ಬೆಂಗಳೂರು: ಹಲವು ದಿನಗಳಿಂದ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದ ಹಕ್ಕಿಜ್ವರ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನ ಹೆಸರಘಟ್ಟದ ಮತ್ಕೂರು (H5N1 Bird Flu) ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಇದೇ ತಿಂಗಳ 14 ನೇ ತಾರೀಕಿನಂದು ಹಕ್ಕಿಜ್ವರ ಧೃಡಪಟ್ಟಿದೆ ಎಂದು ತಿಳಿದು ಬಂದಿದೆ. ಎಪ್ರಿಲ್ 16 ರಂದು ರಾಜ್ಯ, ಜಿಲ್ಲಾ ಮತ್ತು ಪಿ ಹೆಚ್ ಸಿ ಆರ್ ಆರ್ ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಮುತ್ಕೂರು ಗ್ರಾಮವನ್ನು ಸೋಂಕಿತ ವಲಯ(3km ವ್ಯಾಪ್ತಿ) ಮತ್ತು ಸುತ್ತಲಿನ 10km ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ.
ಎಪ್ರಿಲ್ 15 ರಂದು 7444 ಕೋಳಿಗಳು, 14 ಸಾವಿರಕ್ಕೂ ಅಧಿಕ ಮೊಟ್ಟೆಗಳು, 2250 ಕೆಜಿ ಕೋಳಿ ಆಹಾರವನ್ನು ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಕಲ್ಲಿಂಗ್ ಮಾಡಿ ವಿಲೇವಾರಿ ಮಾಡಲಾಗಿದೆ. ಆರೋಗ್ಯ ಇಲಾಖೆ ಕಣ್ಗಾವಲು ಪ್ರಗತಿಯಲ್ಲಿದ್ದು 3 ಕಿ ಮೀ ವ್ಯಾಪ್ತಿ ವಲಯದಲ್ಲಿ ಒಟ್ಟು 3422 ಜನಸಂಖ್ಯೆಯ ಎರಡು ಗ್ರಾಮಗಳಿದ್ದು, 3-10 ಕಿ ಮೀ ವ್ಯಾಪ್ತಿಯಲ್ಲಿ ಒಟ್ಟು 22,395 ಜನಸಂಖ್ಯೆ ಇರುವ 17 ಗ್ರಾಮಗಳು ಇದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ದಿನನಿತ್ಯ ಮನೆಮನೆ ಭೇಟಿ ನೀಡಿ ಮುಂದಿನ ಹತ್ತು ದಿನಗಳ ಕಾಲ ಜ್ವರ ಕಣ್ಗಾವಲು ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಶಂಕಿತ ಪ್ರಕರಣಗಳನ್ನು ತಕ್ಷಣ ವರದಿ ಮಾಡಲು ಆಸ್ಪತ್ರೆಗಳಿಗೆ ಸೂಚಿಸಲಾಗಿದ್ದು, ಪಿಪಿಇ ಕಿಟ್, ಮಾಸ್ಕ್, ಒಸೆಲ್ಟಾಮಿವಿರ್, ವಿಟಿಎಂ ಮತ್ತು ಗಂಟಲು ಸ್ವಾಬ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇರಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಕೋಳಿ ಸಾಕಾಣೆ ಶೆಡ್ ಹಾಗೂ ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಬಿಸಿಲ ತಾಪದಲ್ಲಿ H5N1 ಹಕ್ಕಿ ಜ್ವರ ಭೀತಿ ಹೆಚ್ಚಿಸಿದೆ. ಬಿಸಿಲಿನಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.
ಹಕ್ಕಿ ಜ್ವರ ಸೋಂಕಿತ ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದೆ. ಜ್ವರ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ತೊಂದರೆ ಇದರ ಮುಖ್ಯ ಲಕ್ಷಣಗಳು. ಕೋಳಿ ಮಾಂಸ/ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ (70°C ಗಿಂತ ಹೆಚ್ಚು) ಸೇವಿಸಿ, ಹಸಿ ಮಾಂಸವನ್ನು ಮುಟ್ಟಿದ ನಂತರ ಕೈಗಳನ್ನು ತೊಳೆದು, ಸೋಂಕಿತ ಹಕ್ಕಿಗಳ ಸಂಪರ್ಕದಿಂದ ದೂರವಿದ್ದು, ಮಾಸ್ಕ್ ಧರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಿ.