ಬೆಂಗಳೂರು: ಭಾರತದ ಪ್ರಾಚೀನ ಜ್ಞಾನಪರಂಪರೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿ, ದೈವಿಕ ಭಾಷೆ ಭಾಷೆ ಸಂಸ್ಕೃತದ ಶ್ರೀಮಂತ ಪರಂಪರೆಯನ್ನು ಅಜರಾಮರಗೊಳಿಸುವ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್(Governor Thawar Chand Gehlot) ಕರೆ ನೀಡಿದ್ದಾರೆ.
ಡಾ.ಮನಮೋಹನ್‌ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನ ಜ್ಯೋತಿ ಸಭಾಂಗಣ ದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ( Karnataka Sanskrit University)ದ 12 ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಗಣ್ಯರನ್ನು ಸನ್ಮಾನಿಸಿ, ಪಿ.ಎಚ್.ಡಿ ಹಾಗೂ ವಿದ್ಯಾರ್ಥಿಗಳಿಗೆ ಸ್ವರ್ಣಪದಕ ಪ್ರಧಾನ ಮಾಡಿ, ವಿವಿಯ ಕುಲಾಧಿ ಪತಿಗಳೂ ಆದ ರಾಜ್ಯಪಾಲರು ಘಟಿಕೋತ್ಸವ ಭಾಷಣ ಮಾಡಿದರು. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಮೂಲಕ ಸಂಸ್ಕೃತ ಭಾಷೆಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಆಧುನಿಕ ಯುಗ ದಲ್ಲಿ ಜ್ಞಾನಪರಂಪರೆ ಸೇತುವೆಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಸಂಸ್ಕೃತದ ಜ್ಞಾನ, ವಿಜ್ಞಾನದೊಂದಿಗೆ ಮಿಳಿತ ವಾಗಬೇಕು ಎಂದರು.
ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದು ಭಾರತದ ಆತ್ಮವಿದ್ದಂತೆ. ಹಲವು ಭಾಷೆಗಳಿಗೆ ಸಂಸ್ಕೃತ ಜನನಿಯಾಗಿದ್ದು, ತಾಯಿ ಬೇರು ರಕ್ಷಿಸಬೇಕಾಗಿದೆ. ಪರಿಸರ ಸಮಸ್ಯೆ, ನೈತಿಕ ಮೌಲ್ಯಗಳ ಕುಸಿತ ಸೇರಿದಂತೆ ಜಗತ್ತು ಹಲವು ಸಮಸ್ಯೆಗಳ ಸುಳಿಯಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿರುವ ಜ್ಞಾನದ ಮೂಲಕ ಪರಿಹಾರ ದೊರೆಯಲಿದೆ. ವಿಕಸಿತ ಭಾರತದ ಗುರಿ ಸಾಧನೆಗೆ ಯುವ ಸಮೂಹ ಕಾರ್ಯ ನಿರ್ವಹಿಸುವ ಜೊತೆಗೆ ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ರಾಜ್ಯ ಪಾಲರ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಇದನ್ನೂ ಓದಿ: Thawar Chand Gehlot: ಅಧಿವೇಶನದಲ್ಲಿ ಭಾಷಣ ಗೊಂದಲ: ರಾಷ್ಟ್ರಪತಿಗಳಿಗೆ ಪ್ರತ್ಯೇಕ ವರದಿ ನೀಡಿದ ರಾಜ್ಯಪಾಲರು
ಮುಖ್ಯ ಅತಿಥಿಯಾಗಿ ದೀಕ್ಷಾಂತ ಭಾಷಣ ಮಾಡಿದ ಸಂಸದ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್(MP and cardiologist Dr.C.N.Manjunath) ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ನೈತಿಕ ಮೌಲ್ಯ ಹಾಗೂ ಸಿದ್ಧಾಂತಗಳು ಕುಸಿಯುತ್ತಿವೆ. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.30ರಷ್ಟಿತ್ತು. ಆದರೆ ನೈತಿಕತೆ ಶೇ.100 ರಷ್ಟಿತ್ತು. ಆದರೆ ಇದೀಗ ಪ್ರಸ್ತುತ ಸಾಕ್ಷರತೆ ಪ್ರಮಾಣ ಶೇ.85 ರಷ್ಟಿದ್ದರೆ ನೈತಿಕ ಮೌಲ್ಯಗಳ ಪ್ರಮಾಣ ಶೇ.30ಕ್ಕೆ ಕುಸಿದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಜನಾಂಗ ಹೊಂದಿರುವ ಯುವ ಭಾರತ ನಮ್ಮದು. ಆದರೆ ಇತ್ತೀಚೆಗೆ ಯುವಕರಲ್ಲಿ ಕ್ಯಾನರ್, ಹೃದ್ರೋಗದಂತಹ ಮಾರಕ ರೋಗಗಳು ಕಂಡುಬರುತ್ತಿರುವುದು ಆತಂಕಕಾರಿ. ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಆತ್ಮಶ್ವಾಸ ರೂಢಿಸಿಕೊಳ್ಳಬೇಕು. ವಿಫಲತೆಯೇ ಯಶಸ್ಸಿನ ಮೆಟ್ಟಿಲು ಎಂದು ಭಾವಿಸಬೇಕು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಕೃತ ಕೇವಲ ಒಂದು ಭಾಷೆ ಅಲ್ಲ. ಅದು ನಮ್ಮ ನೈತಿಕ ಮೌಲ್ಯಗಳು, ಸಿದ್ಧಾಂತಗಳು, ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬ. ಸಂಸ್ಕೃತ ಭಾಷೆಯಲ್ಲಿ ವಿಪುಲವಾದ ಜ್ಞಾನ ಸಂಪತ್ತು ಅಡಗಿದೆ. ಸಂಸ್ಕೃತ ವಿವಿಗಳಲ್ಲಿ ಕರ್ನಾಟಕ ಸಂಸ್ಕೃತ ವಿವಿ ಮೊದಲನೆಯ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ಕನ್ನಡ ಸೇರಿದಂತೆ ಹಲವು ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಇದೆ. ಭಗವದ್ಗೀತೆಯು ಹೇಗೆ ಬದುಕಬೇಕೆಂಬುದಕ್ಕೆ ಮಾರ್ಗದರ್ಶನವಾಗುತ್ತದೆ. ವಿವಿಗಳು ಗುಣಮಟ್ಟದ ಶಿಕ್ಷಣ ನೀಡಬೇಕು. ಮಾನವೀಯ ಮೌಲ್ಯ ರೂಢಿಸಿಕೊಳ್ಳುವಂತಾಗಬೇಕು. ಪದವೀಧರರಲ್ಲಿ ಕೆಲವರು ಅಪರಾಧ, ಅಕ್ರಮದಲ್ಲಿ ಭಾಗಿಯಾಗಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಪದವಿ ಪಡೆದವರೆಲ್ಲರೂ ಜ್ಞಾನವಂತರಲ್ಲ. ಜ್ಞಾನವೇ ನಮ್ಮ ಬದುಕಿನ ಧೀಶಕ್ತಿ. ಜೀವನದಲ್ಲಿ ಏರಿಳಿತ ಸಹಜ. ಇದನ್ನು ತಾಳೆಯಿಂದ ಎದುರಿಸಬೇಕು. ಪದವಿ ಪಡೆದವರು ತಮ್ಮ ಪೋಷಕರು, ಶಿಕ್ಷಕರು, ತಾಯ್ತಾಡನ್ನು ಎಂದೂ ಮರೆಯಬಾರದು. ಕಾಣುವ ಕನಸುಗಳು ದೊಡ್ಡದಾಗಿರಬೇಕು. ಸಮಾಜ ಹಾಗೂ ರಾಷ್ಟ್ರದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಹಂಚಿದಷ್ಟು ಜ್ಞಾನ ಮತ್ತು ನಗು ಹೆಚ್ಚಾಗುತ್ತಲೇ ಇರುತ್ತದೆ. ನಂಬಿದಷ್ಟು ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ಭಾರತ ಈಗ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಮುಂದೆ ಅದು ಆರ್ಥಿಕ ಶಕ್ತಿಯಾಗಲು ನಾವೆಲ್ಲರೂ ಕೊಡುಗೆ ನೀಡೋಣ. ಇಂದು ವಿಶ್ವ ಆರೋಗ್ಯ ದಿನವಾಗಿದ್ದು, ಎಲ್ಲರಿ ಗೂ ಉತ್ತಮ ಆರೋಗ್ಯ ದೊರೆಯಲಿ ಎಂದು ಹಾರೈಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಹಲ್ಯಾ ಎಸ್. ಅವರು ಮಾತನಾಡಿ, ಪದವಿ ಕೇವಲ ಪ್ರಮಾಣಪತ್ರವಲ್ಲ, ಅದು ಸಮಾಜದಲ್ಲಿ ಬದಲಾವಣೆ ತರಬಲ್ಲ ಶಕ್ತಿಯಾಗಿದೆ. ಸಂಸ್ಕೃತ ವಿವಿಯಲ್ಲಿ ಡಿಜಿಟಲ್ ಗ್ರಂಥಾಲಯ, ತಾಂಡು ಲಿಪಿ ಸಂರಕ್ಷಣೆ, ಕೃತಕ ಬುದ್ದಿ ಮತ್ತೆ ತರಬೇತಿ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.
ಘಟಿಕೋತ್ಸವದಲ್ಲಿ ಶ್ರೀ ಭಿಕ್ಕು ಆನಂದ ಥೇರೊ, ಡಾ.ಪುಷ್ಪಾ ದೀಕ್ಷಿತ್, ಡಾ.ವ್ಯಾಸನಕೆರೆ ಪ್ರಭಂಜನಾ ಚಾರ್ಯ, ಪ್ರೊ.ತಿಂಗಪ್ಪ ಎಚ್. ಎಂ., ಪ್ರೊ.ಸುಕಾಂತ್ ಕುಮಾರ್ ಸೇನಾಪತಿ ಅವರಿಗೆ ಗೌರವ ಡಿ.ಲಿಟ್ ಪದವಿಯನ್ನು ಪ್ರದಾನ ಮಾಡಲಾಯಿತು.
ಕುಲಸಚಿವರಾದ ಪ್ರೊ. ವಿ. ಗಿರೀಶ್ ಚಂದ್ರ, ವಿಶ್ವವಿದ್ಯಾಲಯದ ಪ್ರಶಾಸನ ಸಮಿತಿ ಸದಸ್ಯರು ಹಾಗೂ ಪ್ರಶಿಕ್ಷಣ ಪರಿಷತ್ತಿನ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಪ್ರಾಧ್ಯಾಪಕರು, ಸಂಸ್ಕೃತ ವಿದ್ವಾಂಸರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ನಾನಾ ಭಾಗಗಳ ಸಂಸ್ಕೃತಾಭಿಮಾನಿಗಳು ಭಾಗವಹಿಸಿದ್ದರು.
*
ನಗದು ಬಹುಮಾನ ಹಾಗೂ ಸ್ವರ್ಣ ಪದಕಗಳನ್ನು ವಿದ್ಯಾರ್ಥಿಗಳು ಪಡೆದು ಸಂಭ್ರಮಿಸಿದರು. 2023-24 ರಲ್ಲಿ 7 ಮಂದಿ ವಿದ್ಯಾರ್ಥಿನಿಯರು ಸೇರಿ 21 ಮಂದಿ ನಗದು ಬಹುಮಾನ ಪಡೆದರು. 10 ಮಂದಿ ವಿದ್ಯಾರ್ಥಿನಿಯರು ಒಳಗೊಂಡು 26 ವಿದ್ಯಾರ್ಥಿಗಳು ಸ್ವರ್ಣ ಪದಕ ಸ್ವೀಕರಿಸಿದರು.
2024-25ರ ಸಾಲಿನಲ್ಲಿ 8 ವಿದ್ಯಾರ್ಥಿನಿಯರು ಸೇರಿ 21 ಮಂದಿ ನಗದು ಬಹುಮಾನ, 13 ವಿದ್ಯಾರ್ಥಿ ನಿಯರು ಸೇರಿ 27 ಮಂದಿ ಸ್ವರ್ಣ ಪದಕ ತನ್ನದಾಗಿಸಿಕೊಂಡರು.
6 ವಿದ್ಯಾರ್ಥಿನಿಯರು ಸೇರಿ 36 ಮಂದಿ ಪಿಎಚ್.ಡಿ ಪದವಿ ಪಡೆದಿದ್ದು,ಈ ಘಟಿಕೋತ್ಸವವು ವಿಶ್ವ ವಿದ್ಯಾಲಯದ ಶೈಕ್ಷಣಿಕ ಸಾಧನೆಗಳನ್ನು ಪ್ರತಿಬಿಂಬಿಸುವ ಮಹತ್ವದ ಸಂದರ್ಭವಾಗಿ ರೂಪು ಗೊಂಡಿತು. ಸಂಸ್ಕೃತ ವಿದ್ಯಾಭ್ಯಾಸದ ಪ್ರಗತಿಗೆ ದಿಕ್ಕು ತೋರಿಸುವ ಮಹತ್ವದ ವೇದಿಕೆಯಾಗಿದೆ.