ಬೆಂಗಳೂರು, ಜು. 15: ಇಂದು ಯಾವುದೇ ಅಗತ್ಯ ವಸ್ತು ಬೇಕೆಂದಾಗ ಆನ್‌ಲೈನ್ ಮೂಲಕವೇ ಖರೀದಿಸುತ್ತೇವೆ. ದಿನ ನಿತ್ಯ ವಸ್ತುಗಳಿಂದ ಹಿಡಿದು ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ ಹೀಗೆ ದುಬಾರಿ ವಸ್ತುಗಳನ್ನೂ ಆನ್‌ಲೈನ್ ಮೂಲಕವೇ ಖರೀದಿಸಲು ಮುಂದಾಗುತ್ತೇವೆ. ಇದೆಲ್ಲದರ ನಡುವೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ಇದೀಗ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಅಡುಗೆ ಅನಿಲ (LPG) ಸಿಲಿಂಡರ್‌ಗಳನ್ನು ತಕ್ಷಣಕ್ಕೆ ನಿಮ್ಮ ಬಾಗಿಲಿಗೆ ತಲುಪಿಸಲು ಹೊಸ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ ಸ್ವಿಗ್ಗಿ ಸಂಸ್ಥೆಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜತೆ ಕೈ ಜೋಡಿಸಿದೆ. ಈ ಸುದ್ದಿಯೂ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ದಿನಸಿ ಮತ್ತು ದಿನನಿತ್ಯದ ಅಗತ್ಯ ವಸ್ತುಗಳಿಂದ ಅಡುಗೆ ಅನಿಲದವರೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಇದೀಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಆ್ಯಪ್ ಮೂಲಕ LPG ಸಿಲಿಂಡರ್‌ಗಳನ್ನು ವಿತರಿಸಲು ಇನ್‌ಸ್ಟಾಮಾರ್ಟ್ HPCLನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ನೂತನ ಯೋಜನೆಯನ್ನು ಬೆಂಗಳೂರಿನ ಕೆಲವು ಭಾಗಗಳಲ್ಲಿ ಜುಲೈ 15ರಂದು ಆರಂಭಿಸಲಾಗಿದೆ.
ಸದ್ಯ ಈ ಸೇವೆಯನ್ನು ಪ್ರಾಯೋಗಿಕವಾಗಿ ಬೆಂಗಳೂರಿನ ಸುಬ್ರಮಣ್ಯಪುರದಲ್ಲಿ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಿಜಿ, ರೂಮ್‌ಗಳಲ್ಲಿ ಇರುವ ವಿದ್ಯಾರ್ಥಿಗಳು, ಬಾಡಿಗೆದಾರರನ್ನು ಗುರಿಯಾಗಿಸಿಕೊಂಡು ಈ ಸೌಲಭ್ಯವನ್ನು ಪರಿಚಯಿಸಲಾಗಿದೆ. ಬಳಕೆದಾರರು 10 ಕೆಜಿ ಮತ್ತು 5 ಕೆಜಿ ಸಿಲಿಂಡರ್ ಆರ್ಡರ್ ಮಾಡಬಹುದು. ಆರ್ಡರ್‌ಗಳನ್ನು HPCL ವಿತರಣಾ ವ್ಯಕ್ತಿಗಳೇ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಇದು ತೂಕದಲ್ಲಿ ಹಗುರವಾಗಿದ್ದು, ಗ್ಯಾಸ್ ಎಷ್ಟಿದೆ ಎಂಬುದನ್ನು ಹೊರಗಿನಿಂದಲೇ ನೀವು ಪರಿಶೀಲಿಸಬಹುದು.
ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು
ಈ ಸೇವೆ ಪಡೆಯಲು ಗ್ರಾಹಕರು ಮೊದಲೇ ಎಲ್‌ಪಿಜಿ ಕನೆಕ್ಷನ್ ಪಡೆಯಬೇಕು ಎನ್ನುವ ನಿಯಮವಿಲ್ಲ. ಮೊದಲ ಬಾರಿ ಆರ್ಡರ್ ಮಾಡುವ ಗ್ರಾಹಕರು ಸ್ವಿಗ್ಗಿ ಆ್ಯಪ್‌ನಲ್ಲೇ ಡಿಜಿಟಲ್ ಕೆವೈಸಿ (KYC) ಪೂರ್ಣಗೊಳಿಸಬೇಕು. ಮೊದಲ ಆರ್ಡರ್ ನಂತರ, ಮುಂದಿನ ಆರ್ಡರ್‌ಗಳನ್ನು 'ರೀಫಿಲ್' ಎಂದು ಪರಿಗನಿಸಲಾಗುತ್ತದೆ. ಆಗ ಹೊಸ ಸಿಲಿಂಡರ್ ನೀಡುವಾಗ ಹಳೆಯ ಖಾಲಿ ಸಿಲಿಂಡರ್ ತೆಗೆದುಕೊಳ್ಳಲಾಗುತ್ತದೆ.
ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖುಷಿ ವ್ಯಕ್ತಪಡಿಸುವ ಜತೆಗೆ ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಕೆವೈಸಿ ದಾಖಲೆಗಳ ಸುರಕ್ಷತೆ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಬ್ಬರು "ತುರ್ತಾಗಿ ಮ್ಯಾಗಿ ಮತ್ತು ಅದನ್ನು ಬೇಯಿಸಲು ಗ್ಯಾಸ್ ಎರಡನ್ನು ಒಂದೇ ಸಲ ಆರ್ಡರ್ ಮಾಡಬಹುದು" ಎಂದು ತಮಾಷೆ ಮಾಡಿದ್ದಾರೆ.