ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

D.K.Suresh: ಮುಂದೊಂದು ದಿನ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಡಿ.ಕೆ.ಸುರೇಶ್

D.K.Shivakumar: ʼʼಡಿ.ಕೆ.ಶಿವಕುಮಾರ್ ಮುಂದೊಂದು ದಿನ ಸಿಎಂ ಆಗುತ್ತಾರೆ ಎನ್ನುವ ಭರವಸೆ ಇದೆ. ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕೆಲವು ಭಾಗದ ಜನರು ವಿಶ್ವಾಸ ಇಟ್ಟು ಶಿವಕುಮಾರ್ ಅವರಿಗೆ ಒಂದು ಬಾರಿ ಅವಕಾಶ ಸಿಗಲಿ ಎಂದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆದರೆ ಈಗ ಸಿಎಂ ಸೀಟು ಖಾಲಿ ಇಲ್ಲ” ಎಂದು ಡಿ.ಕೆ.ಸುರೇಶ್‌ ತಿಳಿಸಿದರು.

ಡಿ.ಕೆ.ಸುರೇಶ್.

ಬೆಂಗಳೂರು: “ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಹೀಗಾಗಿ 5 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವುದರಲ್ಲಿ ತಪ್ಪೇನಿದೆ? ಪಕ್ಷದ ಶಿಸ್ತಿನ ಸಿಪಾಯಿಯಾಗಿ ಡಿ.ಕೆ. ಶಿವಕುಮಾರ್ (D.K.Shivakumar) ಹೈಕಮಾಂಡ್ ಮಾತಿಗೆ ಬದ್ಧರಾಗಿದ್ದಾರೆ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ (D.K.Suresh) ತಿಳಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಮಾತನಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬ ಕೂಗಿನ ನಡುವೆ ನಾನೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಮುಖ್ಯಮಂತ್ರಿಯಾಗಿರುವವರು ಮುಂದುವರಿಯುತ್ತೇನೆ ಎಂದು ಹೇಳಿದರೆ ಅದರಲ್ಲಿ ಅನುಮಾನ ಪಡುವಂತಹದ್ದೇನಿದೆ? ಅವರು ಕಾಂಗ್ರೆಸ್ ನಾಯಕರು, ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಅವರನ್ನು ಸಿಎಂ ಮಾಡಿದೆ. ಅವರು ಸರ್ಕಾರ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆ ಯಾಕೆ?” ಎಂದು ತಿಳಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಮುಂದೆ ಯಾವುದೇ ಆಯ್ಕೆ ಇಲ್ಲ, ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಅವರು ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದಾರೆ, ಈಗಲೂ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹಿಂದೆಯೂ ಹೇಳಿದ್ದರು. ಈಗಲೂ ಹೇಳಿದ್ದಾರೆ. ಮುಂದೆಯೂ ಹೇಳುತ್ತಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಹೈಕಮಾಂಡ್ ತೀರ್ಮಾನವನ್ನು ಪಾಲಿಸಿ ಶಿಸ್ತು ಕಾಪಾಡುವುದು ಅವರ ಕರ್ತವ್ಯ. ಹಾಗಾಗಿ ಅವರು ಕೆಲವು ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ” ಎಂದರು.

ಈ ಸುದ್ದಿಯನ್ನೂ ಓದಿ: N Ravikumar: ಸಿಎಸ್‌ ಕುರಿತು ಅವಹೇಳನ: ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ವಿರುದ್ಧ ಸಭಾಪತಿಗೆ ದೂರು

