ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೈಕಮಾಂಡ್‌ ಅಲಕ್ಷ್ಯ: ಹಳಿ ತಪ್ಪಿದ ಆಡಳಿತ

ಅದರಲ್ಲೂ ವಿಶೇಷವಾಗಿ ಹೈಕಮಾಂಡ್ ನಾಯಕರು, ಸಂಪುಟ ರಚನೆ, ವಿಸ್ತರಣೆ ಹಾಗೂ ಖಾತೆಗಳ ಹಂಚಿಕೆ ವಿಚಾರದಲ್ಲಿ ಸ್ಟ್ರಾಂಗ್ ಎಂದು ತೋರಿಸಲು ಅನುಸರಿಸಿದ ವಿಳಂಬ ನೀತಿಯಿಂದ ಪಕ್ಷದ ವರ್ಚಸ್ಸಿಗೆ ಮತ್ತು ಆಡಳಿತ ಯಂತ್ರಕ್ಕೆ ಸಾಕಷ್ಟು ಹಾನಿಯಾಗಿದ್ದು ಇದನ್ನು ಸರಿಪಡಿಸಲು ಸದ್ಯಕ್ಕೆ ಸಾಧ್ಯವೂ ಇಲ್ಲ, ಅದಕ್ಕೆ ಸಮಯವೂ ಇಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ದೆಹಲಿ ನಾಯಕರಿಂದ ಸಿಎಂ ಹೈರಾಣು

ನಾಯಕರ ಮುಸುಕಿನ ಗುದ್ದಾಟ

ಆಕಾಂಕ್ಷಿಗಳ ಸಂಕಟ

ರಾಜ್ಯ ಸರಕಾರದ ನಾಯಕತ್ವ ಬದಲಾವಣೆ ನಂತರ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ತೀರಾ ಹೈರಾಣಾಗಿದ್ದು, ಸದ್ಯಕ್ಕೆ ನೆಮ್ಮದಿ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ದೆಹಲಿ ಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ನಡೆ ಮತ್ತು ನಿರ್ಧಾರಗಳನ್ನು ತಂದ ತಾಪತ್ರಯಗಳಿಂದ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ನಾಯಕರು ತೀರಾ ಬೇಸತ್ತಿದ್ದು, ನಗುತ್ತಿದ್ದ ಪ್ರತಿಪಕ್ಷಗಳ ಮುಂದೆ ಎಡವಿ ಬಿದ್ದಂತಾಗಿದೆ, ಅಂದರೆ ಹೈಕಮಾಂಡ್ ಮಾಡಿರುವ ಹತ್ತು ಹಲವು ಯಡವಟ್ಟುಗಳಿಂದ ರಾಜ್ಯ ಕಾಂಗ್ರೆಸ್ ನಾಯಕರು ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ, ರಾಜ್ಯ ನಾಯಕರಲ್ಲೇ ಪರಸ್ಪರ ವಿರೋಧಗಳನ್ನು ಎದುರಿಸುವ ಸನ್ನಿವೇಶನ ನಿರ್ಮಾಣವಾಗಿದೆ.

ಅದರಲ್ಲೂ ವಿಶೇಷವಾಗಿ ಹೈಕಮಾಂಡ್ ನಾಯಕರು, ಸಂಪುಟ ರಚನೆ, ವಿಸ್ತರಣೆ ಹಾಗೂ ಖಾತೆಗಳ ಹಂಚಿಕೆ ವಿಚಾರದಲ್ಲಿ ಸ್ಟ್ರಾಂಗ್ ಎಂದು ತೋರಿಸಲು ಅನುಸರಿಸಿದ ವಿಳಂಬ ನೀತಿಯಿಂದ ಪಕ್ಷದ ವರ್ಚಸ್ಸಿಗೆ ಮತ್ತು ಆಡಳಿತ ಯಂತ್ರಕ್ಕೆ ಸಾಕಷ್ಟು ಹಾನಿಯಾಗಿದ್ದು ಇದನ್ನು ಸರಿಪ ಡಿಸಲು ಸದ್ಯಕ್ಕೆ ಸಾಧ್ಯವೂ ಇಲ್ಲ, ಅದಕ್ಕೆ ಸಮಯವೂ ಇಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ಹೊಸ ನಾಯಕತ್ವದೊಂದಿಗೆ ಆಡಳಿತ ಆರಂಭಿಸಿದ ಕಾಂಗ್ರೆಸ್ ಸರಕಾರ, ಅಧಿಕಾರ ಸ್ವೀಕರಿಸಿ ಮೂರು ತಿಂಗಳು ಸಮೀಪಿಸುತ್ತಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ನಾಯಕರು ದೆಹಲಿ ಮತ್ತು ಕರ್ನಾಟಕದ ಮಧ್ಯೆ ಓಡಾಟ ನಡೆಸಿರುವ ಏದುಸಿರೇ ಇನ್ನೂ ಕಡಿಮೆ ಯಾಗಿಲ್ಲ ಎನ್ನುವಂತಾಗಿದೆ.

