ಬೆಂಗಳೂರು: ದುಬೈಯಿಂದ ಚಿನ್ನ ಕಳ್ಳಸಾಗಣೆ ಮಾಡಿದ್ದ ಪ್ರಕರಣಕ್ಕೆ (Gold Smuggling Sase) ಸಂಬಂಧ ಬಂಧನಕ್ಕೊಳಗಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Actress Ranya Rao) ಅವರ ಮನೆಗೆ ಸಿಬಿಐ ಅದಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಟಿ ರನ್ಯಾ ರಾವ್ ಅವರ ಬೆಂಗಳೂರಿನ ನಿವಾಸದ ಮೇಲೆ ಸೋಮವಾರ (ಮಾ. 10) ಸಂಜೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 5ನೇ ಕ್ರಾಸ್‌ನಲ್ಲಿರುವ ನಂದವಾಣಿ ಮ್ಯಾನ್ಶನ್‌ನ ರನ್ಯಾ ರಾವ್ ಫ್ಲ್ಯಾಟ್‌ಗೆ ತೆರಳಿದ ಸಿಬಿಐ ಅಧಿಕಾರಿಗಳಿ ಶೋಧ ನಡೆಸಿದ್ದಾರೆ. ಸುಮಾರು 1 ಗಂಟೆಗಳ ಕಾಲ ಪರಿಶೀಲನೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
3 ದಿನಗಳಿಂದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಸ್ಟಡಿಯಲ್ಲಿದ್ದ ರನ್ಯಾ ರಾವ್ ಅವರಿಗೆ ಸೋಮವಾರ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದ್ದು, ವಿಚಾರಣೆ ಮುಂದುವರಿದಿದೆ.
ಈ ಸುದ್ದಿಯನ್ನೂ ಓದಿ: Ranya Rao: ನಟಿ ರನ್ಯಾ ರಾವ್ ಕೇಸ್‌ನಲ್ಲಿ ಉದ್ಯಮಿಯ ಪುತ್ರನೂ ಆರೆಸ್ಟ್
ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆ
ರನ್ಯಾ ರಾವ್ ಪ್ರಕರಣದ ಸಂಬಂಧ ಇದೀಗ ಆಕೆಯ ಮಲತಂದೆ ಡಿಜಿಪಿ ರಾಮಚಂದ್ರ ರಾವ್ (DGP Ramachandra Rao) ವಿರುದ್ಧವೂ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಗೃಹ ಇಲಾಖೆ ಆದೇಶ ಹೊರಡಿಸಿದೆ. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ ಎಂಬ ತನಿಖೆ ನಡೆಸಿ ವರದಿ ಸಲ್ಲಿಸಬೇಕಿದೆ.
ರನ್ಯಾ ಚಿನ್ನ ಸಾಗಾಟ ಮಾಡುವಾಗ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರಿಂದ ಈ ಬೆಳವಣಿಗೆ ನಡೆದಿದೆ. ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು? ಕೇಸ್‌ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.
ಉದ್ಯಮಿಯ ಪುತ್ರನ ಬಂಧನ
ಈ ಪ್ರಕರಣದ ಸಂಬಂಧ ಸೋಮವಾರ ಉದ್ಯಮಿಯ ಪುತ್ರನೊಬ್ಬನನ್ನೂ ಬಂಧಿಸಲಾಗಿದೆ. ರನ್ಯಾ ರಾವ್ ಮತ್ತು ಉದ್ಯಮಿಯ ಪುತ್ರ ಸ್ನೇಹಿತರಾಗಿದ್ದು, ವಿಚಾರಣೆಯ ಬಳಿಕ ಉದ್ಯಮಿಯ ಪುತ್ರನನ್ನು ಡಿಆರ್‌ಐ (DRI) ಅಧಿಕಾರಿಗಳು ಆರೆಸ್ಟ್ ಮಾಡಿದ್ದಾರೆ. ಫೈವ್ ಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗ ತರುಣ್ ರಾಜು ಬಂಧಿತ. ತರುಣ್ ರಾಜು ನಟಿ ರನ್ಯಾ ರಾವ್ ಮೂಲಕ ಅಕ್ರಮವಾಗಿ ಚಿನ್ನ ತರಿಸಿಕೊಳ್ಳುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಆರ್‌ಐ ಅಧಿಕಾರಿಗಳು ಉದ್ಯಮಿ ತರುಣ್ ರಾಜುವನ್ನು ಆರೆಸ್ಟ್ ಮಾಡಿದ್ದಾರೆ.
ಮಾ. 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) 1962ರ ಕಸ್ಟಮ್ಸ್ ಕಾಯ್ದೆಯಡಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ರನ್ಯಾ ಅವರನ್ನು ಬಂಧಿಸಿತ್ತು.