ನಗರ ಪ್ರದೇಶದ ಬಡಾವಣೆಗಳಿಂದ ಹಿಡಿದು ಗ್ರಾಮೀಣ ಭಾಗದ ಮನೆಮಂದಿಯವರೆಗೆ ಎಲ್ಲೆಡೆ ಕಿರಾಣಿ ಅಂಗಡಿಗಳಲ್ಲಿ ಒಂದು ನಿಶ್ಯಬ್ದ ಬದಲಾವಣೆ ಕಂಡುಬರುತ್ತಿದೆ. ಸಾಮಾನ್ಯ ಗ್ರಾಹಕರು ತಮ್ಮ ಮಾಸಿಕ ಖರ್ಚುಗಳನ್ನು ಲೆಕ್ಕ ಹಾಕುವವರಾಗಿದ್ದರೂ ಈ ವ್ಯತ್ಯಾಸ ಅವರ ಗಮನಕ್ಕೆ ಬರುವುದೇ ಇಲ್ಲ. ಬೆಂಗಳೂರು, ಮೈಸೂರು ಮತ್ತು ಕರ್ನಾಟಕದ ಹಲವು ಪಟ್ಟಣಗಳಲ್ಲಿ ಈ ಪ್ರಕಟನೆ ಸಂಸ್ಥೆಯು ನಡೆಸಿದ ಮಾರುಕಟ್ಟೆ ಸಮೀಕ್ಷೆಯಲ್ಲಿ, ಸಣ್ಣ ಪ್ಯಾಕೆಟ್‌ಗಳ ಬೆಲೆಯಲ್ಲಿನ ಆಗುತ್ತಿರುವ ಬದಲಾವಣೆಯನ್ನು ಎತ್ತಿ ತೋರಿಸಿದೆ.
ಸಾಮಾನ್ಯವಾಗಿ ಬಿಸ್ಕಟ್ ಪ್ಯಾಕ್‌ಗಳಂತೆ ರೂ.5 ಮತ್ತು ರೂ.10ಕ್ಕೆ ಮಾರಾಟವಾಗುತ್ತಿದ್ದ ಉತ್ಪನ್ನಗಳ ಬದಲಿಗೆ ಈಗ ರೂ.4.5 ಮತ್ತು ರೂ.9 ಮುದ್ರಿತ ಬೆಲೆಯಿರುವ ಪ್ಯಾಕೆಟ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಚಿಲ್ಲರೆ ಅಂಗಡಿಗಳಲ್ಲಿ ಇವುಗಳನ್ನು ಪೂರ್ಣಾಂಕಗೊಳಿಸಿ ಮತ್ತೆ ಅದೇ ರೂ.5 ಮತ್ತು ರೂ.10ಕ್ಕೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.
ಬಿಸ್ಕಟ್ ಪ್ಯಾಕ್‌ಗಳಂತೆ, ಅತಿ ಸಣ್ಣ ಮೌಲ್ಯದ ವಹಿವಾಟುಗಳಲ್ಲಿ ಗ್ರಾಹಕರು “ಐದು ರೂಪಾಯಿ ಪ್ಯಾಕೆಟ್” ಅಥವಾ “ಹತ್ತು ರೂಪಾಯಿ ಪ್ಯಾಕೆಟ್” ಎಂದು ಕೇಳುವುದೇ ಹೊರತು, ಅದರ ಮೇಲೆ ಮುದ್ರಿತವಾಗಿರುವ ಎಂಆರ್‌ಪಿ ಗಮನಿಸುವುದು ಅಪರೂಪ. ಇದರ ಪರಿಣಾಮವಾಗಿ, ಈ ಬೆಲೆ ಕಡಿತದ ಲಾಭವು ಪೂರ್ಣವಾಗಿ ಸರಪಳಿಯ (ಇಲ್ಲಿ ಕಿರಾಣಿ ಅಂಗಡಿ ಮಾಲೀಕರಿಗೆ) ಸಿಗುತ್ತಿದೆ; ಗ್ರಾಹಕರಿಗೆ ಅಲ್ಲ. ಪ್ರತಿ ಪ್ಯಾಕೆಟ್ ಮೇಲೆ ಈ ವ್ಯತ್ಯಾಸ ಅತಿ ಅಲ್ಪವೆಂದು ಕಂಡರೂ, ದಿನನಿತ್ಯ ಸಣ್ಣ ಪ್ಯಾಕೆಟ್‌ಗಳನ್ನು ಅವಲಂಬಿಸಿ ರುವ ಕುಟುಂಬಗಳಿಗೆ ಇದು ಕಾಲಾಂತರದಲ್ಲಿ ದೊಡ್ಡ ಹೊರೆಯಾಗುತ್ತದೆ.