ಡಿ.ಕೆ.ಶಿವಕುಮಾರ್ ಸಿಎಂ ಆಗುವ ಭರವಸೆ ಇದೆ

ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆಯನ್ನು ನೀವು ವ್ಯಕ್ತಪಡಿಸಿದ್ದೀರಿ ಎಂದು ಕೇಳಿದಾಗ, “ಅವರು ಸಿಎಂ ಆಗುತ್ತಾರೆ ಎನ್ನುವ ಭರವಸೆ ಇಂದೂ ಇದೆ, ನಾಳೆಯೂ ಇರುತ್ತದೆ. ನಂಬಿಕೆ ಎಂಬುದು ನಮ್ಮ ಜೀವನ ನಡೆಸಲು ಪ್ರೇರಣೆ. ನಂಬಿಕೆ ಇಲ್ಲದಿದ್ದರೆ ಜೀವನ ಮಾಡುವುದೇ ಕಷ್ಟವಾಗುತ್ತದೆ. ನನಗೆ ಈಗಲೂ ಆಸೆ ಇದೆ. ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕೆಲವು ಭಾಗದ ಜನರು ವಿಶ್ವಾಸ ಇಟ್ಟು ಶಿವಕುಮಾರ್ ಅವರಿಗೆ ಒಂದು ಬಾರಿ ಅವಕಾಶ ಸಿಗಲಿ ಎಂದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆದರೆ ಈಗ ಸಿಎಂ ಸೀಟು ಖಾಲಿ ಇಲ್ಲ” ಎಂದು ತಿಳಿಸಿದರು.

ಶಿವಕುಮಾರ್ ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆಯೇ ಎಂದು ಕೇಳಿದಾಗ, “ಖಂಡಿತವಾಗಿ ಯಾವುದಾದರೂ ಒಂದು ದಿನ ಪ್ರತಿಫಲ ಸಿಗಬೇಕು. ಸಿಕ್ಕೇ ಸಿಗುತ್ತದೆ. ಅವರು ಸಿಎಂ ಆಗುತ್ತಾರೋ ಇಲ್ಲವೋ ಎಂಬ ವಿಚಾರ ತೀರ್ಮಾನ ಮಾಡಲು ನಾನು ಸಣ್ಣವನು. ಈ ವಿಚಾರವನ್ನು ವರಿಷ್ಠರು ತೀರ್ಮಾನ ಮಾಡಬೇಕು. ಸದ್ಯಕ್ಕೆ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದಲ್ಲಿ ಎರಡು ಮಾತಿಲ್ಲ” ಎಂದು ತಿಳಿಸಿದರು.

ಅಸಹಾಯಕತೆ ಅಲ್ಲ, ಪಕ್ಷಕ್ಕೆ ನೀಡುವ ಗೌರವ

ಎರಡೂವರೆ ವರ್ಷಗಳ ಬಳಿಕ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಕೆಲವು ಶಾಸಕರು ಹಾಗೂ ಕಾರ್ಯಕರ್ತರಲ್ಲಿತ್ತು. ಏಕಾಏಕಿ ಶಿವಕುಮಾರ್ ಈ ಆಯ್ಕೆ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದಾಗ, “ಅದು ಅಸಹಾಯಕತೆ ಅಲ್ಲ. ಅದು ಪಕ್ಷ ಹಾಗೂ ಅದರ ನಾಯಕತ್ವಕ್ಕೆ ನೀಡುವ ಗೌರವ. ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ನಾವು ಪಕ್ಷಕ್ಕೆ ಗೌರವ ನೀಡಬೇಕು. ಶಿವಕುಮಾರ್ ಆ ಕೆಲಸ ಮಾಡಿದ್ದಾರೆ” ಎಂದರು.

ಗೊಂದಲ ನಿವಾರಣೆಗೆ ಇಂತಹ ಹೇಳಿಕೆ ನೀಡುತ್ತಿದ್ದು, ಮುಂದೆ ಅವರು ಸಿಎಂ ಆಗುತ್ತಾರಾ ಎಂದು ಕೇಳಿದಾಗ, “ನನಗೆ ಆ ವಿಚಾರ ಗೊತ್ತಿಲ್ಲ. ನಾನು ಅಷ್ಟು ದೊಡ್ಡವನಲ್ಲ. ಯಾರೇ ಮುಖ್ಯಮಂತ್ರಿಯಾದರೂ ಪ್ರಧಾನ ಮಂತ್ರಿಯಾದರೂ, ಶಾಸಕ ಹಾಗೂ ಮಂತ್ರಿಯಾಗಬೇಕಾದರೆ ಅದು ಪಕ್ಷದ ತೀರ್ಮಾನ. ಕೆಲವು ಸಂದರ್ಭದಲ್ಲಿ ಪಕ್ಷದ ಹೊರತಾಗಿ ಜನ ತೀರ್ಮಾನ ಮಾಡಿರುತ್ತಾರೆ. ಬಹುತೇಕ ಎಲ್ಲ ಪಕ್ಷದ ವ್ಯವಸ್ಥೆ ಒಳಗೆ ಎಲ್ಲರೂ ಆಯ್ಕೆಯಾಗುತ್ತಾರೆ. ಹೀಗಾಗಿ ಪಕ್ಷವನ್ನು ಬಲಪಡಿಸಬೇಕು. ಪಕ್ಷದ ನಿಯಮ, ಆಚಾರ ವಿಚಾರ ಒಪ್ಪಬೇಕಾಗುತ್ತದೆ” ಎಂದು ವಿವರಿಸಿದರು.

ಈ ಬೆಳವಣಿಗೆಯಿಂದ ಕಾರ್ಯಕರ್ತರಿಗೆ ಯಾವ ಸಂದೇಶ ರವಾನೆಯಾಗುತ್ತದೆ ಎಂದು ಕೇಳಿದಾಗ, “ಬಿಜೆಪಿ ಸರಿ ಇಲ್ಲ ಎಂದು ಜನ ಕಾಂಗ್ರೆಸ್ ಮತ ಹಾಕಿದ್ದಾರೆ. ಕಾಂಗ್ರೆಸ್ ಶಾಸಕರು, ಸಚಿವರು, ಮುಖ್ಯಮಂತ್ರಿ, ನಾಯಕರು ಎಲ್ಲರೂ ರಾಜ್ಯದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪಕ್ಷ, ಕಾರ್ಯಕರ್ತರು, ಜನರ ಹಿತದೃಷ್ಟಿಯಿಂದ ನಮ್ಮ ಆಸೆ, ಆಕಾಂಕ್ಷೆ ನೋವುಗಳೇನೇ ಇದ್ದರೂ ನಾವು ಒಗ್ಗಟ್ಟಾಗಿ ಹೋಗಬೇಕು” ಎಂದು ಕರೆ ನೀಡಿದರು.

ಸಿದ್ದರಾಮಯ್ಯ ಮೈಸೂರಿನಲ್ಲಿ ಈ ಸರ್ಕಾರ ಬಂಡೆ ತರಹ ಇರುತ್ತದೆ ಎಂದು ಹೇಳಿದ ಬಗ್ಗೆ ಕೇಳಿದಾಗ, “ಅದಕ್ಕೆ ಶಿವಕುಮಾರ್ ಸಹಮತ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ನಿಮಗೆ ಯಾಕೆ ಅನುಮಾನ? ಶಿವಕುಮಾರ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರಾ? ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಹಿಂದೆಯೂ ಚೆನ್ನಾಗಿದ್ದರು, ಈಗಲೂ ಚೆನ್ನಾಗಿದ್ದಾರೆ, ನಾಳೆಯೂ ಚೆನ್ನಾಗಿರುತ್ತಾರೆ” ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ 75 ವರ್ಷದ ಪಾಲಿಸಿ ಏನಾಯ್ತು?

ಈ ಹೇಳಿಕೆಗಳನ್ನು ಬಿಜೆಪಿ ಬೇರೆ ರೀತಿ ಬಿಂಬಿಸುತ್ತಿದೆ ಎಂದು ಕೇಳಿದಾಗ, “ಬಿಜೆಪಿ ಏನೇ ಹೇಳಿಕೆ ನೀಡಿದರೂ ನಮ್ಮನ್ನು ಟೀಕೆ ಮಾಡುವುದಷ್ಟೇ ಅವರ ಗುರಿ. ಅವರ ತತ್ವ ಸಿದ್ಧಾಂತ ಗಾಳಿಗೆ ತೂರಿ ಬೇರೆಯವರ ಬಗ್ಗೆ ಮಾತನಾಡುತ್ತಾರೆ. 75 ವರ್ಷ ಮಿತಿಯ ಪಾಲಿಸಿ ಈಗ ಎಲ್ಲಿ ಹೋಗಿದೆ? ಅದರ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಕೆಳಗಿಳಿಸುವಾಗ ಇದೇ ಪಾಲಿಸಿಯನ್ನು ಜನರ ಮುಂದೆ ಇಟ್ಟವರು. ಈಗ ಯಾಕೆ ಚರ್ಚೆ ಮಾಡುತ್ತಿಲ್ಲ? ರಾಜ್ಯ ಹಾಗೂ ರಾಷ್ಟ್ರ ನಾಯಕರು ಈ ಬಗ್ಗೆ ಮಾತನಾಡುತ್ತಿಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವುದು, ಜನರನ್ನು ಕೆರಳಿಸುವುದು ಬಿಜೆಪಿ ನಾಯಕರ ಅಜಂಡಾ. ಅವರಿಗೆ ಜನರ ಹಿತದೃಷ್ಟಿ ಇಲ್ಲದ ಪಕ್ಷ. ಹೀಗಾಗಿ ಅವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರಲ್ಲಿ ಯಾವ ತತ್ವ ಸಿದ್ಧಾಂತವಿದೆ? ನಮ್ಮ ಪಕ್ಷ ಒದು ನಿರ್ದಿಷ್ಟ ಗುರಿ ಹಾಗೂ ಸಿದ್ಧಾಂತ ಹೊಂದಿರುವುದಕ್ಕೆ ಜನ ನಮಗೆ 140 ಸ್ಥಾನ ನೀಡಿದ್ದಾರೆ. ಅವರ ಹಿತ ಕಾಪಾಡುವುದು ಉತ್ತಮ ಆಡಳಿತ ನೀಡುವುದು ನನ್ನಂತಹ ಕಾರ್ಯಕರ್ತರ ಆಸೆ” ಎಂದು ತಿಳಿಸಿದರು.

ಯಾರ ಹಣೆಯಲ್ಲಿ ಏನು ಬರೆದಿದೆಯೋ?

2028ಕ್ಕೆ ಸಿಎಂ ಆಕಾಂಕ್ಷಿ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ನೀಡಿದ್ದು, ನಿಮ್ಮ ಸಹೋದರನನ್ನು ಸಿಎಂ ಮಾಡುವ ನಿಮ್ಮ ಆಸೆ ಕತೆ ಏನು ಎಂದು ಕೇಳಿದಾಗ, “ಶಾಸಕರಾಗಬೇಕು, ಸಂಸದರಾಗಬೇಕು, ಸಚಿವ, ಮುಖ್ಯಮಂತ್ರಿಯಾಗಬೇಕು ಎಂದು ಹಣೆಯಲ್ಲಿ ಬರೆದಿರಬೇಕು. ಅದು ಭಗವಂತನ ಇಚ್ಛೆ, ಜನರ ಆಶೀರ್ವಾದ. ಯಾರ ಹಣೆಯಲ್ಲಿ ಏನು ಬರೆದಿದೆಯೋ? ಸದಾನಂದಗೌಡರು ಆರು ತಿಂಗಳ ಹಿಂದೆ ಕೆಎಂಎಫ್ ಅಧ್ಯಕ್ಷಗಿರಿಗೆ ಅಗಲಾಚುತ್ತಿರುವಾಗ ಮೂರೇ ತಿಂಗಳಲ್ಲಿ ಮುಖ್ಯಮಂತ್ರಿಯಾದರು. ಬಸವರಾಜ ಬೊಮ್ಮಾಯಿ ಕೂಡ ಅನಿರೀಕ್ಷಿತವಾಗಿ ಸಿಎಂ ಆದರು. ಯಾವುದೇ ನಿರೀಕ್ಷೆ ಇಲ್ಲದೆ ಜಾತಿ ಬೆಂಬಲ ಇಲ್ಲದೆ ವೀರಪ್ಪ ಮೋಯ್ಲಿ ಸಿಎಂ ಆದರು. ಧರಂ ಸಿಂಗ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಿಎಂ ಆಗಿದ್ದಾರೆ. ಅನೇಕ ಇತಿಹಾಸಗಳಿವೆ. ಯಾವ ಸಂದರ್ಭದಲ್ಲಿ ಏನು ಆಗಬೇಕೋ ಅದು ಆಗುತ್ತವೆ. ನಾಳೆ, ನಾಡಿದ್ದೇ ಆಗಬೇಕು ಎಂದು ಆತುರಪಡಲು ಆಗುವುದಿಲ್ಲ. ಹಾಸನದಲ್ಲಿ ಅನಿರೀಕ್ಷಿತವಾಗಿ ಸಾಯುತ್ತಿದ್ದಾರೆ ಎಂದು ನೀವು ಹೆಚ್ಚು ತೋರಿಸಿ ಭಯ ಸೃಷ್ಟಿಸುತ್ತಿದ್ದೀರಿ. ದುರ್ಬಲ ಹೃದಯದವರು ಆಸ್ಪತ್ರೆ ಸೇರುವಂತಾಗಿದೆ. ನೀವು ಹೆಚ್ಚು ತೋರಿಸುವುದನ್ನು ಕಡಿಮೆ ಮಾಡಿ. ನೀವೆಲ್ಲಾ ಸೇರಿ ಹೃದಯ ತಜ್ಞರಿಗೆ ಕೆಲಸ ನೀಡಬೇಕು ಎಂದು ತೀರ್ಮಾನಿಸಿದ್ದೀರಾ ಹೇಗೆ?” ಎಂದು ಚಟಾಕಿ ಹಾರಿಸಿದರು.

ಜನರಲ್ಲಿ ಹೆಚ್ಚು ಆತಂಕ ಮೂಡಿಸಬೇಡಿ

ಹಾಸನದಲ್ಲಿ 26 ಮಂದಿ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ ಎಂದು ಕೇಳಿದಾಗ, “ಹಾಸನ ಮಾತ್ರವಲ್ಲ, ಇಡೀ ದೇಶದಲ್ಲಿ ಈ ರೀತಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಆರೋಗ್ಯ ಕಡೆ ಜನ ಗಮನಹರಿಸುವುದು ಕಡಿಮೆಯಾಗಿದೆ, ಒತ್ತಡ ಹೆಚ್ಚಾಗುತ್ತಿದೆ. ಯುವಕರಿಂದ ಹಿರಿಯರವರೆಗೆ ಎಲ್ಲರೂ ಒತ್ತಡದ ಬದುಕು ಸಾಗಿಸುತ್ತಿದ್ದಾರೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಚೆನ್ನಾಗಿ ಓದಿ, ಸಾಧನೆ ಮಾಡಬೇಕು, ಅಂಕದ ಒತ್ತಡ. ಯೌವನದಲ್ಲಿ ಕೆಲಸ ಸಿಕ್ಕಿಲ್ಲ, ಮದುವೆಯಾಗಿಲ್ಲ ಇತರೆ ಒತ್ತಡವಿಲ್ಲ. ಮತ್ತೆ ಕೆಲವರು ದೇಹದ ತೂಕ ಹೆಚ್ಚಾಗಿದೆ ಎಂದು ಯೂಟ್ಯೂಬ್ ನೋಡಿ ವ್ಯಾಯಾಮ ಮಾಡುವುದು ಸೇರಿದಂತೆ ಇಲ್ಲಸಲ್ಲದ ಪ್ರಯೋಗವನ್ನು ತಮ್ಮ ದೇಹದ ಮೇಲೆ ಮಾಡುತ್ತಾರೆ. ಹೀಗೆ ಸಾಕಷ್ಟು ವಿಚಾರವಿದೆ. ಗೂಗಲ್ ವೈದ್ಯರ ಸಲಹೆ ಹೆಚ್ಚಾಗಿ ಜನ ತಮಗೆ ತಾವೇ ಚಿಕಿತ್ಸೆ ನೀಡುವುದು ಹೆಚ್ಚಾಗುತ್ತಿದೆ. ಹೀಗಾಗಿ ಒಂದಷ್ಟು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮಾಧ್ಯಮಗಳು ಇದನ್ನು ಆಂತಕಕಾರಿಯಾಗಿ ತೋರಿಸಿ ದುರ್ಬಲ ಹೃದಯವನ್ನು ಮತ್ತಷ್ಟು ದುರ್ಬಲಗೊಳಿಸಬೇಡಿ” ಎಂದು ಸಲಹೆ ನೀಡಿದರು.

ವೈಜ್ಞಾನಿಕವಾಗಿ ಬಗೆಹರಿಸಬೇಕು

ಕೋವಿಡ್ ಲಸಿಕೆಯ ದುಷ್ಪರಿಣಾಮದಿಂದ ಈ ಸಾವುಗಳು ಸಂಭವಿಸುತ್ತಿವೆ ಎಂಬ ಶಂಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೆಲವು ಅಂಶಗಳನ್ನು ಪ್ರಸ್ತಾಪ ಮಾಡಿದ್ದು, ಇದರ ಬಗ್ಗೆಯೂ ಗಮನಹರಿಸಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೇ ಹೊರತು, ರಾಜಕೀಯವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಲಸಿಕೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ತಯಾರಾಗಿವೆ. ಇಡೀ ವಿಶ್ವ ಲಸಿಕೆ ಉಪಯೋಗಿಸಿದೆ. ಸರ್ಕಾರ ಜನರ ಭಾವನೆಯನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ನಡೆಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ತಿಳಿಸಿದರು.

ಗುಣಮಟ್ಟ ಪರೀಕ್ಷೆ ಮಾಡಿಯೇ ಲಸಿಕೆ ನೀಡಲಾಗಿದೆ ಎಂಬ ಕಿರಣ ಮಜೂಮ್ದಾರ್ ಶಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರದಲ್ಲಿ ನಾನು ತಜ್ಞನಲ್ಲ. ಜನಸಾಮಾನ್ಯರ ಮಾತನ್ನು ನಾನೂ ಕೇಳಿದ್ದೇನೆ. ಈ ಬಗ್ಗೆ ಎದ್ದಿರುವ ಅನುಮಾನಗಳನ್ನು ವೈಜ್ಞಾನಿಕವಾಗಿ ನಿವಾರಣೆ ಮಾಡುವುದು ಆರೋಗ್ಯ ಇಲಾಖೆ ಹಾಗೂ ಸರ್ಕಾರದ ಕರ್ತವ್ಯ. ನಾನು ನೀವು ಚರ್ಚೆ ಮಾಡುವುದು ಬೇರೆ, ವೈಜ್ಞಾನಿಕವಾಗಿ ಸ್ಪಷ್ಟನೆ ನೀಡುವುದು ಬಹು ಮುಖ್ಯ” ಎಂದು ತಿಳಿಸಿದರು.

ನಿಮಗೆ ವೈಯಕ್ತಿಕವಾಗಿ ಲಸಿಕೆ ಮೇಲೆ ಅನುಮಾನವಿದೆಯೇ ಎಂದು ಕೇಳಿದಾಗ, “ನಾನು ಇಲ್ಲಿ ವೈಯಕ್ತಿಕವಾಗಿ ತಮ್ಮ ಹೇಳುವುದೇನಿದೆ. ಎರಡು ಲಸಿಕೆ ತೆಗೆದುಕೊಳ್ಳಿ ಎಂದು ಹೇಳಿದರು, ನಾನು ತೆಗೆದುಕೊಂಡಿದ್ದೇನೆ. ನೀವು ತೆಗೆದುಕೊಂಡಿದ್ದೀರಿ ಅಲ್ಲವೇ? ನಿಮಗೆ ಅದರ ಮೇಲೆ ಅನುಮಾನ ಇದೆಯೇ? ನನಗೂ ವಯಸ್ಸಾಗುತ್ತಿದೆ. ನಾನು ಏನು ಹೇಳಲಿ. ನೀವು ಸಾರ್ವಜನಿಕರಿಗೆ ಹತ್ತಿರವಾಗಿದ್ದು, ಸಾರ್ವಜನಿಕರ ಗೊಂದಲ ಇದೆಯಲ್ಲವೇ? ಇಡೀ ವಿಶ್ವ ಇದರ ಬಗ್ಗೆ ಗಮನಹರಿಸಬೇಕು. ಈಗಲೂ ಕೋವಿಡ್ ಇದೆ ಎನ್ನುತ್ತಾರೆ” ಎಂದರು.

ನಂದಿನಿ ಬಳಸಿ, ರೈತರನ್ನು ಉಳಿಸಿ

ಕೆಎಂಎಫ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾಲೂರು ಶಾಸಕ ನಂಜೇಗೌಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಯಾವುದೇ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನನ್ನ ಮುಂದೆ ಈ ವಿಚಾರ ಚರ್ಚೆಯೂ ಆಗಿಲ್ಲ. ಅಂತಿಮ ತೀರ್ಮಾನ ಮಾಡುವವರು ನಿರ್ದೇಶಕರುಗಳು, ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಪಕ್ಷ” ಎಂದು ತಿಳಿಸಿದರು.

