ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ ಸೇರಿ 3 ರಾಜ್ಯಗಳ 13 ಲಕ್ಷ ಮಹಿಳೆಯರಿಗೆ ಅಯೋಡಿನ್ ಪಾಠ: ಶೇ.37ರಷ್ಟು ಅರಿವು ಹೆಚ್ಚಳ

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 32 ಜಿಲ್ಲೆಗಳಲ್ಲಿ ಸತತ ಎರಡು ವರ್ಷಗಳ ಕಾಲ ನಡೆದ ಈ ಬೃಹತ್ ಜಾಗೃತಿ ಅಭಿಯಾನದ ವರದಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ. ವರದಿಯ ಪ್ರಕಾರ, ಈ ಕಾರ್ಯಕ್ರಮದಿಂದಾಗಿ ಜನರ ಒಟ್ಟಾರೆ ಅಯೋಡಿನ್ ಜ್ಞಾನದಲ್ಲಿ ಶೇ. 37ರಷ್ಟು ಹಾಗೂ ಮೂಲ ಅರಿವಿನಲ್ಲಿ ಶೇ. 26ರಷ್ಟು ಗಣನೀಯ ಏರಿಕೆಯಾಗಿದೆ.

ಬೆಂಗಳೂರು: ಅಡುಗೆ ಮನೆಯಲ್ಲಿ ಬಳಸುವ ಉಪ್ಪಿನಲ್ಲಿ ಅಯೋಡಿನ್ ಇದೆಯೇ ಎಂದು ಗುರುತಿಸುವುದು ಹಾಗೂ ಅದನ್ನು ಸರಿಯಾಗಿ ಶೇಖರಿಸಿ, ಬಳಸುವ ಕುರಿತು ದಕ್ಷಿಣ ಭಾರತದ 13 ಲಕ್ಷಕ್ಕೂ ಹೆಚ್ಚು ಮಹಿಳೆಯರಲ್ಲಿ ಪ್ರಾಯೋಗಿಕ ಅರಿವು ಮೂಡಿಸುವಲ್ಲಿ 'ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮ' ಯಶಸ್ವಿಯಾಗಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 32 ಜಿಲ್ಲೆಗಳಲ್ಲಿ ಸತತ ಎರಡು ವರ್ಷಗಳ ಕಾಲ ನಡೆದ ಈ ಬೃಹತ್ ಜಾಗೃತಿ ಅಭಿಯಾನದ ವರದಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ. ವರದಿಯ ಪ್ರಕಾರ, ಈ ಕಾರ್ಯಕ್ರಮದಿಂದಾಗಿ ಜನರ ಒಟ್ಟಾರೆ ಅಯೋಡಿನ್ ಜ್ಞಾನದಲ್ಲಿ ಶೇ. 37ರಷ್ಟು ಹಾಗೂ ಮೂಲಭೂತ ಅರಿವಿನಲ್ಲಿ ಶೇ. 26ರಷ್ಟು ಗಣನೀಯ ಏರಿಕೆಯಾಗಿದೆ.

ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು

ಕೇವಲ ಭಾಷಣ ಅಥವಾ ಮಾಹಿತಿ ನೀಡುವುದಕ್ಕೆ ಸೀಮಿತವಾಗದೆ, ಪ್ಯಾಕ್ ಮಾಡಿದ ಉಪ್ಪಿನಲ್ಲಿ ಅಯೋಡಿನ್ ಇದೆಯೇ ಎಂದು ಗುರುತಿಸುವುದು ಹಾಗೂ ಅದರ ಸರಿಯಾದ ಬಳಕೆಯನ್ನು ಜನರಿಗೆ ಕಲಿಸಲಾಗಿದೆ. ಇದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಜನರನ್ನು 'ಅಯೋಡಿನ್ ಸಭೆ'ಗಳ ಮೂಲಕ ಹಾಗೂ 3.22 ಲಕ್ಷ ಜನರನ್ನು ಬೀದಿ ನಾಟಕಗಳ ಮೂಲಕ ತಲುಪಲಾಗಿದೆ.

