ಬೆಂಗಳೂರು, ಮಾ.30: ಪ್ರಶಸ್ತಿಗಳು ಸಾಧನೆಗೆ ಗೌರವ ಸಲ್ಲಿಸಲು ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ತುಂಬಲು ಇರುವುದಾಗಿದ್ದು, ಇಂದು ಹವ್ಯಕ ಮಹಾಸಭೆಯ 83 ವರ್ಷದ ಹುಟ್ಟುಹಬ್ಬದ ಆಚರಣೆಯ ಜತೆಗೆ ಸಾಧಕರ ಸಾಧನೆಯ ಸಂಭ್ರಮಾಚರಣೆಯನ್ನೂ ವಿಶೇಷ ಪ್ರಶಸ್ತಿ ಪ್ರದಾನದ ಜತೆಗೆ ಮಾಡಲಾಗುತ್ತಿದೆ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು. ಬೆಂಗಳೂರಿನ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಭಾನುವಾರ ನಡೆದ '83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ - ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ (Havyaka Special Award) ಹಾಗೂ ಹವ್ಯಕ ಪತ್ರಿಕೆಯ ವಜ್ರಮಹೋತ್ಸವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಹವ್ಯಕ' ಪತ್ರಿಕೆಯು ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರತಿ ತಿಂಗಳು ಸುಮಾರು 30,000 ಕುಟುಂಬವನ್ನು ತಲುಪುತ್ತಿದೆ. ಆ ಮೂಲಕ ಸಂಘಟನೆ ಹಾಗೂ ಸಮಾಜದ ನಡುವೆ ಕೊಂಡಿಯಾಗಿ 'ಹವ್ಯಕ' ಪತ್ರಿಕೆಯು ಸಮಾಜ ಹಾಗೂ ಸಂಘಟನೆಯ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿದೆ. ಕೆಲವು ಸಮಯ ಹವ್ಯಕ ಪತ್ರಿಕೆಯ ಸಂಪಾದಕನಾಗಿ ಸೇವೆ ಸಲ್ಲಿಸುವ ಅವಕಾಶ ನನಗೂ ಸಿಕ್ಕಿತ್ತು. ಪತ್ರಿಕೆಯ ಸಾರ್ಥಕ ಪಯಣದಲ್ಲಿ ಜತೆಯಾದ ಎಲ್ಲಾ ಸಂಪಾದಕರು ಹಾಗೂ ಸಂಚಾಲಕರು ಸಮಾಜದ ಅಭಿನಂದನೆಗೆ ಭಾಜನರು ಎಂದರು.
ಕರ್ನಾಟಕ ಸರ್ಕಾರವು ಈ ಸಾಲಿನ ಆಯವ್ಯಯ ಪತ್ರದಲ್ಲಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಿರುವುದನ್ನು ಸ್ವಾಗತಿಸಿದ ಡಾ.ಕಜೆ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಈ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ಧನ್ಯವಾದ ಸಮರ್ಪಿಸಿದರು. 2024ರ ಡಿಸೆಂಬರ್‌ನಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ರವಿಶಂಕರ್ ಕೆ. ಭಟ್ ಈ ವಿಷಯವನ್ನು ಪ್ರಸ್ತಾಪಿಸಿದರು. ಅದನ್ನು ಸಮ್ಮೇಳನದ ನಿರ್ಣಯವಾಗಿ ಅಂಗೀಕರಿಸಲಾಯಿತು. ಫೆಬ್ರವರಿಯಲ್ಲಿ ಮಹಾಸಭೆಯ ಮನವಿಯ ಮೇರೆಗೆ ವಿಶ್ವೇಶ್ವರ ಭಟ್ ಅವರು ಮುಖ್ಯಮಂತ್ರಿಗಳಿಗೆ ಈ ಕುರಿತಾಗಿ ಕೋರಿಕೆಯನ್ನು ಸಲ್ಲಿಸಿದ್ದರು. ಇದೀಗ ಸರ್ಕಾರವು ಭಾಷಾ ಅಕಾಡೆಮಿ ಸ್ಥಾಪಿಸುತ್ತಿರುವುದು ಅಭಿನಂದನೀಯವಾಗಿದ್ದು, ಭಾಷಾ ಶ್ರೀಮಂತಿಕೆಯಿಂದ ಕೂಡಿದ ವಿಶಿಷ್ಟ ಭಾಷೆ ಹವಿಗನ್ನಡವು ಸಂರಕ್ಷಿತವಾಗಲಿ ಎಂದರು.
ಹಿರಿಯ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ 'ಹವ್ಯಕ' ವಿಶೇಷ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, ಕೃಷಿಯ ದುಡಿಮೆಯ ಜತೆಗೆ ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಬದುಕನ್ನು ಕಟ್ಟಿಕೊಂಡ ಸಮಾಜ ಹವ್ಯಕ ಸಮುದಾಯ. ಹವ್ಯಕರು ಜನಸಂಖ್ಯೆಯಲ್ಲಿ ಸಣ್ಣ ಸಮುದಾಯವಾದರೂ, ಕೃಷಿ - ಯಕ್ಷಗಾನ - ಸಾಹಿತ್ಯ - ಅಡುಗೆ - ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಭಾವಶಾಲಿಯಾಗಿ ಬೆಳೆದಿರುವುದು ಗಮನಾರ್ಹವಾಗಿದ್ದು, ಬಡತನದ ನಡುವೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿ, ಬೆಳೆಸಿದ ಹೆಮ್ಮೆ ಈ ಸಮಾಜದ್ದು ಎಂದರು.
