Conversion case: ಹೆಚ್ಚುತ್ತಿರುವ ಡಿಜಿಟಲ್ ಮತಾಂತರ; ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ!
Conversion case: ಕ್ರೈಸ್ತ ಮಿಷನರಿಗಳು ಹೊಸ ಪದ್ಧತಿಯಲ್ಲಿ ಮತಾಂತರವನ್ನು ಮಾಡುತ್ತಿವೆ. ಇದು ಹೊಸ ಪದ್ಧತಿಯಲ್ಲಿ ಅಮಾಯಕರನ್ನು ಮತಾಂತರ ಮಾಡುವ ಕುತಂತ್ರವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಆರೋಪಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಕ್ರೈಸ್ತ ಮಿಷನರಿಗಳು ಹೊಸ ಪದ್ಧತಿಯಲ್ಲಿ ಮತಾಂತರವನ್ನು (Conversion case) ಮಾಡುತ್ತಿವೆ. ಇದು ಹೊಸ ಪದ್ಧತಿಯಲ್ಲಿ ಅಮಾಯಕರನ್ನು ಮತಾಂತರ ಮಾಡುವ ಕುತಂತ್ರವಾಗಿದ್ದು, ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಫೆಬ್ರವರಿ 8 ರಂದು ಬೇಗೂರಿನ ಪೋಸ್ಟ್ ಆಫೀಸ್ ಬಳಿ ಇಬ್ಬರು ಕ್ರೈಸ್ತ ಮಹಿಳೆಯರು ರಸ್ತೆ ಬದಿಯಲ್ಲಿ ನಿಂತು ಅಮಾಯಕ ಹಿಂದೂಗಳಿಗೆ ನಿಮಗೆ ಏನಾದರೂ ಸಮಸ್ಯೆಗಳಿದ್ದರೆ ಈ ವೆಬ್‌ಸೈಟಿಗೆ ಭೇಟಿ ಕೊಡಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿ ವಿಸಿಟಿಂಗ್ ಕಾರ್ಡ್ ಕೊಡುತ್ತಿರುವುದು ಗಮನಕ್ಕೆ ಬಂದಿತ್ತು. ಆ ವಿಸಿಟಿಂಗ್ ಕಾರ್ಡ್ ಅಲ್ಲಿ ಜೆಡಬ್ಲ್ಯೂ ಡಾಟ್ ಆರ್ಗ್ (JW.ORG) ಎಂಬ ಕ್ರೈಸ್ತ ಮಿಷನರಿ ವೆಬ್ಸೈಟ್ ಆಗಿದ್ದು, ಅದರಲ್ಲಿ ನಮ್ಮ ಆರ್ಥಿಕ ಸಮಸ್ಯೆಗೆ ಸರಕಾರ ಪರಿಹಾರ ಕೊಡುವುದಿಲ್ಲ, ಸ್ವರ್ಗದಲ್ಲಿ ದೇವರ ಆಡಳಿತ ಇರುತ್ತದೆ, ಅಲ್ಲಿ ದೇವರ ರಾಜ್ಯ ಸ್ಥಾಪನೆಯಾಗಿದೆ, ಅದಕ್ಕೆ ಯೇಸು ನಾಯಕನಾಗಿದ್ದಾನೆ. ಅವನು ಎಲ್ಲಾ ಸುಳ್ಳು ಧರ್ಮಗಳನ್ನು ಅಂದರೆ ಸನಾತನ ಧರ್ಮವನ್ನು ನಾಶ ಮಾಡುತ್ತಾನೆ. ಅಷ್ಟೇ ಅಲ್ಲ, ಮಾನವರ ಸರಕಾರವನ್ನು ನಾಶ ಮಾಡುತ್ತಾನೆ, ದೇವರ ಮಾತನ್ನು ಕೇಳಿದವರ ನಾಶ ಮಾಡುತ್ತಾನೆ, ಯೇಸುವನ್ನು ನಂಬುವವರ ಖಾಯಿಲೆಗಳನ್ನು ಗುಣಪಡಿಸುತ್ತಾನೆ ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಯೇಸುವಿಗೆ ಮರಣ ಇರುವುದಿಲ್ಲ, ಎಲ್ಲರಿಗೂ ಕೆಲಸ ಮತ್ತು ಶಿಕ್ಷಣವನ್ನು ನೀಡುತ್ತಾನೆ. ಹಾಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಅದಕ್ಕಾಗಿ ಸ್ವರ್ಗದ ದೇವರಾದ ಏಸುಕ್ರಿಸ್ತನ ಪ್ರಾರ್ಥನೆ ಮಾಡಿ ಎಂದು ಉಲ್ಲೇಖ ಇದೆ. ಇದೊಂದು ಹೊಸ ಪದ್ಧತಿಯಲ್ಲಿ ಅಮಾಯಕರನ್ನು ಮತಾಂತರ ಮಾಡುವ ಕುತಂತ್ರವಾಗಿದ್ದು, ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡನೆ ಮಾಡುತ್ತದೆ.
ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇರುವಾಗಲೂ ಈ ರೀತಿ ಅಮಾಯಕರ ಮತಾಂತರ ಮಾಡುವುದು ಮತಾಂತರ ನಿಷೇಧ ಕಾಯಿದೆಯ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಇದಲ್ಲದೇ ಡ್ರಗ್ಸ್ & ಮ್ಯಾಜಿಕ್ ರೆಮಿಡೀಸ್ ಕಾಯ್ದೆ, IPC 420,336,337,338 ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಈ ಬಗ್ಗೆ ರಾಜ್ಯ ಸರಕಾರವು ತನಿಖೆ ಮಾಡಿ ಅಡಿಯಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Assault Case: ಹೋಟೆಲ್‌ನಲ್ಲಿ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಗ್ರಾಹಕನ ಮೇಲೆ ಹಿಂದಿ ಭಾಷಿಕರ ಹಲ್ಲೆ!