ಬೆಂಗಳೂರು: ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ಜಾರಿಯಾಗಲಿದೆ. ಬಿಎಂಟಿಸಿ ಹಾಗೂ ಮೆಟ್ರೋದಲ್ಲಿ ( BMTC and Metro) ಪ್ರಯಾಣಿಸುವವರು ಎರಡೆರಡು ಕಾರ್ಡ್‌ಗಳನ್ನಿಟ್ಟುಕೊಳ್ಳಬೇಕಿತ್ತು. ಆದರೆ ಇನ್ನು ಮುಂದೆ ಈ ಕಿರಿಕಿರಿ ನಿವಾರಣೆಯಾಗಲಿದೆ. ಬಿಎಂಟಿಸಿ ಮತ್ತು ಮೆಟ್ರೋ ಎರಡಕ್ಕೂ ಬಳಸಬಹುದಾದ ಒಂದೇ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆ ಅಧಿಕೃತವಾಗಿ ಆರಂಭವಾಗಲಿದೆ. ಪ್ರಯಾಣಿಕರು ಒಂದೇ ಸ್ಮಾರ್ಟ್ ಕಾರ್ಡ್ ಅನ್ನು ರೀ-ಚಾರ್ಜ್ ಮಾಡಿಕೊಂಡು, ಅದನ್ನೇ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ಟೈಪ್ ಮಾಡಿ ಪ್ರಯಾಣಿಸಬಹುದು.
ಈ ನೂತನ ವ್ಯವಸ್ಥೆಯಿಂದ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸಂಚಾರ ಸುಲಭವಾಗಲಿದೆ. ಬಿಎಂಟಿಸಿ ಈಗಾಗಲೇ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲು ಸಂಪೂರ್ಣ ಸನ್ನದ್ಧವಾಗಿದೆ. ತ್ವರಿತವಾಗಿ ಎಲ್ಲಾ ಡಿಪೋಗಳಿಗೆ ಅತ್ಯಾಧುನಿಕ ಟಿಕೆಟ್ ಮಿಷನ್‌ಗಳನ್ನು ವಿತರಿಸಲಾಗುವುದು. ಈ ಮಿಷನ್‌ಗಳ ಮೂಲಕ ಸ್ಮಾರ್ಟ್ ಕಾರ್ಡ್‌ಗಳನ್ನು ಸುಲಭವಾಗಿ ರೀಡ್ ಮಾಡಬಹುದಾಗಿದೆ. ಜೊತೆಗೆ, ಹೊಸ ಕಾರ್ಡ್‌ಗಳನ್ನು ಪಡೆಯಲು ಮತ್ತು ರೀಚಾರ್ಜ್ ಮಾಡಲು ಪ್ರಯಾಣಿಕರಿಗೆ ಅನುಕೂಲಕರ ಕೇಂದ್ರಗಳನ್ನೂ ಸ್ಥಾಪಿಸಲಾಗುವುದು.
ಕಿತ್ತಳೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಚುರುಕು
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ ಹೊಸಹಳ್ಳಿ- ಕಡಬಗೆರೆ ನಡುವಿನ ಕಿತ್ತಳೆ ಮಾರ್ಗಕ್ಕಾಗಿ ರಾಜ್ಯ ಸರಕಾರ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ಹೊಸಹಳ್ಳಿ - ಕೆಎಚ್‌ಬಿ ಕಾಲೊನಿ ನಿಲ್ದಾಣದವರೆಗೆ ಸ್ವಾಧೀನ ಮಾಡಿಕೊಳ್ಳಬೇಕಾದ ಸ್ವತ್ತುಗಳನ್ನು ಗುರುತಿಸಿದೆ. ನಮ್ಮ ಮೆಟ್ರೋ 3 ನೇ ಹಂತವು ಹೆಬ್ಬಾಳದ ಕೆಂಪಾಪುರ - ಜೆ.ಪಿ.ನಗರ 4ನೇ ಹಂತ (32.41 ಕಿ.ಮೀ.) ಹಾಗೂ 3 ಎ ಹೊಸಹಳ್ಳಿ- ಕಡಬಗೆರೆ ಮಾರ್ಗ (12.5 ಕಿ.ಮೀ.) ಸೇರಿ 44.6 ಕಿ.ಮೀ. ಹೊಂದಿದೆ. ಸಿವಿಲ್ ಕಾಮಗಾರಿ ಆರಂಭ ವಿಳಂಬವಾದ ಕಾರಣ ಗಡುವು ವಿಸ್ತರಿಸಲಾಗಿದೆ. ಇದೀಗ ಸರಕಾರ ಹಂತ ಹಂತವಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುತ್ತಿದೆ.
IPL matches: ಐಪಿಎಲ್ ಪ್ರಿಯರಿಗೆ ಬಿಎಂಟಿಸಿ, ನಮ್ಮ ಮೆಟ್ರೋ ಗುಡ್ ನ್ಯೂಸ್
ಮೆಟ್ರೋ 3ನೇ ಹಂತಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು 6 ಪ್ಯಾಕೇಜ್ ಹಾಗೂ 3 ಎ ಹಂತಕ್ಕಾಗಿ 2 ಪ್ಯಾಕೇಜ್‌ನಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ಇದಕ್ಕಾಗಿ ಪೂರ್ವಭಾವಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಕಾಮಾಕ್ಷಿಪಾಳ್ಯದಿಂದ ಕಡಬಗೆರೆ ಹಾಗೂ ಮುತ್ಯಾಲನಗರದಿಂದ ಕೆಂಪಾಪುರದವರೆಗಿನ ಭೂಸ್ವಾಧೀನ ಅಧಿಸೂಚನೆಗಳು ಬಾಕಿ ಉಳಿದಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.