ದೆಹಲಿ/ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ ನೇಮಕ ಹಗರಣದ ತನಿಖೆಗೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಪ್ರಕರಣ ಸಂಬಂಧ ಎಫ್ಐಆರ್ ದಾಖಲಾದ ದಿನದಿಂದಲೂ ಸಿಐಡಿ ಅಧಿಕಾರಿಗಳು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಆದರೆ ಹೈಕೋರ್ಟ್ ಅನಿರೀಕ್ಷಿತವಾಗಿ ಎಸ್‌ಐಟಿ ರಚನೆಗೆ ಆದೇಶಿಸಿದೆ.
ಹೈಕೋರ್ಟ್ ಸೂಚಿಸಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಈ ಹಿಂದೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಎದುರಿಸಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಯ ಮೇಲಿರುವ ಆರೋಪಗಳ ಕುರಿತ ದಾಖಲೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಭ್ಯರ್ಥಿಗಳ ಪರ ವಕೀಲರು, ಸರಕಾರಕ್ಕೆ ಈ ತನಿಖೆಗೆ ಹಿಂಜರಿಕೆ ಏಕೆ? ತಮಗೆ ಬೇಕಾದ ಅಧಿಕಾರಿಗಳನ್ನೇ ನೇಮಿಸಬೇಕೆಂಬ ಉದ್ದೇಶವಿದೆಯೇ? ಅಧಿಕಾರಿಗಳ ಮೇಲೆ ಆಕ್ಷೇಪವಿದ್ದರೆ ಹೈಕೋರ್ಟ್‌ಗೆ ಹೋಗಬೇಕಿತ್ತು ಎಂದು ವಾದಿಸಿದರು.
ಅ.12ಕ್ಕೆ ಮುಂದಿನ ವಿಚಾರಣೆ
ಸರಕಾರದ ಆಕ್ಷೇಪವನ್ನು ಪರಿಗಣಿಸಿದ ನ್ಯಾಯಪೀಠ, ಅಧಿಕಾರಿಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸು ವಂತೆ ಸೂಚಿಸಿತು. ಎಸ್‌ಐಟಿ ರಚನೆಗೆ ಸರಕಾರಕ್ಕೆ ಸಮ್ಮತವಿರುವ ಇತರ ಸಮರ್ಥ ಅಧಿಕಾರಿಗಳ ಪಟ್ಟಿಯನ್ನೂ ಒದಗಿಸಲು ರಾಜ್ಯ ಸರಕಾರಕ್ಕೆ ಅವಕಾಶ ನೀಡಿತು. ಅಂತಿಮವಾಗಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು.