕೋಡಿಂಗ್ ಕೌಶಲ ಕಲಿಯಲು ಅವಕಾಶ ಕಲ್ಪಿಸಲಾಗುವುದು.
ಬೆಂಗಳೂರಿನಲ್ಲಿ ದೇಶದ ಮೊದಲ ಸಾರ್ವಜನಿಕ AI ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದ್ದು, 2027ರ ಜನವರಿಯಿಂದ AI ಪ್ರಮಾಣಪತ್ರ ಕೋರ್ಸ್‌ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ರಾಜ್ಯದ ವಿವಿಧೆಡೆ AI ಹಬ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
1,000 ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾಗಿ ಅಭಿವೃದ್ಧಿ
ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಆಧುನಿಕ ಮೂಲಸೌಕರ್ಯ, ದ್ವಿಭಾಷಾ ಶಿಕ್ಷಣ, ಡಿಜಿಟಲ್ ತರಗತಿಗಳು, ವೃತ್ತಿಪರ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯವನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶ ಹೊಂದಲಾಗಿದೆ. LKGಯಿಂದ 12ನೇ ತರಗತಿವರೆಗೆ ಶಿಕ್ಷಣ ಸೌಲಭ್ಯ ಕಲ್ಪಿಸುವ ಈ ಯೋಜನೆಯಿಂದ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ವಿಸ್ತರಿಸಲಾಗಿದ್ದು, ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಉಚಿತ ಬಸ್ ಪಾಸ್‌ಗಳನ್ನು ವಿತರಿಸಲಾಗಿದೆ.
10 ಸಾವಿರ ಭಾರತ್ ಜೋಡೋ ಯುವ ಕ್ಲಬ್‌ಗಳ ಸ್ಥಾಪನೆ
ಯುವಕರಲ್ಲಿ ರಾಷ್ಟ್ರೀಯ ಏಕತೆ, ಸಂವಿಧಾನದ ಮೌಲ್ಯಗಳು, ಕ್ರೀಡೆ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ಅರಿವು ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ 10,000 ಭಾರತ್ ಜೋಡೋ ಯುವ ಕ್ಲಬ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಕರ್ನಾಟಕದ ಯುವ ನಾಯಕತ್ವ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಈ ಕ್ಲಬ್‌ಗಳ ಪ್ರಮುಖ ಉದ್ದೇಶವಾಗಿದೆ.ಮಪ್ರತಿ ಕ್ಲಬ್‌ಗೆ ₹10 ಲಕ್ಷದಂತೆ ವಾರ್ಷಿಕ ₹1,000 ಕೋಟಿ ಅನುದಾನ ಒದಗಿಸಲಾಗಿದೆ. ಇದೇ ವೇಳೆ ಯುವನಿಧಿ ಯೋಜನೆಯಡಿ 3.72 ಲಕ್ಷ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪದವೀಧರರಿಗೆ ₹1,154 ಕೋಟಿ ಆರ್ಥಿಕ ನೆರವು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರಾದೇಶಿಕ ಅಸಮಾನತೆ ನಿವಾರಣೆಗೆ ₹4,291 ಕೋಟಿ
ರಾಜ್ಯದ ವಿವಿಧ ಪ್ರದೇಶಗಳ ನಡುವಿನ ಅಭಿವೃದ್ಧಿ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರೊ. ಗೋವಿಂದರಾವ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸಮಿತಿಯು 236 ತಾಲೂಕುಗಳ ಸಮಗ್ರ ಅಧ್ಯಯನ ನಡೆಸಿದ್ದು, ಅದರ ಶಿಫಾರಸುಗಳ ಆಧಾರದ ಮೇಲೆ 2026–27ನೇ ಸಾಲಿನಲ್ಲಿ ₹4,291 ಕೋಟಿಯನ್ನು ಪಾರದರ್ಶಕವಾಗಿ ಬಳಸಲು ವ್ಯವಸ್ಥೆ ರೂಪಿಸಲಾಗಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲೂಕುಗಳಿಗೆ ಹೊಸ ಕೈಗಾರಿಕೆಗಳನ್ನು ಆಕರ್ಷಿಸಲು ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಹಿಂದುಳಿದ ಪ್ರದೇಶಗಳಲ್ಲಿಯೂ ಉದ್ಯೋಗ ಸೃಷ್ಟಿಯಾಗಿ ಕೈಗಾರಿಕಾ ಬೆಳವಣಿಗೆಯ ಜೊತೆಗೆ ಸಮತೋಲಿತ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರೈತರ ಬದುಕಿಗೆ ಬಲ
ಕೃಷಿ ರಾಜ್ಯದ ಆರ್ಥಿಕತೆಯ ಬೆನ್ನೆಲುಬು ಎಂದು ಬಣ್ಣಿಸಿದ ಮುಖ್ಯಮಂತ್ರಿ, ರೈತರ ಆರ್ಥಿಕ ಭದ್ರತೆಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ಬೆಳೆ ವಿಮಾ ಯೋಜನೆಯಡಿ 12.35 ಲಕ್ಷ ರೈತರಿಗೆ ₹1,300 ಕೋಟಿ ಪರಿಹಾರ ನೀಡಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದಾಖಲೆಯ 24.49 ಲಕ್ಷ ರೈತರು ಬೆಳೆ ವಿಮಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. 1.85 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ವಿಸ್ತರಿಸಲಾಗಿದ್ದು, 184 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗಿದೆ.