ಹವ್ಯಕ ಪತ್ರಿಕೆ ನಿರಂತರವಾಗಿ 60 ವರ್ಷಗಳಿಂದ ಪ್ರಕಟವಾಗುತ್ತಿರುವುದು ಶ್ಲಾಘನೀಯವಾಗಿದ್ದು, ಸಮುದಾಯವೊಂದರ ಧ್ವನಿಯಾಗಿ ಬೆಳೆದು ನಿಂತಿರುವುದನ್ನು ಕಾಣಬಹುದಾಗಿದೆ ಎಂದು ಪತ್ರಿಕೆಯ ಕುರಿತಾಗಿ ಶ್ಲಾಘಿಸಿದರು.
ಕರ್ಣಾಟಕ ಬ್ಯಾಂಕಿನ ಸಿಒಒ ಬಿ.ಎಸ್. ರಾಜ ಮಾತನಾಡಿ, ನಾನು ವಿದ್ಯಾಭ್ಯಾಸ ಮಾಡುವಾಗ ಹವ್ಯಕ ಮಹಾಸಭೆಯ ವಿದ್ಯಾರ್ಥಿ ವೇತನವನ್ನು ಪಡೆದಿದ್ದು, ಅದು ಆಗ ನನ್ನ ಶೈಕ್ಷಣಿಕ ಪ್ರಗತಿಗೆ ಬಲವನ್ನು ತುಂಬಿತು. ಹವ್ಯಕ ಮಹಾಸಭೆಯು ಹಲವಾರು ರೀತಿಯಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದ್ದು, ವರ್ಷಾಂತ್ಯವಾದ ಒತ್ತಡದ ನಡುವೆಯೂ ಇದು ನಮ್ಮ ಸಂಸ್ಥೆಯ ಕಾರ್ಯಕ್ರಮ ಎಂಬ ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕರ್ಣಾಟಕ ಬ್ಯಾಂಕ್ ಸದಾ ಹವ್ಯಕ ಮಹಾಸಭೆಯ ಜತೆ ಇರಲಿದೆ ಎಂದರು.
ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಬ್ರಾಹ್ಮಣ ಸಮುದಾಯದ ಮುಖಂಡ ರಾಘವೇಂದ್ರ ಭಟ್ ಮಾತನಾಡಿ, ಬೃಹತ್ ಸಮ್ಮೇಳನಗಳನ್ನು ಹೇಗೆ ಮಾಡಬೇಕು ಎಂದು ತೋರಿಸಿಕೊಟ್ಟಿದ್ದು ಹವ್ಯಕ ಸಮಾಜ. ಒಂದೆರಡು ವರ್ಷದ ಹಿಂದೆ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಸದಾ ಎಲ್ಲರಿಗೂ ಮಾದರಿಯಾಗಿದೆ. ಇಂದು ಸಂಘಟನೆಗೆ ಯುವಕರು ಬರುತ್ತಿಲ್ಲ ಎಂಬ ಕೊರಗಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಹವ್ಯಕರಲ್ಲಿ ಯುವ ಸಮೂಹ ಸಂಘಟನೆಯ ಜತೆಗೆ ಗಟ್ಟಿಯಾಗಿ ಜತೆಯಾಗಿರುವುದು ವಿಶೇಷವಾಗಿದೆ ಎಂದರು.
ನಮ್ಮ ಸಂಸ್ಕೃತಿ - ಸಂಸ್ಕಾರಗಳೇ ನಮ್ಮ ಜೀವನದ ಮೂಲಾಧಾರ. ಸಂಸ್ಕಾರಗಳನ್ನು ಆಚರಣೆಯಲ್ಲಿ ಇಟ್ಟುಕೊಳ್ಳುವ ಮೂಲಕ ನಮ್ಮ ಹಾಗೂ ಸಮಾಜದ ಉನ್ನತಿಯನ್ನು ಸಾಧಿಸಲು ಸಾಧ್ಯ ಎಂದು ಕರೆ ನೀಡಿದರು.
ಆರ್ಥಿಕ ತಜ್ಞ ಗೋಪಾಲಕೃಷ್ಣ ಹೆಗಡೆ ಹುಕ್ಲುಮಕ್ಕಿ ಮಾತನಾಡಿ, ಇದು ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮವಲ್ಲ. ನಾವಿಲ್ಲಿ ಪರಿಶ್ರಮ, ಪ್ರತಿಭೆ ಹಾಗೂ ಸೇವೆಯನ್ನು ಗೌರವಿಸುತ್ತಿದ್ದೇವೆ. ನಿಮ್ಮ ಸಾಧನೆ ಸಮಾಜದ ಹಿರಿಮೆ ಹಾಗೂ ನಿಮ್ಮ ಪ್ರಯತ್ನ ಮುಂದಿನ ತಲೆಮಾರಿಗೆ ಪ್ರೇರಣೆಯಾಗಿದ್ದು, ಸಾಧಕರು ಸಮಾಜದ ಹಿರಿಮೆಯಾಗಿದ್ದಾರೆ ಎಂದರು.
