ಬೆಂಗಳೂರು: ಗ್ರಾಮೀಣ ಭಾರತದ ಚಿತ್ರಣವನ್ನು ಬದಲಾಯಿಸಲು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಬೆನ್ನೆಲುಬಾಗಿ ನಿಲ್ಲಲು 'ಎಚ್‌ಸಿಎಲ್ ಫೌಂಡೇಶನ್' ತೀರ್ಮಾನಿಸಿದೆ. ಜಾಗತಿಕ ತಂತ್ರಜ್ಞಾನ ಕಂಪನಿ 'ಎಚ್‌ಸಿಎಲ್ ಟೆಕ್'ನ ಸಿಎಸ್‌ಆರ್ ವಿಭಾಗ ಇದಾಗಿದೆ. ಸಂಸ್ಥೆಯು ತನ್ನ ಪ್ರತಿಷ್ಠಿತ 'ಎಚ್‌ಸಿಎಲ್ ಟೆಕ್ ಗ್ರಾಂಟ್'ನ 12ನೇ ಆವೃತ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಎನ್‌ಜಿಒಗಳಿಂದ ಅರ್ಜಿ ಆಹ್ವಾನಿಸಿದೆ.
24 ಕೋಟಿ ರೂ. ಅನುದಾನ ವಿತರಣೆ
ಗ್ರಾಮೀಣ ಭಾಗದಲ್ಲಿ ಸುಸ್ಥಿರ ಅಭಿವೃದ್ಧಿ ತರುವ ಉದ್ದೇಶದಿಂದ ಒಟ್ಟು 24 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿ (ನೀರು, ಜೀವವೈವಿಧ್ಯ, ಆರೋಗ್ಯ ಮತ್ತು ಶಿಕ್ಷಣ) ಅತ್ಯುತ್ತಮ ಯೋಜನೆಗಳನ್ನು ರೂಪಿಸುವ ಎನ್‌ಜಿಒಗಳನ್ನು ತಜ್ಞರ ತೀರ್ಪುಗಾರರ ಮಂಡಳಿಯು ಆಯ್ಕೆ ಮಾಡುತ್ತದೆ.
ಪ್ರತಿ ವಿಭಾಗದಲ್ಲಿ ವಿಜೇತವಾಗುವ 4 ಅತ್ಯುತ್ತಮ ಎನ್‌ಜಿಒಗಳಿಗೆ ತಲಾ 5 ಕೋಟಿ ರೂಪಾಯಿ ನೀಡಲಾಗುತ್ತದೆ. ಉತ್ತಮ ಯೋಜನೆಗಳನ್ನು ಹೊಂದಿರುವ ಇತರ 8 ಎನ್‌ಜಿಒಗಳಿಗೆ ತಲಾ 50 ಲಕ್ಷ ರೂಪಾಯಿ ಅನುದಾನವನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ: HCL: ಎಚ್‌ಸಿಎಲ್ ಟಿಕ್ ಕಂಪನಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಮತ್ತು ಅರ್ಹ ಎನ್‌ಜಿಒಗಳು ತಮ್ಮ ಯೋಜನೆಗಳ ವಿವರಗಳೊಂದಿಗೆ ಅಧಿಕೃತ ವೆಬ್‌ಸೈಟ್: www.hclfoundation.org/hcltech-grant ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 5, 2026 ಕೊನೆಯ ದಿನಾಂಕವಾಗಿದೆ.
ಈ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಎಚ್‌ಸಿಎಲ್ ಫೌಂಡೇಶನ್‌ನ ನಿರ್ದೇಶಕ ರಾದ ಡಾ. ನಿಧಿ ಪುಂಧಿರ್, "ಸಮಾಜವನ್ನು ಬದಲಾಯಿಸುವಂತಹ ಅದ್ಭುತ ಪರಿಹಾರಗಳು, ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ತಳಮಟ್ಟದ ಸಂಸ್ಥೆಗಳಿಂದಲೇ (ಎನ್‌ಜಿಒ) ಹೊರ ಹೊಮ್ಮುತ್ತವೆ ಎಂಬುದು ನಮ್ಮ ನಂಬಿಕೆ. ಎಚ್‌ಸಿಎಲ್ ಟೆಕ್ ಗ್ರಾಂಟ್ ಮೂಲಕ, ಈ ಎನ್‌ಜಿಒಗಳ ವಿನೂತನ ಐಡಿಯಾಗಳಿಗೆ ಬಲ ತುಂಬಿ, ದೇಶದ ಅಭಿವೃದ್ಧಿಯಲ್ಲಿ ಪಾಲುದಾರ ರಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ" ಎಂದು ತಿಳಿಸಿದರು.