ಇದನ್ನೂ ಓದಿ: Harish Kera Column: ಅಪರಿಚಿತ ನಗರದಲ್ಲಿ ಬಿಡುಗಡೆಯ ನಡಿಗೆ
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಇತ್ತೀಚೆಗೆ ಜಿಎಸ್‌ಟಿ ಪರಿಷ್ಕರಣೆ ಮಾಡ ಲಾಗಿತ್ತು. ಇದರ ಮುಖ್ಯ ಉದ್ದೇಶ ಬೆಲೆಗಳನ್ನು ಕಡಿಮೆ ಮಾಡಿ ನೇರವಾಗಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದಾಗಿತ್ತು. ಆದರೆ, ಮಾರುಕಟ್ಟೆಯ ಈ ಸ್ಥಿತಿಯನ್ನು ಗಮನಿಸಿ ದರೆ, ತೆರಿಗೆಯಿಂದ ಸಿಗಬೇಕಾದ ಲಾಭವನ್ನು ಚಿಲ್ಲರೆ ವ್ಯಾಪಾರಿ ಮಟ್ಟದಲ್ಲೇ ಕಬಳಿಸ ಲಾಗುತ್ತಿದೆ. ಇದರ ಪರಿಣಾಮವಾಗಿ, ಗ್ರಾಹಕರು ಅಷ್ಟೇ ಹಣವನ್ನು ಪಾವತಿಸಿದರೂ ಅವರಿಗೆ ಕಡಿಮೆ ತೂಕದ ಉತ್ಪನ್ನ ಸಿಗುವಂತಾಗಿದೆ. ಇದನ್ನು “ಸೈಲೆಂಟ್ ಇನ್‌ಫ್ಲೇಶನ್” ಎಂದು ಕರೆಯಬಹುದು.
ಅರೆ-ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿದೆ. ಅಲ್ಲಿ ಎಂಆರ್‌ಪಿ ನಿಯಮಗಳ ಬಗ್ಗೆ ಅರಿವು ಕಡಿಮೆ ಇರುತ್ತದೆ ಮತ್ತು ಕಾನೂನು ಜಾರಿ ಕೂಡ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ. ಮುದ್ರಿತ ಬೆಲೆಯಿಂತ ಹೆಚ್ಚು ದರಕ್ಕೆ ಉತ್ಪನ್ನ ಗಳನ್ನು ಮಾರಾಟ ಮಾಡುವುದು ಕಾನೂನು ಉಲ್ಲಂಘನೆಯಾದರೂ, ಹಲವೆಡೆ ಇದು ನಿರ್ಬಂಧವಿಲ್ಲದೆ ನಡೆಯುತ್ತಿದೆ. ಇದು ಕೇವಲ ಗ್ರಾಹಕರ ನಂಬಿಕೆಯನ್ನು ಮಾತ್ರ ಅಲ್ಲದೆ, ಗೃಹಬಳಕೆಯ ವಸ್ತುಗಳ ಬೆಲೆ ಇಳಿಸಲು ತಂದ ತೆರಿಗೆ ಸುಧಾರಣೆಗಳ ವಿಶ್ವಾಸಾರ್ಹತೆ ಯನ್ನೂ ಕುಂದಿಸುತ್ತದೆ.
ದೈನಂದಿನ ಬಳಕೆಯ ವಸ್ತುಗಳ ಬೆಲೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತ ದರ ವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲೇ, ಇಂತಹ ಮಾರುಕಟ್ಟೆ ಅಸಮತೋಲನಗಳು ಸವಾಲಾಗಿ ಪರಿಣಮಿಸುತ್ತಿವೆ.
ಕಟ್ಟುನಿಟ್ಟಾದ ಕಾನೂನು ಜಾರಿ ಮತ್ತು ಗ್ರಾಹಕರಲ್ಲಿ ಅರಿವು ಮೂಡಿಸದಿದ್ದರೆ, ಈ ಎಂಆರ್‌ಪಿ ಉಲ್ಲಂಘನೆ ಮತ್ತು ರಹಸ್ಯ ಹಣದುಬ್ಬರವು ಜಿಎಸ್‌ಟಿ ಸುಧಾರಣೆಗಳ ಉದ್ದೇಶ ವನ್ನೇ ಹಾಳು ಮಾಡುತ್ತದೆ. ಇದರ ಪರಿಣಾಮವಾಗಿ ಗ್ರಾಹಕರು ತಮಗೆ ತಿಳಿಯದಂತೆ ಕಡಿಮೆ ಉತ್ಪನ್ನಕ್ಕೆ ಹೆಚ್ಚಿನ ಹಣ ನೀಡುತ್ತಲೇ ಇರಬೇಕಾಗುತ್ತದೆ.