ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಆದೇಶ ಹೊರಡಿಸಿದ್ದರೂ, ರಾಜ್ಯದ ವಿವಿಧ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ವಾಗುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ವಲಯದಲ್ಲಿ ಕಡ್ಡಾಯವಾಗಿ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹ ಒತ್ತಾಯಿಸಿದೆ.
2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ, ಅತಿಥಿ, ಗುತ್ತಿಗೆ, ತಾತ್ಕಾಲಿಕ ನೇಮಕಾತಿಗಳಲ್ಲಿ ಸಂವಿಧಾನಬದ್ಧ ಮೀಸಲಾತಿ ಮತ್ತು ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಯುವ ಸಮೂಹ ರಾಜ್ಯಪಾಲರು, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಸಚಿವರು ಹಾಗೂ ಸಂಬಂಧಿತ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳಿಗೆ ಸಮಗ್ರ ಮನವಿ ಸಲ್ಲಿಸಿದೆ.
ಮನವಿ ಪತ್ರಕ್ಕೆ ರಾಜ್ಯಾಧ್ಯಕ್ಷ ಡಾ.ಎಸ್.ಸಂಗಮೇಶ್, ವಕೀಲರಾದ ಹನುಮೇಶ ಗುಂಡೂರ, ಕಾರ್ಯಕಾರಿ ಅಧ್ಯಕ್ಷರಾದ ಅಗ್ನಿ ಅಜಿತ್, ಯುವ ಹೋರಾಟಗಾರರಾದ ಡಾ. ರವಿ ಕುಮಾರ ಮರಡಿಪುರ, ಸಾಮಾಜಿಕ ಹೋರಾಟಗಾರರಾದ ನಿಂಗರಾಜ್ ಗುಳೆ, ಪದಾಧಿಕಾರಿಗಳಾದ ಜಿ. ಎಂ.ಬಬಲಾದ್, ಮಂಜುನಾಥ್ ಬಿ, ಡೇವಿಡ್ ಸಹಿ ಮಾಡಿದ್ದಾರೆ.
ಐಟಿಐ ಕಾಲೇಜುಗಳು, ವಿವಿಧ ವಿಶ್ವವಿದ್ಯಾಲಯಗಳ ಪಿ.ಎಚ್.ಡಿ ಪ್ರವೇಶಾತಿ, ಪಿಯುಸಿ ನಂತರದ 5 ವರ್ಷದ ಎಲ್.ಎಲ್.ಬಿ ಪ್ರವೇಶಾತಿ, ಸರ್ಕಾರಿ ಡಿಗ್ರಿ ಕಾಲೇಜುಗಳ 10,500 ಅತಿಥಿ ಸಹ ಪ್ರಾಧ್ಯಾಪಕರ ನೇಮಕಾತಿ, 52 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ, 5,910 ಅತಿಥಿ ಉಪನ್ಯಾಸಕರ ನೇಮಕಾತಿ, ಅಂಗನವಾಡಿ ಹುದ್ದೆಗಳು, ಆರ್,ಟಿ.ಇ ಮತ್ತು ಆದರ್ಶ ವಿದ್ಯಾಲಯಗಳ ಪ್ರವೇಶಾತಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಒಳಮೀಸಲಾತಿ ಜಾರಿಯಾಗಿಲ್ಲ.
ಸಂವಿಧಾನದ ಕಲಂ 14, 15(4), 15(5), 16(4), 16(4A) ಹಾಗೂ 46 ರ ಆಶಯಗಳಿಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬೆಳಕಿನಲ್ಲಿ ಪರಿಶಿಷ್ಟ ಜಾತಿಗಳ ಒಳವರ್ಗೀಕರಣ ಸಂವಿಧಾನಬದ್ಧವಾಗಿರುವುದನ್ನು ಸರ್ಕಾರ ಮನಗಾಣಬೇಕು ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜಾರಿಯಲ್ಲಿರುವ ಒಳಮೀಸಲಾತಿ ಮಾದರಿಗಳನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿಯೂ ಕಡ್ಡಾಯ ಅನುಷ್ಠಾನಕ್ಕೆ ಸ್ಪಷ್ಟ ಆದೇಶ ಹೊರಡಿಸಬೇಕು.
ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ಜಾರಿಗೊಳಿಸಬೇಕು. ಒಳಮೀಸಲಾತಿ ಮೇಲ್ವಿಚಾರಣೆಗೆ ಪ್ರತ್ಯೇಕ ಸಮಿತಿ ರಚಿಸಿ, ನಿಯಮ ಉಲ್ಲಂಘನೆ ಮಾಡುವ ಇಲಾಖೆ ಮತ್ತು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.