ಈ ವೇಳೆ ಸಾಧಕರಿಗೆ 2025-26 ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.
ಹವ್ಯಕ ವಿಭೂಷಣ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಸ್. ಶಂಭು ಭಟ್ ಕಡತೋಕ.
ಹವ್ಯಕ ಭೂಷಣ: ನೀರ್ನಳ್ಳಿ ಗಣಪತಿ, ಡಾ . ವೈ. ವಿ. ಕೃಷ್ಣಮೂರ್ತಿ, ಉಮೇಶ ಬಂದಗದ್ದೆ.
ಹವ್ಯಕ ಶ್ರೀ: ಪೂರ್ಣಿಮಾ ಕೆ ಭಟ್, ವೇ. ಮೂ. ಸುಚೇತನ ಭಟ್ ಘನಪಾಠಿ, ಆನಂದ ಹೆಗಡೆ ಶೀಗೇಹಳ್ಳಿ, ಕು. ಪ್ರತ್ಯೂಷ ಕುಮಾರ್.
ಹವ್ಯಕ ಸೇವಾಶ್ರೀ: ಡಾ.ಬಿ.ವಿ. ನರಹರಿ ರಾವ್, ಬೋನಂತಾಯ ಶಿವಶಂಕರ ಭಟ್, ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ.
'ಹವ್ಯಕ' ಮಾಸಪತ್ರಿಕೆಯ ವಜ್ರಮಹೋತ್ಸವ - ವಿಶೇಷ ಸಂಚಿಕೆ ಲೋಕಾರ್ಪಣೆ - ಸಂಪಾದಕರಿಗೆ ಗೌರವ ಸಮರ್ಪಣೆ
ಹವ್ಯಕ ಮಹಾಸಭೆಯ ಮುಖವಾಣಿ 'ಹವ್ಯಕ' ಪತ್ರಿಕೆಯು ನಿರಂತರವಾಗಿ 60 ವರ್ಷಗಳಿಂದ ಪ್ರಕಾಶಿತವಾಗುತ್ತಿದೆ. ಪ್ರತಿ ತಿಂಗಳು ಸುಮಾರು 30,000 ಕುಟುಂಬಗಳನ್ನು ತಲುಪುತ್ತಿದ್ದು, ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಯ ವಜ್ರಮಹೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರತರಲಾಗಿದ್ದು, ಸಂಚಿಕೆಯ ಲೋಕಾರ್ಪಣೆ ನಡೆಯಿತು.
Karnataka Budget 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಸಿಎಂ ಘೋಷಣೆ; ಹವ್ಯಕ ಮಹಾಸಭಾ, ವಿಶ್ವೇಶ್ವರ ಭಟ್ ಸ್ವಾಗತ
ಇದೇ ಸಂದರ್ಭದಲ್ಲಿ ಪತ್ರಿಕೆಯ ಮಾಜಿ ಹಾಗೂ ಪ್ರಸ್ತುತ ಸಂಪಾದಕರು ಹಾಗೂ ಸಂಚಾಲಕರಿಗೆ ಮಹಾಸಭೆಯಿಂದ ಗೌರವಿಸಲಾಯಿತು. ನಾರಾಯಣ ಭಟ್ ಹುಳೆಗಾರು, ಡಾ.ಗಿರಿಧರ ಕಜೆ, ಎನ್.ಆರ್ ಭಟ್, ಲಕ್ಷ್ಮೀಶ್ ಕಾಟುಕುಕ್ಕೆ, ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ, ಸಿಎ. ವಿ.ಕೆ ಭಟ್, ಜಿ.ಜಿ. ಹೆಗಡೆ ಹಾಗೂ ಪ್ರಸ್ತುತ ಸಂಪಾದಕ ಸಂದೇಶ ತಲಕಾಲಕೊಪ್ಪ ಉಪಸ್ಥಿತರಿದ್ದು, ಗೌರವ ಸ್ವೀಕರಿಸಿದರು. ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಜೆ ಭಟ್, ಆರ್.ಎಂ. ಹೆಗಡೆ ಬಾಳೆಸರ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿ ಪ್ರಶಾಂತ್ ಭಟ್ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಸಂಚಾಲಕರಾದ ನಾರಾಯಣ ಭಟ್ ಹುಳೆಗಾರು, ಎಂ.ಜಿ ಹೆಗಡೆ ಹಾರೂಗಾರ, ರವಿನಾರಾಯಣ ಪಟ್ಟಾಜೆ, ಹವ್ಯಕ ಪತ್ರಿಕೆಯ ಸಂಪಾದಕ ಸಂದೇಶ ತಲಕಾಲಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.