ಇದನ್ನೂ ಓದಿ: CM DK Shivakumar: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಅಂದರೆ ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ನಾಯಕತ್ವ ಬದಲಾವಣೆ, ಸಂಪುಟ ರಚನೆ ನಂತರ ಸಂಪುಟ ವಿಸ್ತರಣೆ, ಇದೀಗ ಖಾತೆಗಳ ಹಂಚಿಕೆ... ಹೀಗೆ ನಾಯತ್ವದ ಬದಲಾವಣೆ ನಂತರ ಒಂದಲ್ಲ ಒಂದು ವಿಚಾರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ನಾಯಕರು ದೆಹಲಿ ದಂಡಯಾತ್ರೆ ನಡೆಸುತ್ತಲೇ ಇದ್ದು, ಇನ್ನೂ ಪೂರ್ಣ ಪ್ರಮಾಣದ ಆಡಳಿತವನ್ನು ಆಡಳಿತ ಯಂತ್ರದ ಹಳಿಗೆ ತರಲಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಇದರಿಂದ 19 ಹೊಸ ಸಚಿವರು ಖಾತೆ ತಿಳಿಯದೆ, ಗೊಂದಲಕ್ಕೀಡಾಗದ್ದರೆ, ಮುಖ್ಯಮಂತ್ರಿಗಳು ಹೈಕಮಾಂಡ್ ಮಾಡಿರುವ ಯಡವಟ್ಟುಗಳನ್ನು ಸರಿಪಡಿಸಲು ಪರದಾಡುವಂತಾಗಿದೆ. ಹೀಗಾಗಿ ಮುಖ್ಯಮಂತ್ರಿ ಅವರೀಗ ಇತ್ತ ಸಚಿವ ಸ್ಥಾನ ವಂಚಿತರನ್ನು ಸಮಾಧಾನಿಸುವುದೋ ಅಥವಾ ಹೈಕಮಾಂಡ್ ಯಡವಟ್ಟಿನಿಂದ ಮಂತ್ರಿಸ್ಥಾನ ಪಡೆದವರನ್ನು ರಾಜೀನಾಮೆ ಕೊಡಿಸವುದೋ ಎನ್ನುವುದರಲ್ಲೇ 10 ದಿನ ಕಳೆದಿದ್ದಾರೆ.

ಮೇಲ್ನೋಟಕ್ಕೆ ಇದು ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ನಡುವಿನ ಮುನಿಸು ಕಾರಣ ಎನ್ನುವಂತೆ ಕಂಡರೂ ವಾಸ್ತವದಲ್ಲಿ ಹೈಕಮಾಂಡ್ ಮಾಡಿರುವ ಯಡಮಟ್ಟಿನ ನಿರ್ಧಾರಗಳೇ ಕಾರಣ ಎನ್ನಲಾಗಿದೆ, ಅಂದರೆ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ನಾಯಕರ ಬೇಡಿಕೆಗಳಿಗೆ ದೆಹಲಿ ಯ ನಾಯಕರು ಸರಿಯಾಗಿ ಮತ್ತು ಸರಿಯಾದ ಸಮಯಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ಇಷ್ಟೆಲ್ಲಾ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

RG_Kharge_Venu

ಅಧಿವೇಶನ ನಂತರ ಆತಂಕ ಶುರು ಅಧಿವೇಶನಕ್ಕೆ ಮುನ್ನವೇ ಸಭಾಪತಿ ರಾಜೀನಾಮೆ, ಉಪ ಸಭಾಪತಿ, ಉಪ ಸಭಾಧ್ಯಕ್ಷರ ಘೋಷಣೆಯಂಥ ಅಸಂಪ್ರದಾಯಕ ನಡೆಗಳನ್ನು ಅನುಸರಿಸಿ ಟೀಕೆಗೆ ಗುರಿಯಾಗಿದ್ದು, ಇತ್ತ ತನ್ನೊಳಗಿನ ಮಾಜಿ ಸಚಿವರು, ಶಾಸಕರ ಅಸಮಾಧಾನ ಹಾಗೂ ನೂತನ ಸಚಿವರ ಖಾತೆ ರಗಳೆಗಳಿಂದ ಕಾಂಗ್ರೆಸ್ ಹೊಸ ನಾಯಕತ್ವದ ಆಡಳಿತ ಸುಸ್ತಾಗಿ ಹೋಗಿದೆ. ಇದರ ಮಧ್ಯೆ ತಮಿಳುನಾಡಿಗೆ ಕಾವೇರಿಯಿಂದ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿರುವುದು, ಬಿಡದಿ ಯೋಜನೆ ವಿರುದ್ಧ ಹೋರಾಟಗಳು, ಬೆಂಗಳೂರಿನಲ್ಲಿ ರಸ್ತೆಗಳ ದುರಾವಸ್ಥೆ, ಗುಂಡಿಗಳು, ಫುಟ್‌ಪಾತ್ ತೆರವು, ಖಾಲಿ ನಿವೇಶನಗಳಿಗೆ ತೆರಿಗೆ, ಬರ ಪರಿಹಾರ ಕೈಗೊಳ್ಳದಿರುವುದು ಸೇರಿದಂತೆ ಹತ್ತುಹಲವು ವಿಚಾರಗಳು ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿದೆ.

ಇದೆಲ್ಲದ ಮಧ್ಯೆ, ವಿಧಾನಮಂಡಲ ಅಧಿವೇಶನದ ನಂತರ ಇನ್ನೂ ನಾಲ್ಕ ಸಚಿವರನ್ನು ಸಂಪುಟ ದಿಂದ ಕೈ ಬಿಡಲುಸಂಪುಟ ಪುನಾರಚನೆ ನಡೆಸುವ ಸಾಧ್ಯತೆ ಇದೆ ಎನ್ನುವ ಮುಖ್ಯಮಂತ್ರಿಗಳ ಸಂದೇಶ ಕೂಡ ಅನೇಕ ಸಚಿವರಲ್ಲಿ ಆತಂಕ ತಂದಿದೆ.

ಹೈಕಮಾಂಡ್ ಎಡವಿದ್ದು ಎಲ್ಲೆಲ್ಲಿ?

ನಾಯಕತ್ವ ಬದಲಾವಣೆ ವಿಚಾರದಲ್ಲಿ ಹಾಲಿ ಮತ್ತು ಮಾಜಿಗಳನ್ನು ಒಟ್ಟಿಗೆ ಸೇರಿಸಿ ಚರ್ಚಿಸಿ ಅಧಿಕಾರ ಹಸ್ತಾಂತರ ಸುಗಮಗೊಳಿಸದಿರುವುದು. ಸಂಪುಟ ರಚನೆ ಸಂದರ್ಭದಲ್ಲೇ ಸಂಪುಟಕ್ಕೆ ಬರೀ ಹಳೇ ಸಚಿವರನ್ನೇ ತುಂಬಿಕೊಂಡಿದ್ದು, ನಾಯಕತ್ವ ಬದಲಾವಣೆಯಲ್ಲಿ ಕೆಲವೇ ಮಂದಿಗೆ ಸಂಪುಟದಲ್ಲಿ ಅವಕಾಶ ನೀಡಿ ಉಳಿದ ಅರ್ಹರನ್ನು ದೂರ ಇಟ್ಟಿದ್ದು, ಸಂಪುಟ ರಚನೆ ನಂತರ ವಿಸ್ತರಣೆಗೆ 2 ತಿಂಗಳ ಕಾಲ ಅನಗತ್ಯ ವಿಳಂಬ ಮಾಡಿದ್ದು, ಆ ಮೂಲಕ ಅಸಮಾಧಾನಕ್ಕೆ ದಾರಿ ಮಾಡಿದ್ದು ಸಂಪುಟ ವಿಸ್ತರಣೆ ವೇಳೆ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿ ಯಾರಿಗೆ ಮಂತ್ರಿ ನೀಡಬೇಕೆಂದು ಚರ್ಚಿಸದೆ ವಾಪಸ್ ಕಳುಹಿಸಿದ್ದು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡುವ ಮುನ್ನ ಅವರ ಕಾರ್ಯವೈಖರಿಯನ್ನು ಮೌಲ್ಯ ಮಾಪನ ಮಾಡಿ ನಂತರ ಅವರನ್ನು ತೆಗೆಯ ದಿರುವುದು.

ಕಾರಣವಿಲ್ಲದೆ ಹಿರಿಯ ಸಚಿವರನ್ನು ಕೈ ಬಿಟ್ಟು, ಅವರೆಲ್ಲಾ ರಾಜೀನಾಮೆ ಸಲ್ಲಿಸಿದರೆ ಅಂಗೀಕರಿಸಿ ಎನ್ನುವ ಸಂದೇಶ ರವಾನಿಸಿದ್ದು ಸಂಪುಟ ವಿಸ್ತರಣೆ ವೇಳೆ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯಲ್ಲಿ ಕೊನೆ ಕ್ಷಣದ ಬಲಾವಣೆ ಮಾಡಿದ್ದು, ಎರಡನೇ ಹಂತದ ಪ್ರಮಾಣ ವಚನ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಿಯನ್ನು ಅಲಕ್ಷ್ಯ ಮಾಡಿದ್ದು ಇದೆಲ್ಲಕಿಂತ ಮುಖ್ಯವಾಗಿ 19 ಸಚಿವರು ಪ್ರಮಾಣ ವಚನ ಪಡೆದು 9 ದಿನಗಳಾದರೂ ಖಾತೆ ಹಂಚಿಕೆ ಮಾಡದಿರು ವುದು.