23 ಲಕ್ಷ ಜನರ ಬದುಕಿನಲ್ಲಿ ಬದಲಾವಣೆ
ಎಚ್‌ಸಿಎಲ್ ಟೆಕ್ ಗ್ರಾಂಟ್ ಬೆಂಬಲಿತ ಯೋಜನೆಗಳಿಂದ ಈವರೆಗೆ ಭಾರತದ 61,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ 23 ಲಕ್ಷ ಜನರ ಜೀವನಮಟ್ಟ ಒಂದೊಲ್ಲೊಂದು ರೀತಿಯಲ್ಲಿ ಸುಧಾರಿಸಿದೆ. ಈ ಅನುದಾನದ ನೆರವಿನಿಂದ 3 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ, 68,300 ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು 67,000 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲಾಗಿದೆ. ಸಂಸ್ಥೆಯು ಈವರೆಗೆ 203 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಈ ಯೋಜನೆಗಾಗಿ ಮೀಸಲಿಟ್ಟಿದೆ.
ಕಳೆದ ಬಾರಿಯ ವಿಜೇತರು
11ನೇ ಆವೃತ್ತಿಯಲ್ಲಿ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಮಳೆ ನೀರು ಕೊಯ್ಲು ಯೋಜನೆ ಗಾಗಿ 'ಗ್ರಾಮೀಣ್ ವಿಕಾಸ್ ವಿಜ್ಞಾನ್ ಸಮಿತಿ', ಜಾರ್ಖಂಡ್‌ನಲ್ಲಿ ಜೀವವೈವಿಧ್ಯ ಸಂರಕ್ಷಣೆಗಾಗಿ 'ಲೈವ್ ಫೌಂಡೇಶನ್', ಮಿಜೋರಾಂನಲ್ಲಿ ಆರೋಗ್ಯ ಸೇವೆಗಾಗಿ 'ಗುಡ್‌ವಿಲ್ ಫೌಂಡೇಶನ್' ಹಾಗೂ ರಾಜಸ್ಥಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 'ಮಹಿಳಾ ಜನ್ ಅಧಿಕಾರ್ ಸಮಿತಿ'ಗಳು ತಲಾ 5 ಕೋಟಿ ರೂ. ಗ್ರಾಂಟ್ ಪಡೆದುಕೊಂಡಿದ್ದವು.
ಪ್ಯಾನ್ ಇಂಡಿಯಾ ಸಿಂಪೋಸಿಯಂ
ಇದೇ ವೇಳೆ, ದೇಶ ನಿರ್ಮಾಣದಲ್ಲಿ ಸಿಎಸ್‌ಆರ್ ನಿಧಿಗಳ ಪಾತ್ರದ ಬಗ್ಗೆ ಚರ್ಚಿಸಲು, ಎನ್‌ಜಿಒಗಳು, ತಜ್ಞರು, ಸರ್ಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ 'ಎಚ್‌ಸಿಎಲ್ ಟೆಕ್ ಗ್ರಾಂಟ್ ಪ್ಯಾನ್ ಇಂಡಿಯಾ ಸಿಂಪೋಸಿಯಂ 2026' ಅನ್ನು ಸಹ ಆಯೋಜಿಸ ಲಾಗಿದೆ. ಈ ವರ್ಷದ ಕಾರ್ಯಕ್ರಮಗಳು ಭುವನೇಶ್ವರ, ಚೆನ್ನೈ, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆಯಲಿವೆ.