Aiyyo Shraddha: ಕನ್ನಡಿಗರಿಂದ ಸಾಲ ಪಡೆದಿದ್ದೀನಿ, ಬಡ್ಡಿ ಸಮೇತ ತೀರಿಸ್ತೀನಿ: ಅಯ್ಯೋ ಶ್ರದ್ಧಾ
Ankita Pustaka: ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಕಿತ ಪುಸ್ತಕ ಪ್ರಕಾಶನದ 3 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜನಪ್ರಿಯ ಸ್ಟಾಂಡಪ್ ಕಾಮೆಡಿಯನ್ ಶ್ರದ್ಧಾ ಜೈನ್ ಅವರು ಮಾತನಾಡಿದ್ದಾರೆ.

-

ಬೆಂಗಳೂರು: ನನ್ನ ಜೀವನವನ್ನು ಒಮ್ಮೆ ಹಿಂತಿರುಗಿ ನೋಡಿದರೆ, ನನ್ನ ಮೇಲೆ ಕನ್ನಡದ ದೊಡ್ಡ ಸಾಲ ಇದೆ ಎನಿಸುತ್ತದೆ. ಈ ಜನ್ಮದಲ್ಲಿ ಆ ಸಾಲ ತೀರಿಸಲೇ ಬೇಕು ನಾನು. ನನಗೆ ಜೀವನ ಮೊದಲು ಅವಕಾಶ ನೀಡುತ್ತದೆ. ಮತ್ತೆ ಅದನ್ನು ತೀರಿಸಬೇಕು. ಹೀಗಾಗಿ ಕನ್ನಡದಲ್ಲಿ ಏನೋ ಸಾಧನೆ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ಜನಪ್ರಿಯ ಸ್ಟಾಂಡಪ್ ಕಾಮೆಡಿಯನ್ ಶ್ರದ್ಧಾ ಜೈನ್ (Aiyyo Shraddha) ಹೇಳಿದರು.
ನಗರದ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಕಿತ ಪುಸ್ತಕ ಪ್ರಕಾಶನದ 3 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಯ್ಯೋ ಶ್ರದ್ಧಾ ಮಾತನಾಡಿದರು.
ಇವತ್ತು ಟಿ.ಎನ್.ಸೀತಾರಾಮ್ ಅವರು ಭೇಟಿಯಾದಾಗ ನಿಮ್ಮ ಮಾತುಗಳು ತುಂಬಾ ಇಷ್ಟ ಎಂದು ಹೇಳಿದ್ದಾರೆ. ಪ್ರಕಾಶ್ ಕಂಬತ್ತಳ್ಳಿ ಅವರು ನೀವು ಕನ್ನಡದಲ್ಲಿ ಏನಾದರೂ ಬರೆಯಿರಿ, ನಾವು ಪಬ್ಲಿಷ್ ಮಾಡುತ್ತೀವಿ ಎಂದು ಹೇಳಿದ್ದಾರೆ. ಇದನ್ನೂ ನಾನು ಸಾಲ ಅಂತಲೇ ಪಡೆದಿದ್ದೀನಿ. ಹೀಗಾಗಿ ಇದನ್ನು ತೀರಿಸಬೇಕು, ಕನ್ನಡದಲ್ಲಿ ಏನೋ ಒಂದು ಸಾಧನೆ ಮಾಡುವೆ ಎಂದು ತಿಳಿಸಿದರು.
ನಾನು ಹುಟ್ಟಿದ್ದು ಬೆಳೆದಿದ್ದು ಮುಂಬೈನಲ್ಲಿ. ಕರ್ನಾಟಕಕ್ಕೆ ಬಂದು, ಇಲ್ಲಿನ ಜನರ ಒಡನಾಟ ಬೆಳೆಯುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನಮ್ಮ ತಾಯಿ ಕನ್ನಡ ಶಿಕ್ಷಕಿ ಆಗಿದ್ದರು. ನಾನು ದಕ್ಷಿಣ ಕನ್ನಡದವಳು, ಆದರೆ ನನಗೆ ಕನ್ನಡ ಗಂಧ ಗಾಳಿ ಗೊತ್ತಿರಲಿಲ್ಲ. ನಾನು ಎಂಜಿನಿಯರಿಂಗ್ ಓದಲು ಹಾಸನಕ್ಕೆ ಬಂದೆ. ಅಲ್ಲಿ ನಾನು ಕನ್ನಡ ಕಲಿತೆ. ನನ್ನ ಮೊದಲ ಕನ್ನಡದ ಗುರು ರವಿಚಂದ್ರನ್. ಕಾಶಿನಾಥ್, ಟೈಗರ್ ಪ್ರಭಾಕರ್ ಅವರಂತಹ ನಟರ ಸಿನಿಮಾಗಳಿಂದ ಕನ್ನಡ ಕಲಿತೆ. ಅವರಿವರು ಮಾತನಾಡೋದನ್ನು ಕೇಳುತ್ತಾ ಕೇಳುತ್ತಾ ಕನ್ನಡ ಕಲಿತೆ ಎಂದು ಹೇಳಿದರು.
