ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆ; ಮೆಟ್ರೋ ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರ ಪರದಾಟ

Bengaluru Rains: ಮುಂಗಾರುಪೂರ್ವ ಮಳೆ ರಾಜ್ಯಾದ್ಯಂತ ಅಬ್ಬರಿಸುತ್ತಿದ್ದು, ಗುರುವಾರ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನತೆ ಕಂಗಾಲಾಗಿದ್ದಾರೆ. ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ಸಂಚಾರರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಕಂಗಾಲಾದರು. ಬೆಂಗಳೂರು ಮೆಟ್ರೋ ರೈಲು ನಿಗಮ ವ್ಯಾಪ್ತಿಯ ಹಸಿರು ಮತ್ತು ನೇರಳೆ ಸೇರಿಎಲ್ಲ ಪ್ರಮುಖ ಮೆಟ್ರೋ ಮಾರ್ಗಗಳ ರೈಲು ಸೇವೆಗಳಲ್ಲಿ ವಿಳಂಬ ಉಂಟಾಯಿತು.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 21: ಮುಂಗಾರುಪೂರ್ವ ಮಳೆ ರಾಜ್ಯಾದ್ಯಂತ ಅಬ್ಬರಿಸುತ್ತಿದ್ದು, ಗುರುವಾರವೂ (ಮೇ 21) ವಿವಿಧ ಕಡೆ ಭರ್ಜರಿ ವರ್ಷಧಾರೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನತೆ ಕಂಗಾಲಾಗಿದ್ದು, ವಾಹನ ಸವಾರರು ಪರದಾಡಿದರು (Bengaluru Rains). ರಸ್ತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಫಜೀತಿಯಾಗಿದೆ. ಅಲ್ಲದೆ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ (Namma Metro) ಸಂಚಾರರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಕಂಗಾಲಾದರು. ಉದ್ಯೋಗಿಗಳು, ವಿದ್ಯಾರ್ಥಿಗಳು ತಾಸುಗಟ್ಟಲೆ ಮೆಟ್ರೋ ಸ್ಟೃಷನ್‌ನಲ್ಲಿ ಕಾದು ಕಾದು ಸುಸ್ತಾದರು.

ಸಂಜೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ವ್ಯಾಪ್ತಿಯ (BMRCL) ಹಸಿರು ಮತ್ತು ನೇರಳೆ ಸೇರಿಎಲ್ಲ ಪ್ರಮುಖ ಮೆಟ್ರೋ ಮಾರ್ಗಗಳ ರೈಲು ಸೇವೆಗಳಲ್ಲಿ ವಿಳಂಬ ಉಂಟಾಯಿತು. ಈ ಬಗ್ಗೆ ಬಿಎಂಆರ್​​​​ಸಿಎಲ್ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

ಮೆಟ್ರೋ ಹೇಳಿದ್ದೇನು?

ʼʼಸಾರ್ವಜನಿಕ ಮಾಹಿತಿಗಾಗಿ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಎಲ್ಲ ಮೆಟ್ರೋ ಮಾರ್ಗಗಳ ಸೇವೆಯಲ್ಲಿ ವಿಳಂಬ ಉಂಟಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಪ್ರಯಾಣಿಕರ ಸಹಕಾರವನ್ನು ಕೋರಿದೆ. ಈ ಅನಾನುಕೂಲತೆಗೆ ವಿಷಾದಿಸುತ್ತೇವೆʼʼ ಎಂದು ಹೇಳಿದೆ.

ನಮ್ಮ ಮೆಟ್ರೋ ಎಕ್ಸ್‌ ಪೋಸ್ಟ್‌:



ವಿವಿಧೆಡೆ ನೀರು ನುಗ್ಗಿ ಅವಾಂತರ

ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ವಿಜಯನಗರ, ಶಾಂತಿನಗರ, ಲಾಲ್​ಬಾಗ್, ಕಬ್ಬನ್​ ಪಾರ್ಕ್​, ಕೆ.ಆರ್.ಮಾರ್ಕೆಟ್, ಜಯನಗರ, ರಾಜಾಜಿನಗರ, ವಸಂತನಗರ, ವಿಧಾನಸೌಧ, ಮೈಸೂರು ರಸ್ತೆ, ಮಾಗಡಿ ರಸ್ತೆ, ಬಸವೇಶ್ವರನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ವಿಲ್ಸನ್ ​ಗಾರ್ಡನ್, ಮೆಜೆಸ್ಟಿಕ್​ ಸುತ್ತಮುತ್ತ, ಆಲಿಕಲ್ಲು ಸಹಿತ ಮಳೆ ಸುರಿಯಿತು.

ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ; ಹಲವೆಡೆ ಧರೆಗುರುಳಿದ ಮರಗಳು

ಭಾರಿ ಗಾಳಿ ಮಳೆಯಿಂದಾಗಿ ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಬಳಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡರೆ, ಇಂದಿರಾನಗರದಲ್ಲೂ ಮರ ನೇರವಾಗಿ ಕಾರಿನ ಮೇಲೆ ಉರುಳಿದೆ.

ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್‌ ಜಾಲದಲ್ಲಿ ಸಿಲುಕಿಕೊಂಡು ಪರದಾಡಿದರು. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ರಸ್ತೆ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೆ ವಾಹನ ದಟ್ಟಣೆ ಉಂಟಾಯಿತು.

ರಾತ್ರಿಯಿಡೀ ಧಾರಾಕಾರ ಮಳೆ, ತತ್ತರಿಸಿದ ಬೆಂಗಳೂರು, ಕೆರೆಗಳಾದ ರಸ್ತೆಗಳು

ನಾಳೆಯೂ ಸುರಿಯಲಿದೆ ಮಳೆ

ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜತೆಗೆ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಶುಕ್ರವಾರ ಬೆಂಗಳೂರಿನಲ್ಲಿ ಮಧ್ಯಾಹ್ನ/ಸಂಜೆ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಜತೆಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author