ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census‌: ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌; ಜಾತಿ ಗಣತಿ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

High Court: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತ ವಿಚಾರಣೆ ನಡೆಸಿದ ಹೈಕೋರ್ಟ್‌ ಗುರುವಾರ (ಸೆಪ್ಟೆಂಬರ್‌ 25) ಆದೇಶ ನೀಡಿದೆ. ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

ಜಾತಿ ಗಣತಿ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

-

Ramesh B Ramesh B Sep 25, 2025 5:21 PM

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census‌) ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತ ವಿಚಾರಣೆ ನಡೆಸಿದ ಹೈಕೋರ್ಟ್‌ (High Court) ಗುರುವಾರ (ಸೆಪ್ಟೆಂಬರ್‌ 25) ಆದೇಶ ನೀಡಿದೆ. ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಜತೆಗೆ ಡಿಸೆಂಬರ್‌ 2ನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳ ಕುರಿತು 2 ದಿನ ವಾದ ಪ್ರತಿವಾದ ಆಲಿಸಿದೆ. ಇದೀಗ ಅಂತಿಮವಾಗಿ ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ.

ಹೈಕೋರ್ಟ್‌ ವಿಧಿಸಿದ ಷರತ್ತುಗಳು

  • ದತ್ತಾಂಶವನ್ನು ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು.
  • ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು.
  • ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು.
  • ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
  • ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಸೂಚಿಸಿದೆ.

''ನೀವು ಸಂಗ್ರಹಿಸಿರುವ ದತ್ತಾಂಶ ಹೇಗೆ ರಕ್ಷಿಸುತ್ತೀರಿ?'' ಎಂದು ಹೈಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ಸರ್ಕಾರದ ಇ ಆಡಳಿತ ವಿಭಾಗವೇ ದತ್ತಾಂಶವನ್ನು ರಕ್ಷಿಸುತ್ತದೆ. ಸರ್ಕಾರದ ಅಧಿಕಾರಿಗಳಷ್ಟೇ ನಿಯಂತ್ರಣ ಹೊಂದಿರುತ್ತಾರೆ'' ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Caste census‌: ಜಾತಿ ಸಮೀಕ್ಷೆಗೆ ತಡೆ ಕೋರಿ ಪಿಐಎಲ್‌; ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಪಿಐಎಲ್‌ ಸಲ್ಲಿಸಲಾಗಿತ್ತು. ಜಾತಿ ಸಮೀಕ್ಷೆಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ರಾಜ್ಯ ಒಕ್ಕಲಿಗರ ಸಂಘ, ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಕೆ.ಎನ್‌. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಸಲಾಯಿತು.

ರಾಜ್ಯ ಸರ್ಕಾದ ಪರವಾಗಿ ಈ ಹಿಂದೆ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ʼʼಮೊದಲಿಗೆ ಇದು ಜಾತಿಗಣತಿಯಲ್ಲ ಎಂದು ಹೇಳಬಯಸುತ್ತೇನೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೆ. ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆಯಾಗಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. 20 ಡಿಗ್ರಿ ಆ ಕಡೆ ಇದೆ. 30 ಡಿಗ್ರಿ ಈ ಕಡೆ ಇದೆ ಎನ್ನುವಂತಿಲ್ಲ. ಈ ಆಧಾರದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬಾರದುʼʼ ಎಂದು ಹೇಳಿದ್ದರು.

ʼʼಈಗ ತಡೆಯಾಜ್ಞೆ ನೀಡಿದರೇ ದೂರಗಾಮಿ ಪರಿಣಾಮವಾಗಲಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡುವುದಿಲ್ಲ. ಅಂಕಿ ಅಂಶ ಸಂಗ್ರಹಿಸುವುದಷ್ಟೇ ಸರ್ವೆ ಉದ್ದೇಶʼʼ ಎಂದು ವಾದಿಸಿದ್ದರು.