ಎಂಜಿನಿಯರಿಂಗ್ ಬಳಿಕ ಕನ್ನಡದ ಜತೆ ಸಂಪರ್ಕ ಕಡಿತವಾಗಿತ್ತು. ಮುಂಬೈನಲ್ಲಿ ಹಿಂದಿ ರೇಡಿಯೋ ಸ್ಟೇಷನ್‌ನಲ್ಲಿ ಕೆಲಸಕ್ಕೆ ಹೋದಾಗ, ನಾನು ಕರ್ನಾಟಕದವಳು, ಕನ್ನಡ ಮಾತೃ ಭಾಷೆ ಎಂದು ಹೇಳಿದ್ದರಿಂದ ನನಗೆ ಕೆಲಸ ಸಿಕ್ಕಿತು. ನಾನು ರೇಡಿಯೋ ಜಾಕಿಯಾಗಿದ್ದೆ. ನನ್ನ ಕನ್ನಡ ಅಷ್ಟೇನೂ ಚೆನ್ನಾಗಿರಲಿಲ್ಲ, ಆದರೂ ಅದೃಷ್ಟದಿಂದ ಕೆಲಸ ಸಿಕ್ಕಿತು ಎಂದರು.
ನಂತರ ನನಗೆ ಕನ್ನಡ ಚಾನೆಲ್‌ನಿಂದ ಕರೆ ಬಂತು. ಕನ್ನಡ ಚಾನೆಲ್‌ನ ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನ ನಿರೂಪಕಿಯಾಗಿದ್ದೆ. ಕನ್ನಡದ ಕೋಟ್ಯಧಿಪತಿ ಪ್ರೋಮೊ ಮಾಡಿದ್ದೆ. ನನ್ನ ಫಸ್ಟ್ ಸ್ಟಾಂಡಪ್ ಕಾಮಿಡಿ ಕನ್ನಡದಲ್ಲೇ ನಡೆಯಿತು. ಈ ರೀತಿ ನನಗೆ ಕನ್ನಡದ ಜತೆ ಸಂಬಂಧ ಬೆಳೆಯಿತು. ಕೆಲವರ ಜೀವನದಲ್ಲಿ ಈ ರೀತಿ ನಡೆಯುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Book Release: ಪತ್ರಕರ್ತ ಹರೀಶ್ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಸೇರಿ 3 ಪುಸ್ತಕಗಳ ಲೋಕಾರ್ಪಣೆ
ರವಿ ಹೆಗಡೆ ಅವರು ಎಐ ಬಗ್ಗೆ ಹೇಳಿದರು. ಎಐಗೆ ಹಸಿವಿಲ್ಲ, ನಮಗೆ ಹಸಿವಿದೆ. ಎಐಗೆ ಕಾದಂಬರಿ ಬರೆಯಬೇಕು ಎಂದು ಅನಿಸಲ್ಲ, ಹೇಳಿದರೆ ಬರೆಯುತ್ತದೆ. ಈ ಹಸಿವು ನಮಗೆ ಮತ್ತು ಎಐ ನಡುವೆ ಇರುವ ದೊಡ್ಡ ವ್ಯತ್ಯಾಸ. ಹೀಗಾಗಿ ಏನಾದರೂ ಮಾಡಬೇಕು, ಬರೆಯಬೇಕು ಎಂಬ ಹಸಿವು ನಮ್ಮಲ್ಲಿ ಇರುವತನಕ ಎಐಗೆ ಬರುವುದು ಅಸಾಧ್ಯ ಎಂದು ಶ್ರದ್ಧಾ ಜೈನ್ ಹೇಳಿದರು.