ನೀವು ಹಾಗೂ ಡಿ.ಕೆ.ಶಿವಕುಮಾರ್ ಅವರು ನಂಜೇಗೌಡರಿಗೆ ಭರವಸೆ ನೀಡಿದ್ದೀರಿ ಎಂದು ಹೇಳಿದ್ದಾರೆ ಎಂದು ಕೇಳಿದಾಗ, “ನಂಜೇಗೌಡರು ನಮ್ಮ ಹಿರಿಯ ನಾಯಕರು. ನಾನು ಅವರ ಪರವಾಗಿ ಬೆಂಬಲವಾಗಿ ನಿಂತಿದ್ದೆ. ಅದರಲ್ಲಿ ಎರಡು ಮಾತಿಲ್ಲ. ಸದ್ಯಕ್ಕೆ ನನ್ನನ್ನು ಬಮೂಲ್ ಅಧ್ಯಕ್ಷ ಸ್ಥಾನದಲ್ಲಿದ್ದು, ನಾನು ಆ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ನೀವೆಲ್ಲರೂ ನಂದಿನಿ ಹಾಲು, ತುಪ್ಪ ಬಳಸಿ. ರೈತರನ್ನು ಉಳಿಸಿ” ಎಂದು ಮನವಿ ಮಾಡಿದರು.

ನೀವು ನಂದಿನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತೀರಾ ಎಂದು ಕೇಳಿದಾಗ, “ಈಗ ನಾನು ಯಾವ ಕೆಲಸ ಮಾಡುತ್ತಿದ್ದೇನೆ? ಬಣ್ಣ ಹಾಕಿಲ್ಲ ಅಷ್ಟೇ” ಎಂದು ತಿಳಿಸಿದರು.

ಯಾರಿಗೂ ಅನ್ಯಾಯವಾಗುವುದಿಲ್ಲ

ಜಾತಿ ಸಮೀಕ್ಷೆ ವಿಚಾರವಾಗಿ ಮನೆಗಳ ಮುಂದೆ ಸ್ಟಿಕ್ಕರ್ ಅಂಟಿಸುತ್ತಿರುವ ಬಗ್ಗೆ ಕೇಳಿದಾಗ, “ಬೆಂಗಳೂರು ಬಹಳ ದೊಡ್ಡ ನಗರ. ಬಾಗಿಲು ತಟ್ಟಿದರೆ ಬಾಗಿಲು ತೆಗೆಯಲ್ಲ, ಸಾಕಷ್ಟು ಬಾರಿ ಮನೆಯಲ್ಲಿ ಇರುವುದಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಜೊತೆ ಕೆಲಸ ಮಾಡಬೇಕಿದೆ. ಏನೇ ಕೆಲಸ ಮಾಡಬೇಕಾದರೂ 5-10% ಲೋಪಗಳು ಆಗುತ್ತವೆ. ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡುವುದು ಎಲ್ಲರ ಕರ್ತವ್ಯ. ಮಾಧ್ಯಮಗಳಲ್ಲಿ ಬರುತ್ತಿರುವ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಇದಕ್ಕಾಗಿ ಆಯೋಗ ರಚಿಸಲಾಗಿದ್ದು, ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂಬ ಭರವಸೆ ನನಗಿದೆ. ಬೆಂಗಳೂರಿನಲ್ಲಿ ಬಹುತೇಕರು ವ್ಯಾಪಾರ ಉದ್ಯೋಗಕ್ಕಾಗಿ ಬಂದು ನೆಲೆಸಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ಮನೆಯಿಂದ ಹೊರಗೆ ಇರುತ್ತಾರೆ” ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಸಚಿವ ಸಂಪುಟದಲ್ಲಿ ನಾಗೇಂದ್ರ ಅವರ ಸ್ಥಾನ ಹೊರತಾಗಿ ಬೇರೆ ಎಲ್ಲವೂ ಭರ್ತಿಯಾಗಿವೆ. ಈ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದೆ” ಎಂದು ತಿಳಿಸಿದರು.