ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cyber Crime: ಬೆಂಗಳೂರಿನ ಕಂಪನಿಯ ಸರ್ವರ್‌ ಹ್ಯಾಕ್‌ ಮಾಡಿ 378 ಕೋಟಿ ಕಳವು; ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ!

Bengaluru Cyber Crime ಬೆಂಗಳೂರು ನಗರದ ವೈಟ್​ಫೀಲ್ಡ್​ನ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್​ ಲಿಮಿಟೆಡ್​ನ ಸರ್ವರ್ ಹ್ಯಾಕ್ ಮಾಡಿ, ಸೈಬರ್​ ಖದೀಮರು 378 ಕೋಟಿ ರೂ. ಕಳವು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಂಪನಿಯ ನೌಕರನೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು (Cyber Crime) ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ವೈಟ್​ಫೀಲ್ಡ್​ನ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್​ ಲಿಮಿಟೆಡ್​ನ ಸರ್ವರ್ ಹ್ಯಾಕ್ ಮಾಡಿ, ಸೈಬರ್​ ಖದೀಮರು 378 ಕೋಟಿ ರೂ. ಕಳವು ಮಾಡಿದ್ದಾರೆ. ಈ ಸಂಬಂಧ ವೈಟ್​​ಫೀಲ್ಡ್ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನೆಬಿಲೊ ಟೆಕ್ನಾಲಜೀಸ್ ಕಂಪನಿ ನೌಕರ ರಾಹುಲ್ ಅಗರ್ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಹುಲ್​ನ ಲ್ಯಾಪ್​ಟಾಪ್​ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕ್ರಿಪ್ಟೊ ಕರೆನ್ಸಿ ಎಕ್ಸಚೇಂಜ್ ಮಾಡುವ ಕಂಪನಿಯಾಗಿದೆ. ಸೈಬರ್ ವಂಚಕರು ಎರಡು ಬಾರಿ ಸರ್ವರ್​ ಹ್ಯಾಕ್​ ಮಾಡಿದ್ದಾರೆ. ಮೊದಲಿಗೆ ನಸುಕಿನ ಜಾವ 2:37ಕ್ಕೆ ಕಂಪನಿಯ ಸರ್ವರ್ ಹ್ಯಾಕ್​ ಮಾಡಿ, ವ್ಯಾಲೆಟ್​ನಿಂದ​ 1 USDT ಅನ್ನು ಮತ್ತೊಂದು ವ್ಯಾಲೆಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ, ಬೆಳಗ್ಗೆ 9:40 ಮತ್ತೆ ಸರ್ವರ್​ ಹ್ಯಾಕ್​ ಮಾಡಿ, ವ್ಯಾಲೆಟ್​ನಿಂದ 44 ಮಿಲಿಯನ್ USDT (ಅಂದಾಜು 3,78,00,00,000 ರೂಪಾಯಿ) ವರ್ಗಾವಣೆ ಮಾಡಿಕೊಂಡಿದ್ದಾರೆ.

ಹಣ ಕಳುವು ಆಗುತ್ತಿದ್ದಂತೆ, ನೆಬಿಲೊ ಟೆಕ್ನಾಲಜಿಸ್ ಕಂಪನಿ ಆಂತರಿಕ ತನಿಖೆ ನಡೆಸಿತ್ತು. ತನಿಖೆ ವೇಳೆ ತನ್ನದೇ ಕಂಪನಿಯ ನೌಕರ ರಾಹುಲ್ ಅಗರ್ವಾಲ್​ ಅವರ ಲ್ಯಾಪ್​ಟ್ಯಾಪ್​ ಮೂಲಕ ಸರ್ವರ್​ ಹ್ಯಾಕ್​ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ. ರಾಹುಲ್​ ಅಗರ್ವಾಲ್​ ಅವರು ಕಂಪನಿ ನೀಡಿದ ಲ್ಯಾಪ್​ಟಾಟ್​ ಬಳಸಿಕೊಂಡು ಮತ್ತೊಂದು ಕಂಪನಿಯಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡಿದ್ದರು. ರಾಹುಲ್​ ಅಗರ್ವಾಲ್​ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆಯುತ್ತಿದ್ದರು. ಬೇರೆ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸೈಬರ್ ವಂಚಕರು, ಇವರ ಲ್ಯಾಪ್​ಟಾಪ್ ಹ್ಯಾಕ್ ಮಾಡಿ ಸರ್ವರ್​ಗೆ ಎಂಟ್ರಿಯಾಗಿ, 44 ಮಿಲಿಯನ್ ಡಾಲರ್ ದೋಚಿದ್ದಾರೆ.

ಈ ಸುದ್ದಿಯನ್ನೂ ಓದಿ | Fraud Case: ಚಾಮರಾಜನಗರ: ಉದ್ಯಮಿಗೆ 3.70 ಲಕ್ಷ ರೂ. ವಂಚಿಸಿ ಪೊಲೀಸರೇ ನಾಪತ್ತೆ!

ಒಂದೇ ಪ್ರಕರಣದಲ್ಲಿ 378 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋ ಕರೆನ್ಸಿ ಕಳುವುಗೊಂಡಿರುವ ಈ ಘಟನೆ, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ ಎನ್ನಲಾಗಿದೆ.