ಹಾಲು ಉತ್ಪಾದಕರ ಪ್ರೋತ್ಸಾಹಧನ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ 9 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ₹2,600 ಕೋಟಿ ನೇರವಾಗಿ ವರ್ಗಾಯಿಸಲಾಗಿದೆ. ರಾಜ್ಯದ ನಂದಿನಿ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಉತ್ತಮ ಮಾನ್ಯತೆ ಗಳಿಸಿದ್ದು, ಅವುಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ರೈತರ ಮನೆ ಬಾಗಿಲಿಗೇ ಪಶುವೈದ್ಯಕೀಯ ಸೇವೆ ಒದಗಿಸಲು 275 ಸಂಚಾರಿ ಪಶುವೈದ್ಯಕೀಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಹೈನುಗಾರಿಕಾ ಕ್ಷೇತ್ರದಲ್ಲಿ ಪ್ರತಿದಿನ 1.10 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈ ವರ್ಷ ಸಹಕಾರಿ ಸಂಸ್ಥೆಗಳ ಮೂಲಕ 38 ಲಕ್ಷ ರೈತರಿಗೆ ₹30,000 ಕೋಟಿ ಸಾಲ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ.
ಸಾಮಾಜಿಕ ನ್ಯಾಯಕ್ಕೆ ₹44,631 ಕೋಟಿ
ಜಾತಿ ಅಥವಾ ಧರ್ಮದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ನಿರ್ಧಾರವಾಗಬಾರದು. ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಈ ವರ್ಷ ₹44,631 ಕೋಟಿ ಮೀಸಲಿಡಲಾಗಿದೆ. ರಾಜ್ಯದ ವಸತಿ ಶಾಲೆಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99ರಷ್ಟು ಉತ್ತೀರ್ಣರಾಗಿರುವುದಕ್ಕೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2,712 ವಿದ್ಯಾರ್ಥಿ ನಿಲಯಗಳಲ್ಲಿ 2.58 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 2026–27ನೇ ಸಾಲಿನಲ್ಲಿ ಇಲಾಖೆಗೆ ಸುಮಾರು ₹4,000 ಕೋಟಿ ಅನುದಾನ ಒದಗಿಸಲಾಗಿದೆ. ಬುಡಕಟ್ಟು ಮಕ್ಕಳಿಗಾಗಿ 119 ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಶಿಕ್ಷಣದ ಅವಕಾಶ ವಿಸ್ತರಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ 8.60 ಲಕ್ಷ ವಿದ್ಯಾರ್ಥಿಗಳಿಗೆ ₹494 ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಭಾಷಣದಲ್ಲಿ ತಿಳಿಸಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರ ಪರಿಣಾಮವಾಗಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ.19ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು. ಗರ್ಭಕಂಠದ ಕ್ಯಾನ್ಸರ್ ತಡೆಗಾಗಿ ಅರ್ಹ ಬಾಲಕಿಯರಲ್ಲಿ ಶೇ.78ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
ಜಲ ಭದ್ರತೆಗೆ ₹16 ಸಾವಿರ ಕೋಟಿ
ನೀರಿಗಿಂತ ಅಮೂಲ್ಯವಾದುದು ಮತ್ತೊಂದಿಲ್ಲ. ಹೀಗಾಗಿ ಜಲ ಭದ್ರತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು. ಈ ವರ್ಷವೇ ₹16,000 ಕೋಟಿ ಮೊತ್ತದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳುತ್ತಿದ್ದು, ನವೆಂಬರ್ ವೇಳೆಗೆ ತುಮಕೂರು ಜಿಲ್ಲೆಗೆ ನೀರು ತಲುಪುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ನೀರಿನ ಕೊರತೆ ತಪ್ಪಿಸಲು ಸುತ್ತಮುತ್ತಲಿನ ಕೆರೆಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮರುಪೂರಣ ಹೆಚ್ಚಿಸುವ ಹೊಸ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕೆರೆ–ಕಟ್ಟೆಗಳನ್ನು ತುಂಬಿಸುವುದು ಮತ್ತು ಕುಡಿಯುವ ನೀರಿನ ಮೂಲಗಳನ್ನು ರಕ್ಷಿಸುವುದಕ್ಕೂ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವೇಗ
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 1,663 ಕಿ.ಮೀ. ರಾಜ್ಯ ಹೆದ್ದಾರಿ, 2,939 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು 125 ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಪ್ರಗತಿ ಪಥ ಯೋಜನೆಯಡಿ ₹5,200 ಕೋಟಿ ಹೂಡಿಕೆಯೊಂದಿಗೆ 7,100 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಪಥ ಯೋಜನೆಯಡಿ 1,150 ಕಿ.ಮೀ. ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರಿಗೆ ₹1.50 ಲಕ್ಷ ಕೋಟಿ ಮೂಲಸೌಕರ್ಯ ಹೂಡಿಕೆ
ಕರ್ನಾಟಕದ ಆರ್ಥಿಕ ಎಂಜಿನ್ ಆಗಿರುವ ಬೆಂಗಳೂರಿನ ಅಭಿವೃದ್ಧಿಗೆ ಒಟ್ಟು ₹1.50 ಲಕ್ಷ ಕೋಟಿ ಮೊತ್ತದ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಮ್ಮ ಮೆಟ್ರೋ ಮೂರನೇ ಹಂತ ಪೂರ್ಣಗೊಂಡ ನಂತರ ಬೆಂಗಳೂರಿನ ಮೆಟ್ರೋ ಜಾಲ 220 ಕಿ.ಮೀ.ಗೆ ವಿಸ್ತರಣೆಯಾಗಲಿದ್ದು, ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ₹5,000 ಕೋಟಿ ವೆಚ್ಚದ ಕಾಮಗಾರಿಗಳು ಆರಂಭಗೊಂಡಿವೆ. ಎರಡು ದಶಕಗಳಿಂದ ಬಾಕಿ ಉಳಿದಿದ್ದ ಪೆರಿಫೆರಲ್ ರಿಂಗ್ ರೋಡ್ ಯೋಜನೆಯನ್ನು ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ (BBC) ಎಂಬ ಹೊಸ ರೂಪದಲ್ಲಿ ಜಾರಿಗೆ ತರಲಾಗುತ್ತಿದ್ದು, ₹26,000 ಕೋಟಿ ವೆಚ್ಚದಲ್ಲಿ 117 ಕಿ.ಮೀ. ಉದ್ದದ ರಿಂಗ್ ರೋಡ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
BBC-1 ಅಡಿಯಲ್ಲಿ 68 ಕಿ.ಮೀ. ಉದ್ದದ 12 ಪಥದ ರಿಂಗ್ ರೋಡ್ ನಿರ್ಮಾಣವಾಗಲಿದೆ. BBC-2 ಅಡಿಯಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆ ಮೂಲಕ ನೆಲಮಂಗಲದ ಸಮೀಪ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ 44 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ನಗದು ಪರಿಹಾರದ ಜೊತೆಗೆ TDR, ಅಭಿವೃದ್ಧಿಪಡಿಸಿದ ವಸತಿ ಮತ್ತು ವಾಣಿಜ್ಯ ನಿವೇಶನ ಹಾಗೂ FAR ಸೌಲಭ್ಯಗಳನ್ನು ಒಳಗೊಂಡ ಪರಿಹಾರ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ
ಬೆಂಗಳೂರಿನ ಜನರಿಗೆ ಉತ್ತಮ ಆಡಳಿತ ಮತ್ತು ಸುರಕ್ಷತೆ ಒದಗಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ಮಹಾನಗರ ಪಾಲಿಕೆಗಳನ್ನು ರಚಿಸಲಾಗಿದೆ. ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈ ಸುಧಾರಣೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಕಮಿಷನರೇಟ್‌ಗಳಾಗಿ ಪುನರ್‌ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಗತ್ಯವಿರುವ ಪ್ರದೇಶಗಳಲ್ಲಿ ಹೊಸ ಪೊಲೀಸ್ ಠಾಣೆಗಳನ್ನೂ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
‘ಕರ್ನಾಟಕ ಮಾದರಿಯಿಂದ ‘ನವ ಕರ್ನಾಟಕ’ದತ್ತ
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಅಡಿಪಾಯ ಹಾಕಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದು, ಈ ಮಾದರಿಯನ್ನು ‘ಕರ್ನಾಟಕ ಮಾದರಿ’ ಎಂದು ಬಣ್ಣಿಸಿದರು. ಆದರೆ ಸರ್ಕಾರದ ದೃಷ್ಟಿಕೋನ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಸುರಕ್ಷಿತ, ಸಮೃದ್ಧ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕರ್ನಾಟಕವನ್ನು ನಿರ್ಮಿಸಲು ದೀರ್ಘಕಾಲೀನ ಅಭಿವೃದ್ಧಿಯ ಹೊಸ ನೀಲನಕ್ಷೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಒಂದೆಡೆ ರೈತರು, ಮಹಿಳೆಯರು, ಯುವಕರು ಮತ್ತು ದುರ್ಬಲ ವರ್ಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು; ಮತ್ತೊಂದೆಡೆ ಶಿಕ್ಷಣ, ಕೌಶಲ, AI, ಕೈಗಾರಿಕೆ, ಮೂಲಸೌಕರ್ಯ ಮತ್ತು ಹೂಡಿಕೆಯ ಮೂಲಕ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವುದು ಸರ್ಕಾರದ ಮುಂದಿನ ಹೆಜ್ಜೆಯಾಗಿದೆ.
‘ಯುವ ಕರ್ನಾಟಕ–ನವ ಭಾರತ’ ಎಂಬ ಧ್ಯೇಯದೊಂದಿಗೆ ಯುವಕರನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಿ, ತಂತ್ರಜ್ಞಾನ ಮತ್ತು ಕೌಶಲಾಧಾರಿತ ಆರ್ಥಿಕತೆಯತ್ತ ರಾಜ್ಯವನ್ನು ಕೊಂಡೊಯ್ಯುವ ಸಂಕಲ್ಪವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು. AI ಶಿಕ್ಷಣದಿಂದ ಹಿಡಿದು ಸಾರ್ವಜನಿಕ AI ವಿಶ್ವವಿದ್ಯಾಲಯದವರೆಗೆ, ಗ್ರಾಮೀಣ ರಸ್ತೆಯಿಂದ ಬೆಂಗಳೂರು ಬಿಸಿನೆಸ್ ಕಾರಿಡಾರ್‌ವರೆಗೆ, ರೈತರ ಬೆಳೆ ವಿಮೆಯಿಂದ ಸಾಮಾಜಿಕ ನ್ಯಾಯದ ಅನುದಾನದವರೆಗೆ ಹಲವು ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಭಾಷಣದಲ್ಲಿ ಮಂಡಿಸಲಾಯಿತು.
2047ರ ವೇಳೆಗೆ ₹320 ಲಕ್ಷ ಕೋಟಿ ಆರ್ಥಿಕತೆಯ ಗುರಿ ಸಾಧಿಸುವ ಮೂಲಕ ಕರ್ನಾಟಕವನ್ನು ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ರೂಪಿಸುವ ಆಶಯವನ್ನು ಮುಖ್ಯಮಂತ್ರಿ ಮತ್ತೊಮ್ಮೆ ಪ್ರತಿಪಾದಿಸಿದರು. ರಾಜ್ಯದ ಅಭಿವೃದ್ಧಿ ಕೇವಲ ಕೆಲವೇ ನಗರಗಳು ಅಥವಾ ವರ್ಗಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಭದ್ರತೆ ಮತ್ತು ಗೌರವ ದೊರೆಯುವಂತಹ ಸಮತೋಲಿತ ಕರ್ನಾಟಕ ನಿರ್ಮಾಣವೇ ಸರ್ಕಾರದ ಮುಂದಿನ ಆದ್ಯತೆ ಎಂಬ ಸಂದೇಶವನ್ನು ಅವರು ನೀಡಿದರು.