ಬೆಂಗಳೂರಿನ ಮೂರನೇ ಹಂತದ ಮೆಟ್ರೋ ಯೋಜನೆ ಯಶಸ್ವಿಯಾಗಿ ಪೂರ್ಣ ಗೊಳಿಸಲು ಮತ್ತು ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಜೈಕಾ (ಜೆಐಸಿಎ) ಸಂಸ್ಥೆಯಿಂದ ಬೃಹತ್ ಸಾಲದ ನೆರವು.
ಬೆಂಗಳೂರು: ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿರುವ ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತಕ್ಕೆ ಜಪಾನ್ ಇಂಟರ್ ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (ಜೆಐಸಿಎ) ಬೃಹತ್ ಮೊತ್ತದ ಆರ್ಥಿಕ ನೆರವು ಒದಗಿಸುವುದಾಗಿ ಘೋಷಿಸಿದೆ. ಜಪಾನ್'ನ ಅಧಿಕೃತ ಅಭಿವೃದ್ಧಿ ನೆರವು (ಓಡಿಎ) ಯೋಜನೆಯಡಿ ಒಟ್ಟು ರೂ.6100 ಕೋಟಿ ಸಾಲ ಒದಗಿಸಲು ಭಾರತ ಸರ್ಕಾರದೊಂದಿಗೆ ಜೈಕಾ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾ ಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಅಲೋಕ್ ತಿವಾರಿ( Dr.Alok Tiwari) ಮತ್ತು ಜೈಕಾ (ಜಿಐಸಿಎ) ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೈಕುಚಿ ಟಾಕುರೊ ಅವರು ಈ ಸಾಲದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಮಾಡಿದರು.
ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸುವುದು ಮತ್ತು ಪರಿಸರ ಸ್ನೇಹಿ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸು ವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 3ನೇ ಹಂತದ ಈ ಯೋಜನೆಯು ನಗರದ ವಿವಿಧ ಭಾಗಗಳನ್ನು ಸಂಪರ್ಕಿಸುವ ಮೂಲಕ ಸಾರ್ವಜನಿಕರಿಗೆ ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸಲಿದೆ. ಜೊತೆಗೆ ಹೆಚ್ಚುತ್ತಿರುವ ಮೋಟಾರು ವಾಹನಗಳಿಂದ ಉಂಟಾಗುವ ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಹವಾಮಾನ ಬದಲಾವಣೆಯನ್ನು ಶಮನಗೊಳಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್
ನಗರದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿರುವ ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಯು ಒಟ್ಟು 44.65 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಹೊಂದಿರಲಿದ್ದು, ಇದರಲ್ಲಿ 31 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯು ಹೊರ ವರ್ತುಲ ರಸ್ತೆ ವಿಭಾಗ (ಕಾರಿಡಾರ್ 3-1) ಮತ್ತು ಪಶ್ಚಿಮ ಅಭಿವೃದ್ಧಿ ಕಾರಿಡಾರ್ (ಕಾರಿಡಾರ್ 3-2) ಎರಡನ್ನೂ ಒಳಗೊಂಡಿದೆ. ಈ ನೂತನ ಮಾರ್ಗವು ವಿಮಾನ ನಿಲ್ದಾಣದ ಲೈನ್ ಮತ್ತು 6ನೇ ಮಾರ್ಗದೊಂದಿಗೆ ಸಂಪರ್ಕ ಸಾಧಿಸಲಿದೆ.
ಇದರಿಂದ ನಗರದ ಕೇಂದ್ರ ಭಾಗದ ಸುತ್ತ ಒಂದು ಸಂಪೂರ್ಣ ವೃತ್ತಾಕಾರದ ಮೆಟ್ರೋ ಜಾಲ ನಿರ್ಮಾಣವಾಗಲಿದ್ದು, ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಮತ್ತು ಪೂರ್ವ-ಪಶ್ಚಿಮ ಮಾರ್ಗಗಳ ನಡುವೆ ಸಂಚರಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕೇವಲ ಮೆಟ್ರೋ ರೈಲಿಗೆ ಸೀಮಿತವಾಗದೆ, ಈ ಯೋಜನೆಯು ಫೀಡರ್ ಬಸ್ ಗಳು, ಹಂಚಿಕೆ ಯ ಸಾರಿಗೆ ಸೇವೆಗಳು ಮತ್ತು ಡಬಲ್ ಡೆಕ್ಕರ್ ಮೇಲ್ಸೇತುವೆ ರಚನೆಗಳನ್ನು ಒಳಗೊಂಡಿರ ಲಿದೆ. ಈ ಮೂಲಕ ಸಮಗ್ರ ಸಾರಿಗೆ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊ ರೇಷನ್ ಲಿಮಿಟೆಡ್ ಹೊತ್ತುಕೊಂಡಿದೆ. ಜಪಾನ್‌ನಿಂದ ಪಡೆಯುತ್ತಿರುವ ಈ ಸಾಲವು 30 ವರ್ಷಗಳ ದೀರ್ಘಾವಧಿಯ ಮರುಪಾವತಿ ಅವಧಿಯನ್ನು ಹೊಂದಿದೆ. ಇದರಲ್ಲಿ ಆರಂಭಿಕ 10 ವರ್ಷಗಳ ಕಾಲ ರಿಯಾಯಿತಿ ಅವಧಿ (ಗ್ರೇಸ್ ಪೀರಿಯಡ್) ಇರಲಿದೆ. ಯೋಜನೆಯ ಸಾಲಕ್ಕೆ 'ಟಾರ್ಫ್(ಟಿ.ಓ.ಆರ್.ಎಫ್) + 80 ಬೇಸಿಸ್ ಪಾಯಿಂಟ್ ಗಳ ಬಡ್ಡಿ ದರ ನಿಗದಿ ಪಡಿಸಲಾಗಿದ್ದು, ಸಮಾಲೋಚನಾ ಸೇವೆಗಳಿಗೆ ಶೇ. 0.80 ರಷ್ಟು ಬಡ್ಡಿ ದರ ಅನ್ವಯ ವಾಗಲಿದೆ.
ಈ ಯೋಜನೆಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ, ವಿಶೇಷವಾಗಿ ಆರ್ಥಿಕ ಬೆಳವಣಿಗೆ, ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು ಹಾಗೂ ಹವಾಮಾನ ರಕ್ಷಣೆಯ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ನಿರೀಕ್ಷೆಯಿದೆ. ಈ ಯೋಜನೆಯು ಜನವರಿ 2032 ರ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದ್ದು, ಸಮಾಲೋಚನಾ ಸೇವೆಗಳಿಗಾಗಿ ಏಪ್ರಿಲ್ 2026 ರಲ್ಲಿ ಆಹ್ವಾನ ನೀಡುವ ನಿರೀಕ್ಷೆಯಿದೆ. ಮೇಲ್ಸೇತುವೆ ಭಾಗದ ಸಿವಿಲ್ ಕಾಮಗಾರಿಗಳ ಮೊದಲ ಖರೀದಿ ಪ್ಯಾಕೇಜ್ ಗಾಗಿ ಮೇ 2026 ರಲ್ಲಿ ಟೆಂಡರ್ ಪ್ರಕಟಿಸಲು ಯೋಜಿಸಲಾಗಿದೆ.