Karnataka Budget 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಸಿಎಂ ಘೋಷಣೆ; ಹವ್ಯಕ ಮಹಾಸಭಾ, ವಿಶ್ವೇಶ್ವರ ಭಟ್ ಸ್ವಾಗತ
ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮಾಡಿದ ಪ್ರಸ್ತಾವವನ್ನು ಅಖಿಲ ಹವ್ಯಕ ಮಹಾಸಭಾ, ಅದರ ಅಧ್ಯಕ್ಷ ಗಿರಿಧರ ಕಜೆ ಹಾಗೂ ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಸ್ವಾಗತಿಸಿದ್ದಾರೆ. ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿಗಳನ್ನು ಅವರು ಸಮಸ್ತ ಹವ್ಯಕರ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಕರ್ನಾಟಕ ಬಜೆಟ್ 2026 -
ಬೆಂಗಳೂರು, ಮಾರ್ಚ್ 06: ಕರ್ನಾಟಕದ ಸಾಮಾಜಿಕ ಉಪಭಾಷೆಗಳಲ್ಲಿ ಒಂದಾದ ಹವ್ಯಕ ಭಾಷೆಯನ್ನು ಉಳಿಸಿ ಬೆಳೆಸಲು ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಸಿಎಂ ಸಿದ್ದರಾಮಯ್ಯ (CM SIddaramaiah) ಅವರು 2026ರ ಬಜೆಟ್‌ನಲ್ಲಿ (Karnataka Budget 2026) ಮಾಡಿದ್ದಾರೆ. ಸಾಂಸ್ಕೃತಿಕವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡುಗಳಲ್ಲಿ ಹೆಚ್ಚಾಗಿರುವ ಹವ್ಯಕ ಭಾಷಿಕರು, ರಾಜ್ಯದ ಇತರ ಕಡೆಯೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನೂತನ ಅಕಾಡೆಮಿಯ ಮೂಲಕ ಹವ್ಯಕ ಭಾಷೆಯ ಅಬಿವೃದ್ಧಿಗೆ ಸಂಬಂಧಿಸಿದ ಕೆಲಸಗಳು ನಡೆಯಲಿವೆ.
ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮಾಡಿದ ಪ್ರಸ್ತಾವವನ್ನು ಅಖಿಲ ಹವ್ಯಕ ಮಹಾಸಭಾ, ಅದರ ಅಧ್ಯಕ್ಷ ಗಿರಿಧರ ಕಜೆ ಹಾಗೂ ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಸ್ವಾಗತಿಸಿದ್ದಾರೆ. ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿಗಳನ್ನು ಅವರು ಸಮಸ್ತ ಹವ್ಯಕರ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಹವ್ಯಕ ಮಹಾಸಭೆ ಪ್ರಕಟಣೆ:
ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ವೈಶಿಷ್ಟ್ಯಪೂರ್ಣವಾದ ಹವ್ಯಕ ಭಾಷೆಯ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ "ಹವ್ಯಕ ಭಾಷಾ ಅಕಾಡೆಮಿ" ಸ್ಥಾಪಿಸುವಂತೆ ಅಖಿಲ ಹವ್ಯಕ ಮಹಾಸಭೆಯು ಮಾಡಿದ ಮನವಿಯನ್ನು ಪರಿಗಣಿಸಿ ರಾಜ್ಯ ಸರ್ಕಾರವು "ಹವ್ಯಕ ಭಾಷಾ ಅಕಾಡೆಮಿ"ಯನ್ನು ಆಯವ್ಯಯ ಪತ್ರದಲ್ಲಿ ಘೋಷಿಸಿದೆ.
ಹವಿಗನ್ನಡದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಭಾಷಾ ಅಕಾಡೆಮಿಯನ್ನು ಘೋಷಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಹಾಗೂ ಕರ್ನಾಟಕ ಸರ್ಕಾರಕ್ಕೆ ಮಹಾಸಭೆಯು ಧನ್ಯವಾದಗಳನ್ನು ಸಮರ್ಪಿಸುತ್ತದೆ.
ಹವ್ಯಕ ಭಾಷಾ ಅಕಾಡೆಮಿಯ ಘೋಷಣೆಗೆ ಸಹಕರಿಸಿದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ಶ್ರೀನಿವಾಸ್ ಹಾಗೂ ಹಿರಿಯ ಪತ್ರಕರ್ತ ಶ್ರೀ ವಿಶ್ವೇಶ್ವರ ಭಟ್ ಸೇರಿದಂತೆ ವಿವಿಧ ಸ್ಥರಗಳಲ್ಲಿ ಸಹಕರಿಸಿದ ಎಲ್ಲರಿಗೂ ಹವ್ಯಕ ಮಹಾಸಭೆಯ ಧನ್ಯವಾದಗಳು- ಎಂದು ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ ಪ್ರಕಟಿಸಿದ್ದಾರೆ.
ಮಹತ್ವದ ನಿರ್ಧಾರ: ವಿಶ್ವೇಶ್ವರ ಭಟ್
"ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಇಂದಿನ ಶಿಷ್ಟ ಕನ್ನಡದಿದ ಭಿನ್ನವಾಗಿ ಹಳಗನ್ನಡದ ಭಾಷಾ ರೂಪಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದೆ. ಇದು ಕನ್ನಡದ ಇತರ ಉಪಭಾಷೆಗಳ ಕಳೆದುಹೋಗಿರುವ ಹಳೆ ಕನ್ನಡದ ಅನೇಕ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡಿದೆ.
ಹವ್ಯಕ ಕನ್ನಡವು ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ ಹವ್ಯಕರ ಮನೆ ಮಾತಾಗಿದೆ. ಇಂದು ಕನ್ನಡದಲ್ಲಿ ಆರು ಲಕ್ಷಕ್ಕೂ ಅಧಿಕ ಜನ ಹವ್ಯಕ ಕನ್ನಡವನ್ನು ಮಾತಾಡುತ್ತಾರೆ.
Karnataka Budget 2026: ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯಗಳ ಅಭಿವೃದ್ಧಿಗೆ ಹೊಸ ಪ್ರಾಧಿಕಾರ
ಕನ್ನಡ ಭಾಷೆ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯವಾಗಿದ್ದು, ಇದುವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿಯೂ ಕಂಡುಬರುವ ಕೆಲವು ಆದಿ-ದ್ರಾವಿಡ ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ. ಆದ್ದರಿಂದ ಹವಿಗನ್ನಡದ ಅಮೂಲಾಗ್ರ ಅಧ್ಯಯನ ಹಾಗ ಸಂರಕ್ಷಣೆಗಾಗಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆ ಅತ್ಯಗತ್ಯವಾಗಿದೆ.
ಇದನ್ನು ಮನಗಂಡು, ಈ ವಿಶಿಷ್ಟ ಮತ್ತು ಅಪರೂಪದ ಭಾಷೆಯ ಅಧ್ಯಯನ, ಅಭಿವೃದ್ಧಿ ಮತ್ತು ಸಂರಕ್ಷಣೆ ದೃಷ್ಟಿಯಿಂದ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಘೋಷಿದ್ದಾರೆ.
ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಸ್ತ ಹವ್ಯಕರ ಪರವಾಗಿ ಹಾರ್ದಿಕವಾಗಿ ಅಭಿನಂದಿಸುತ್ತೇನೆ." ಎಂದು ವಿಶ್ವೇಶ್ವರ ಭಟ್ ಬರೆದಿದ್ದಾರೆ.