ಇದನ್ನೂ ಓದಿ: World Iodine Deficiency Day 2026: ಆಪತ್ಫಾಂಧವ ಅಯೋಡಿನ್; ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಜೀವಧಾತು

ಜೊತೆಗೆ, 1,712 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ 178 ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಸ್ಥಳೀಯ ಮಹಿಳೆಯರನ್ನೇ 'ಅಯೋಡಿನ್ ಚಾಂಪಿಯನ್‌'ಗಳಾಗಿ ರೂಪಿಸಿ ಜಾಗೃತಿ ಮೂಡಿಸಿರುವುದು ಈ ಕಾರ್ಯಕ್ರಮದ ವಿಶೇಷ.

"ಸ್ಥಳೀಯ ಭಾಷೆಯಲ್ಲಿ ಸರಳವಾಗಿ ವೈಜ್ಞಾನಿಕ ಮಾಹಿತಿಯನ್ನು ನಿರಂತರವಾಗಿ ನೀಡಿದಾಗ, ಅದು ಜನರ ದೈನಂದಿನ ಆಚರಣೆಯಾಗಿ ಬದಲಾಗುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮಹಿಳೆಯರು ಹಾಗೂ ಮುಂಚೂಣಿ ಕಾರ್ಯಕರ್ತರು ಈ ಸಂದೇಶವನ್ನು ಮನೆಮನೆಗೆ ತಲುಪಿಸಿ ದ್ದಾರೆ," ಎಂದು ಯುನಿಟ್ ಚೀಫ್ ಎಕ್ಸಿಕ್ಯೂಟಿವ್ ಅನುಜ್ ರುಸ್ತಗಿ ತಿಳಿಸಿದ್ದಾರೆ.

ಮಕ್ಕಳ ಬೆಳವಣಿಗೆಗೆ ಅಯೋಡಿನ್ ಅಗತ್ಯ

"ಗರ್ಭಾವಸ್ಥೆ ಮತ್ತು ಬಾಲ್ಯದಲ್ಲಿ ಅಯೋಡಿನ್ ಕೊರತೆಯಾದರೆ ಮಕ್ಕಳ ಬೆಳವಣಿಗೆ ಹಾಗೂ ಬುದ್ಧಿಮತ್ತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ಉಪ್ಪನ್ನು ಸರಿಯಾಗಿ ಬಳಸುವ ಪ್ರಾಯೋಗಿಕ ಜ್ಞಾನ ಪ್ರತಿಯೊಂದು ಕುಟುಂಬಕ್ಕೂ ಅತ್ಯಗತ್ಯ," ಎನ್ನುತ್ತಾರೆ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್ ನಿರ್ದೇಶಕ ಡಾ. ಶಂತನು.

"ಸಾರ್ವಜನಿಕರು ದಿನಕ್ಕೆ ಗರಿಷ್ಠ 5 ಗ್ರಾಂನಷ್ಟು ಕಡಿಮೆ ಉಪ್ಪು ತಿಂದರೂ, ಆ ತಿಂದ ಉಪ್ಪು ಅಯೋಡಿನ್ ಯುಕ್ತವಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಸಾರ್ವಜನಿಕ ಆರೋಗ್ಯ ಮತ್ತು ಪೌಷ್ಟಿಕಾಂಶ ತಜ್ಞ ಡಾ. ರಂಜನ್ ಶಂಕರ್ ಸಲಹೆ ನೀಡಿದ್ದಾರೆ.

ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ನಡೆದ ವೆಬಿನಾರ್‌ನಲ್ಲಿ ಈ ಸಮೀಕ್ಷಾ ವರದಿ ಮಂಡಿಸಲಾಯಿತು. ಆಶೀರ್ವಾದ್‌ನ ಈ ಅಭಿಯಾನವು ಕೇಂದ್ರ ಸರ್ಕಾರದ 'ರಾಷ್ಟ್ರೀಯ ಅಯೋಡಿನ್ ಕೊರತೆ ನಿಯಂತ್ರಣ ಕಾರ್ಯಕ್ರಮ'ಕ್ಕೂ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.