ಕಾಂಗ್ರೆಸ್ ವಿರುದ್ಧ ರಾಜ್ಯ ಚುನಾವಣೆ ಆಯೋಗಕ್ಕೆ ಮಿತ್ರಪಕ್ಷಗಳಿಂದ ದೂರು
ಕಾಂಗ್ರೆಸ್‌ನಿಂದಲೂ ನಿಯೋಗ ತೆರಳಿ, ಆಯೋಗಕ್ಕೆ ಮಾಹಿತಿ ನೀಡಲು ತೀರ್ಮಾನ
ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಆರಂಭಗೊಂಡು ವಾರ ಕಳೆದರೂ, ಆಡಳಿತ-ಪ್ರತಿಪಕ್ಷಗಳ ನಡುವಿನ ದೂರು-ಪ್ರತಿದೂರು ನಿಲ್ಲುವ ಹಾಗೆ ಕಾಣುತ್ತಿಲ್ಲ. ಸಾಮೂಹಿಕವಾಗಿ ಎಸ್‌ಐಆರ್ ಅರ್ಜಿ ಭರ್ತಿಗೆ ಸಂಬಂಧಿಸಿದಂತೆ ಈಗಾಗಲೇ ದೂರು ನೀಡಿದ್ದ ಬಿಜೆಪಿ-ಜೆಡಿಎಸ್ ಇದೀಗ ಜಂಟಿಯಾಗಿ ಮತ್ತೊಂದು ದೂರನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಮರು ಎಸ್‌ಐಆರ್‌ಗೆ ಆಗ್ರಹಿಸಿವೆ.
ಸೋಮವಾರ ಬೆಳಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ ಎನ್‌ಡಿಎ ಮೈತ್ರಿಕೂಟದ ನಿಯೋಗ, ರಾಜ್ಯದಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿದ್ದು, ಈಗ ನಡೆದಿರುವ ಎಸ್ ಐಆರ್ ರದ್ದುಗೊಳಿಸಿ ಹೊಸದಾಗಿ ನಡೆಸಬೇಕು. ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ಈ ಪ್ರಸ್ತಾಪವನ್ನು ಆಯೋಗ ತಿರಸ್ಕರಿಸಿದೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಸಿ.ಟಿ.ರವಿ, ಜೆಡಿಎಸ್ ಮುಖಂಡ ಭೋಜೇಗೌಡ ಸೇರಿದಂತೆ ಹಲವರು ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ದಾಖಲೆ ಸಮೇತ ದೂರು ದಾಖಲಿಸಿದರು.
ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಲ್ಲಿ ಎಸ್‌ಐಆರ್ ಸಂದರ್ಭದಲ್ಲಿ ಬಿಎಲ್ʼಓಗಳು ಮನೆಮನೆಗೆ ತೆರಳಿ ಎನ್ಯುಮರೇಷನ್ ಅರ್ಜಿಯನ್ನು ವಿತರಿಸಬೇಕು. ಆದರೆ ಆ ರೀತಿ ಮಾಡದೆ ಕಲ್ಯಾಣ ಮಂಟಪ, ಛತ್ರ, ಮಸೀದಿ, ದರ್ಗಾ, ಕೆಲ ಶಾಸಕರ ಕಚೇರಿಗಳಲ್ಲಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮಿತ್ರಪಕ್ಷಗಳು ಆಗ್ರಹಿಸಿವೆ.
ಕಾಂಗ್ರೆಸ್‌ನಿಂದಲೂ ಆಯೋಗ ಭೇಟಿ: ಈ ನಡುವೆ ಬಿಜೆಪಿ-ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಿಯೋಗವೂ ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ವಿವರಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಜತೆ ಚರ್ಚಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಲಾಗುವುದು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರ ಆರೋಪ ಶುದ್ಧ ಸುಳ್ಳು. ಮೈತ್ರಿ ನಾಯಕರೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎನ್‌ಡಿಎ ದೂರಿನಲ್ಲೇನಿದೆ?
ರಾಜ್ಯಾದ್ಯಂತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ನಿಯಮಬದ್ಧವಾಗಿ ನಡೆಸದೆ ಮನಸೋ ಇಚ್ಛೆ ನಡೆಸಲಾಗುತ್ತಿದೆ.
ಮನೆಮನೆಗೆ ತೆರಳಿ ನಮೂನೆ ಅರ್ಜಿ ಭರ್ತಿ ಮಾಡಬೇಕೆಂಬ ನಿಮಯವಿದ್ದರೂ, ಎಂದರಲ್ಲಿ ಅರ್ಜಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.
ಬಿಎಲ್ಒಗಳು ಸಮುದಾಯ ಭವನ, ಮಸೀದಿ ಮತ್ತು ತಮ್ಮದೇ ನಿವಾಸಗಳಲ್ಲಿ ಕುಳಿತು ಗಣತಿ ನಮೂನೆ ಭರ್ತಿ ಮಾಡಿಸುತ್ತಿದ್ದಾರೆ.
ಕೆಲವರು ಇದಕ್ಕಾಗಿಯೇ ಪ್ರತ್ಯೇಕ ವಾಟ್ಸ್‌ಆಪ್ ಗ್ರೂಪ್ ರಚಿಸಿಕೊಂಡಿದ್ದಾರೆ, ಇದು ಎಸ್‌ಐಆರ್ ಮಾರ್ಗಸೂಚಿಗಳ ಸ್ಪಷ್ಟವಾದ ಉಲ್ಲಂಘನೆ, ಇದು ನಿಲ್ಲಬೇಕು
ಕೂಡಲೇ ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು ಹಾಗೂ ಮನೆ-ಮನೆ ಪರಿಶೀಲನೆ ಯನ್ನು ಕಡ್ಡಾಯಗೊಳಿಸಬೇಕು.
![]()
ನಮ್ಮ ಸರಕಾರದಂತೆ ದೇಶದ ಬೇರೆ ಯಾವುದೇ ರಾಜ್ಯ ಸರಕಾರ ಎಸ್ಐಆರ್ ಪ್ರಕ್ರಿಯೆಯಲ್ಲಿ ಆಯೋಗಕ್ಕೆ ಸಹಕಾರ ನೀಡಿಲ್ಲ. ಬಿಜೆಪಿ, ಜೆಡಿಎಸ್ ಕುತಂತ್ರ ಮಾಡಿ ಬಡವರಿಗೆ, ಅಲ್ಪಸಂಖ್ಯಾ ತರಿಗೆ ತೊಂದರೆ ಮಾಡಲು ಯತ್ನಿಸುತ್ತಿದ್ದಾರೆ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
![]()
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ದಿನದಂದಲೂ ಅಕ್ರಮ ನಡೆಸಲು ಪ್ರೋತ್ಸಾಹಿಸ ಲಾಗುತ್ತಿದೆ. ಇದುವರೆಗೂ ನಡೆದಿರುವ ಅಕ್ರಮಗಳ ದಾಖಲೆಯನ್ನು ದೂರಿನೊಂದಿಗೆ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ.
- ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
![]()
ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ ಎಸ್‌ಐಆರ್ ಮಾಡಲಾಗುತ್ತಿದೆ. ಬಾಂಗ್ಲಾದೇಶದ ವಲಸಿಗರನ್ನು ಮತಪಟ್ಟಿಗೆ ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