#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hampi Utsav 2025: ವಿಶ್ವವಿಖ್ಯಾತ ಹಂಪಿ ಉತ್ಸವ ವಿಜೃಂಭಣೆಯ ಆಚರಣೆಗೆ ಭರದ ಸಿದ್ಧತೆ

Hampi Utsav 2025: ವಿಶ್ವವಿಖ್ಯಾತ ಹಂಪಿ ಉತ್ಸವ ಫೆ.28, ಮಾ.1 ಮತ್ತು 2 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಯಶಸ್ವಿಯಾಗಿ ಉತ್ಸವ ಆಚರಿಸಲು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 20 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ವಿಶ್ವವಿಖ್ಯಾತ ಹಂಪಿ ಉತ್ಸವ ವಿಜೃಂಭಣೆಯ ಆಚರಣೆಗೆ ಭರದ ಸಿದ್ಧತೆ

ಹಂಪಿ ಉತ್ಸವ 2025

Profile Siddalinga Swamy Feb 13, 2025 6:36 PM

ವಿಜಯನಗರ: ಫೆ.28, ಮಾ.1 ಮತ್ತು 2 ರಂದು ಮೂರು ದಿನಗಳ ಕಾಲ ಜರುಗುವ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ (Hampi Utsav 2025) ದಿನಗಣನೆ ಶುರುವಾಗಿದೆ. ಯಶಸ್ವಿಯಾಗಿ ಉತ್ಸವ ನಡೆಸಲು ಭರದ ಸಿದ್ಧತೆ ನಡೆಯುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 20 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವ 2025 ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಮಿತಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ. ಯಾವುದೇ ಚ್ಯುತಿ ಬಾರದಂತೆ ನಿಗಾವಹಿಸಬೇಕು ಎಂದರು.

ಹಿಂದಿನ ಬಾರಿಯಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿಯೊಂದಕ್ಕೂ ಜಿಲ್ಲಾಧಿಕಾರಿ ಅನುಮತಿ ಬೇಕೆಂದು ಕಾಯದೇ, ವಿವೇಚನಾಯುಕ್ತವಾಗಿ ಕಾರ್ಯನಿರ್ವಹಿಸಬೇಕು. ಸಮಿತಿಗಳ ಅಧ್ಯಕ್ಷರು ಕೇಳುವ ಎಲ್ಲಾ ಸವಲತ್ತುಗಳನ್ನು ತಪ್ಪದೇ ಇತರೆ ಸಮಿತಿಗಳು ಒದಗಿಸಬೇಕು ಎಂದು ಹೇಳಿದರು.

ಪ್ರತಿ ಬಾರಿಯಂತೆ ಕೈಗಾರಿಕೆ, ಕೃಷಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಮತ್ಸ್ಯ ಮೇಳ, ಪುಸ್ತಕ ಪ್ರದರ್ಶನ, ಚಿತ್ರಕಲೆ, ಶಿಲ್ಪಕಲಾ ಪ್ರದರ್ಶನ, ಶ್ವಾನ, ಕುರಿ, ಎತ್ತುಗಳ ಸ್ಪರ್ಧೆ ಏರ್ಪಡಿಸಬೇಕು. ಕವಿಗೋಷ್ಠಿ, ಮಹಿಳಾ ವಿಚಾರ ಸಂಕಿರಣ ಹಾಗೂ ಹಂಪಿ ಇತಿಹಾಸ ಕುರಿತು ಗೋಷ್ಠಿಗಳ ಉದ್ಘಾಟನೆಗೆ ನಾಡಿನ ಪ್ರಖ್ಯಾತ ಕವಿಗಳು, ಸಂಪನ್ಮೂಲ ವ್ಯಕ್ತಿಗಳು, ಇತಿಹಾಸ ತಜ್ಞರನ್ನು ಆಹ್ವಾನಿಸಬೇಕು. ವೇದಿಕೆ, ವಸ್ತು ಪ್ರದರ್ಶನ ಮಳಿಗೆ, ಧ್ವನಿ ಬೆಳಕು ಸ್ಥಳಗಳಿಗೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸೌಲಭ್ಯ ನೀಡಬೇಕು ಎಂದು ಡಿಸಿ ಹೇಳಿದರು.

ಫೆ.28 ರಂದು ಹಂಪಿ ಉತ್ಸವಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

ಫೆ.28 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಂಪಿ ಉತ್ಸವ ಉದ್ಘಾಟನಾ ನೆರವೇರಿಸಲಿದ್ದಾರೆ. ಅಂದು ಕೆಕೆಆರ್‌ಟಿಸಿಯಿಂದ ಪ್ರತಿ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಬೇಕು. ಉತ್ಸವದ ಮೂರು ದಿನ ಜನರು ಹಂಪಿಗೆ ಆಗಮಿಸಲು ಹೊಸಪೇಟೆಯಿಂದ 30 ಹಾಗೂ ಕಂಪ್ಲಿ ಪಟ್ಟಣದಿಂದ 10 ಸಾರಿಗೆ ಬಸ್‌ಗಳನ್ನು ನಿಯೋಜಿಸಿ, ಸರತಿ ಮೇಲೆ ಕಾರ್ಯಾಚರಣೆ ನಡೆಸಬೇಕು. ಈ ಬಾರಿ ಬಿಸಿಲಿನ ಧಗೆ ಹೆಚ್ಚಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಖಾಸಗಿ ವ್ಯಕ್ತಿಗಳು ಸಹಕಾರದೊಂದಿಗೆ ಪ್ರಮುಖ ಜಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಿಸಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವಂತೆ ನಿರ್ದೇಶನ ನೀಡಿದರು.

ಹಂಪಿ ಉತ್ಸವ ಯಶಸ್ವಿಗೆ ಸಮಿತಿಗಳ ರಚನೆ

ಉತ್ಸವದ ಯಶಸ್ವಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ವಾಗತ ಮತ್ತು ಶಿಷ್ಟಾಚಾರ ಹಾಗೂ ಕಲಾವಿದರ ಆಯ್ಕೆ ಸಮಿತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ನೇತೃತ್ವದಲ್ಲಿ ಸಾರಿಗೆ ಸಮಿತಿ, ಹೊಸಪೇಟೆ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ಅಧ್ಯಕ್ಷತೆಯಲ್ಲಿ ವಸತಿ ಹಾಗೂ ಧ್ವನಿ ಬೆಳಕು ಕಾರ್ಯಕ್ರಮ ಸಮಿತಿ, ಆಹಾರ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಹಾರ ಸಮಿತಿ, ವಾರ್ತಾ ಇಲಾಖೆ ಹಿರಿಯ ಸಹಾಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪ್ರಚಾರ, ಜಾಹೀರಾತು ಮತ್ತು ಮಾಧ್ಯಮ ಸಮಿತಿ, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಣಕಾಸು, ಆಹ್ವಾನ ಪತ್ರಿಕೆ, ಕರಪತ್ರ, ನೆನಪಿನ ಕಾಣಿಕೆ, ಪಾಸು, ಪ್ರಮಾಣ ಪತ್ರ, ಬ್ಯಾನರ್ ಹಾಗೂ ವೇದಿಕೆಗಳ ಸಮಿತಿ, ಜಿ.ಪಂ. ಉಪ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾನೂನು ಸುವ್ಯವಸ್ಥೆ ಸಮಿತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪ್ರದರ್ಶನ ಸಮಿತಿ, ಹಡಗಲಿ ತಾಲೂಕು ಪಂಚಾಯಿತಿ ಇಒ ಅಧ್ಯಕ್ಷತೆಯಲ್ಲಿ ಕ್ರೀಡಾ ಸಮಿತಿ, ಪ್ರವಾಸೋದ್ಯಮ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಾನಪದ ವಾಹಿನಿ, ಶೋಭಾಯಾತ್ರೆ, ತುಂಗಾರತಿ, ವಸಂತ ವೈಭವ ಕಾರ್ಯಕ್ರಮಗಳು ಹಾಗೂ ಹಂಪಿ ಬೈಸ್ಕೈ ಸಮಿತಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಗ್ನಿಶಾಮಕ ವ್ಯವಸ್ಥೆ ಸಮಿತಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಠಿ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಧ್ಯಕ್ಷತೆಯಲ್ಲಿ ಶಾಲಾ ಮಕ್ಕಳ ನೃತ್ಯ, ಚಿತ್ರಕಲಾ, ಪ್ರಬಂದ ಸ್ಪರ್ಧೆ ಆಯೋಜನೆ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Hampi Utsav 2025: ಫೆ. 28ರಿಂದ ಹಂಪಿ ಉತ್ಸವ; 4 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ: ಡಿಸಿ ದಿವಾಕರ್ ಮಾಹಿತಿ

ಸಭೆಯಲ್ಲಿ ಸಹಾಯಕ ಆಯುಕ್ತ ವಿವೇಕಾನಂದ, ಜಿ.ಪಂ. ಉಪಕಾರ್ಯದರ್ಶಿ ಭೀಮಪ್ಪ ಲಾಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.