#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Invest Karnataka 2025: ಜಮೀನಿನ ಸಮಸ್ಯೆ ಬಗೆಹರಿಸಿದರೆ ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕೆ ಅಭಿವೃದ್ಧಿ: ಶೋಭಾ ಕರಂದ್ಲಾಜೆ

ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆ ಎರಡನ್ನೂ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ, ಸೇವನೆಗೆ ಸಿದ್ಧವಾಗಿರುವಉದ್ಯಮ ಬೆಳೆಸಲು ಹೇರಳ ಅವಕಾಶಗಳಿವೆ. ವಿದೇಶಗಳ ಜನರು ನಮ್ಮಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಬಯಸುತ್ತಿದ್ದಾರೆ. ಯುವಜನರಿಗೆ ನಾವು ಕೌಶಲ್ಯ ಕೊಡುವತ್ತ ಒತ್ತು ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಜಮೀನಿನ ಸಮಸ್ಯೆ ಬಗೆಹರಿಸಲು ಶೋಭಾ ಕರಂದ್ಲಾಜೆ ಆಗ್ರಹ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

Profile Siddalinga Swamy Feb 13, 2025 10:31 PM

ಬೆಂಗಳೂರು: ಕರ್ನಾಟಕದಲ್ಲಿ ಜಮೀನಿನ ಬೆಲೆ ತಾರಕಕ್ಕೇರಿದ್ದು, ಕೈಗಾರಿಕಾ ಹೂಡಿಕೆಗೆ ಇದು ಸವಾಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜಮೀನನ್ನು ಖರೀದಿಸುವುದು ಕಷ್ಟವಾಗಿದೆ. ಎಷ್ಟೋ ಸಲ ಯೋಜನೆಯ ಹೂಡಿಕೆಗಿಂತ ಇದರ ವೆಚ್ಚವೇ ಜಾಸ್ತಿಯಾಗುತ್ತಿದೆ ಎನ್ನುವ ಉದ್ಯಮಿಗಳ ಕಳವಳ ಅರ್ಥವಾಗುತ್ತದೆ. ರಾಜ್ಯ ಸರ್ಕಾರ ಇದನ್ನು ಬಗೆಹರಿಸಿದರೆ, ಕೇಂದ್ರ ಸರ್ಕಾರವು ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಸಂಪೂರ್ಣ ಸಹಕಾರ ಕೊಡಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ಜಾಗತಿಕ ಹೂಡಿಕದಾರರ ಸಮಾವೇಶದಲ್ಲಿ (Invest Karnataka 2025) ಅವರು ಗುರುವಾರ ರಾಜ್ಯದ 30ಕ್ಕೂ ಹೆಚ್ಚು ಸಾಧಕ ಎಂಎಸ್ಎಂಇ ಉದ್ಯಮಿಗಳಿಗೆ `ಎಸ್ಎಂಇ ಕನೆಕ್ಟ್ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಕರ್ನಾಟಕದಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಸೌದಿ ಅರೇಬಿಯಾ, ದೋಹಾ, ದುಬೈ ಮುಂತಾದವುಗಳೊಂದಿಗೆ ಮಾಡಿಕೊಂಡ 820 ಕೋಟಿ ರೂ. ಹೂಡಿಕೆ, ಕೆಎಲ್ಇ ಸೊಸೈಟಿ ಶಿವಶಕ್ತಿ ಶುಗರ್ಸ್ ಕಾರ್ಖಾನೆಗೆ ಮಾಡುತ್ತಿರುವ 1,000 ಕೋಟಿ ರೂ. ಹಾಗೂ ಇನಾಂದಾರ್ ಶುಗರ್ಸ್ ಸಂಸ್ಥೆಯ 250 ಕೋಟಿ ರೂ. ಮೊತ್ತದ ಹೂಡಿಕೆ ಒಡಂಬಡಿಕೆಗಳನ್ನು ಪ್ರದರ್ಶಿಸಲಾಯಿತು.

ದೇಶದ ಜಿಡಿಪಿಗೆ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಪಾಲು ಶೇ.30 ರಷ್ಟಿದ್ದು, ಇಲ್ಲಿ 25 ಕೋಟಿ ಉದ್ಯೋಗಿಗಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ವಲಯದ 7 ಲಕ್ಷ ಉದ್ಯಮಗಳಿಗೆ 27.5 ಲಕ್ಷ ಕೋಟಿ ರೂ. ಸಾಲ ಕೊಡಲಾಗಿದೆ. ಅಲ್ಲದೆ, ಎಂಎಸ್ಎಂಇ ನೀತಿಯನ್ನು ಬದಲಿಸಿದ್ದು, ಹೊಸದಾಗಿ ವರ್ಗೀಕರಣ ಮಾಡಲಾಗಿದೆ. ಸೂಕ್ಷ್ಮ ಕೈಗಾರಿಕೆಗಳ ವಾರ್ಷಿಕ ವಹಿವಾಟು ಮಿತಿಯನ್ನು 10 ಕೋಟಿ ರೂ.ಗಳಿಗೆ, ಸಣ್ಣ ಕೈಗಾರಿಕೆಗಳ ಮಿತಿಯನ್ನು 100 ಕೋಟಿ ರೂ.ವರೆಗೆ ಮತ್ತು ಮಧ್ಯಮ ಕೈಗಾರಿಕೆಗಳ ಮಿತಿಯನ್ನು 500 ಕೋಟಿ ರೂ.ವರೆಗೆ ಏರಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆ ಎರಡನ್ನೂ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ, ಸೇವನೆಗೆ ಸಿದ್ಧವಾಗಿರುವ ಮತ್ತು ಸಿದ್ಧಪಡಿಸಲು ಸಿದ್ಧವಾಗಿರುವ ಆಹಾರ (ರೆಡಿ ಟು ಈಟ್ & ರೆಡಿ ಟು ಕುಕ್ ಫುಡ್) ಉದ್ಯಮ ಬೆಳೆಸಲು ಹೇರಳ ಅವಕಾಶಗಳಿವೆ. ವಿದೇಶಗಳ ಜನರು ನಮ್ಮಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಬಯಸುತ್ತಿದ್ದಾರೆ. ಯುವಜನರಿಗೆ ನಾವು ಕೌಶಲ್ಯ ಕೊಡುವತ್ತ ಒತ್ತು ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿವರಿಸಿದರು.

ನಗರಕ್ಕೆ 6 ಟಿಎಂಸಿ ಕಾವೇರಿ ನೀರು: ಶಿವಕುಮಾರ್

ಬೆಂಗಳೂರು ನಗರದಲ್ಲಿ ಉದ್ಯಮಗಳಿಗೆ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ ಇನ್ನೂ 6 ಟಿಎಂಸಿ ನೀರನ್ನು ಯಾವ ಬೆಲೆ ತೆತ್ತಾದರೂ ತರಲಾಗುವುದು. ನೀರಾವರಿ ಖಾತೆಯೂ ನನ್ನ ಬಳಿಯೇ ಇದೆ. ಜತೆಗೆ ಇಲ್ಲಿನ ಸಂಚಾರ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ಇನ್ನೊಂದೆಡೆಯಲ್ಲಿ ಉದ್ಯಮಿಗಳು ಸರ್ಕಾರದ ಬಿಯಾಂಡ್ ಬೆಂಗಳೂರು ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಸಚಿವರಾದ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Hampi Utsav 2025: ವಿಶ್ವವಿಖ್ಯಾತ ಹಂಪಿ ಉತ್ಸವ ವಿಜೃಂಭಣೆಯ ಆಚರಣೆಗೆ ಭರದ ಸಿದ್ಧತೆ

ಕ್ವಿನ್ ಸಿಟಿಯಲ್ಲಿ ಕೆಎಲ್ಇ 1,000 ಕೋಟಿ ರೂ. ಹೂಡಿಕೆ: ಪ್ರಭಾಕರ ಕೋರೆ

ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಅಗತ್ಯವಿರುವ ಶಿಕ್ಷಣ, ಸೇವೆ ಮತ್ತು ಸಂಶೋಧನೆಗಳಿಗೆ ಕ್ವಿನ್ ಸಿಟಿಯಲ್ಲಿ ಮುಂದಿನ 5 ವರ್ಷಗಳಲ್ಲಿ 1,000 ಕೋಟಿ ರೂ. ಹೂಡುವುದಾಗಿ ಬೆಳಗಾವಿಯ ಕೆಎಲ್ಇ ಸೊಸೈಟಿ ಹೇಳಿದೆ. ಇದರಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದು ಕ್ವಿನ್ ಸಿಟಿಗೆ ಘೋಷಣೆಯಾಗಿರುವ ಪ್ರಪ್ರಥಮ ಹೂಡಿಕೆಯಾಗಿದೆ. ಮಿಕ್ಕಂತೆ, ಸವದತ್ತಿಯ ಶಿವಶಕ್ತಿ ಶುಗರ್ಸ್ ಮತ್ತು ಇನಾಂದಾರ್ ಶುಗರ್ಸ್ ಕಾರ್ಖಾನೆಗಳು ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಗೆ ಮುಂದಿನ 2 ವರ್ಷಗಳಲ್ಲಿ ಕ್ರಮವಾಗಿ 1,000 ಕೋಟಿ ರೂ. ಮತ್ತು 250 ಕೋಟಿ ರೂ. ಹೂಡಿಕೆ ಮಾಡಲಿವೆ. ಸರ್ಕಾರದ ಪರವಾಗಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಮೂರೂ ಸಂಸ್ಥೆಗಳ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಗುರುವಾರ ಒಡಂಬಡಿಕೆಗಳಿಗೆ ಅಂಕಿತ ಹಾಕಿದರು.