ISKCON Bangalore: ಬೆಂಗಳೂರಿನ ಇಸ್ಕಾನ್‌ನಲ್ಲಿ ವೈಭವದಿಂದ ನಡೆದ 40ನೇ ವಾರ್ಷಿಕ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ
ISKCON Bangalore: ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯಿಂದ (ISKCON Bangalore) ರಾಜಾಜಿನಗರದ ಬೀದಿಬೀದಿಗಳು ಮಧುರ ಕೀರ್ತನೆಗಳು, ಮೃದಂಗ, ಕರತಾಳಗಳ ಸುಶ್ರಾವ್ಯ ಶಬ್ದಗಳಿಂದ ತುಂಬಿ ಪರಿಸರವನ್ನು ಸಂಗೀತಮಯವಾಗಿಸಿದವು.
ಬೆಂಗಳೂರು, ಜನವರಿ 19, 2025: ನಗರದ ಇಸ್ಕಾನ್‌ನಲ್ಲಿ 40ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯನ್ನು ಸಡಗರ, ಭಕ್ತಿ ಮತ್ತು ವೈಭವದಿಂದ ಆಚರಿಸಲಾಯಿತು. ಸಮಾಜದ ಹಲವು ಗಣ್ಯವ್ಯಕ್ತಿಗಳು ಪಾಲ್ಗೊಂಡಿದ್ದ ರಥಯಾತ್ರೆಯಲ್ಲಿ, ಭುವನಗಿರಿ ಆಶ್ರಮದ ಪರಮಪೂಜ್ಯ ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯವು ಕಾರ್ಯಕ್ರಮವನ್ನು ಕಳೆಕಟ್ಟುವಂತೆ ಮಾಡಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, "ಇಸ್ಕಾನ್ ಇರುವಿಕೆಯು ಬೆಂಗಳೂರನ್ನು ಒಂದು ಮಹಾನಗರದಿಂದ ಮಹಾಕ್ಷೇತ್ರವನ್ನಾಗಿ ಮಾರ್ಪಡಿಸಿದೆ. ಅಕ್ರೂರನು ಮೂಲ ಕೃಷ್ಣಬಲರಾಮ ರಥಯಾತ್ರೆಯನ್ನು ಮಾಡಿ, ಅವರನ್ನು ವೃಂದಾವನದಿಂದ ಮಥುರೆಗೆ ಕಂಸವಧೆಗಾಗಿ ಕರೆದೊಯ್ದ. ಪ್ರಸ್ತುತ ಸಮಯದಲ್ಲಿ, ಇಸ್ಕಾನ್ ಬೆಂಗಳೂರಿನ ಭಕ್ತರೂ ಅಕ್ರೂರನಂತೆ ಕೃಷ್ಣಬಲರಾಮ ರಥಯಾತ್ರೆಯನ್ನು ಆಚರಿಸುವ ಮೂಲಕ ದುಷ್ಟಶಕ್ತಿಗಳನ್ನು ಸೋಲಿಸಿ, ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಭಕ್ತಿಯ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, "ಇಸ್ಕಾನ್ ದೇವಸ್ಥಾನವನ್ನು ಪ್ರವೇಶ ಮಾಡಿದೊಡನೆಯೇ, ಬೇರೆಲ್ಲೂ ದೊರೆಯದ ಭಕ್ತಿಯುತ ಉತ್ಸಾಹ ಹಾಗೂ ಹುಮ್ಮಸ್ಸಿನ ಶಕ್ತಿಯು ನಮಗೆ ಪ್ರಾಪ್ತವಾಗುತ್ತದೆ. ನನ್ನ ಬಾಲ್ಯದಿಂದಲೂ ನನಗೆ ಇಸ್ಕಾನ್ ಒಡನಾಟವಿದೆ ಮತ್ತು ಆ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನಮ್ಮ ತಂದೆ ಗುಂಡೂರಾವ್ ಅವರು ಬೆಂಗಳೂರಿನ ಕ್ರೆಸೆಂಟ್ ರಸ್ತೆಯನ್ನು ಹರೇಕೃಷ್ಣ ರಸ್ತೆ ಎಂದು ನಾಮಕರಣ ಮಾಡಿದರು. ಈಗ ಇಸ್ಕಾನ್, ಬೆಂಗಳೂರು ನಗರದ ಅಗ್ರಮಾನ್ಯ ಪ್ರವಾಸಿ ತಾಣವಾಗಿದೆ. ಈ ಸಂಸ್ಥೆಗೆ ನನ್ನ ಬೆಂಬಲ ಯಾವಾಗಲೂ ಇದೆ" ಎಂದರು.
"ಭಾರತದ ಹೊರಗಡೆಯೂ ಹರೇಕೃಷ್ಣ ಆಂದೋಲನದ ಚಟುವಟಿಕೆಗಳು ಹರಡುತ್ತಿರುವುದನ್ನು ಕಂಡು ಬಹು ಸಂತಸವಾಗುತ್ತಿದೆ. ಇಸ್ಕಾನ್ ಭಕ್ತರೇ ನಿಜವಾಗಿ ಭಾರತದ ಸಾಂಸ್ಕೃತಿಕ ರಾಯಭಾರಿಗಳು!" ಎಂದು ಭಾರತದ ರಾಯಭಾರಿಗಳೂ, ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA)ದ ಉಪ ಮಹಾನಿರ್ದೇಶಕರೂ ಆದ ಪ್ರಶಾಂತ್ ಪೀಸೆ ಅವರು ರಥಯಾತ್ರೆಯ ಸಂದರ್ಭದಲ್ಲಿ ಹೇಳಿದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಯ್ಯನವರು ಮತ್ತು ಮಾಜಿ ಶಾಸಕರಾದ ನರೇಂದ್ರಬಾಬುರವರು, ಲಕ್ಷಾಂತರ ಭಕ್ತರನ್ನು ಹೊಂದಿರುವ ಇಸ್ಕಾನ್ ಬೆಂಗಳೂರಿನ ಕೆಲಸವನ್ನು ಪ್ರಶಂಸಿಸಿದರು.
ಜಾಗತಿಕ ಹರೇಕೃಷ್ಣ ಆಂದೋಲನದ ಅಧ್ಯಕ್ಷರೂ, ಅಕ್ಷಯಪಾತ್ರೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರೂ, ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರೂ ಆಗಿರುವ ಶ್ರೀ ಮಧುಪಂಡಿತ ದಾಸರು ತಮ್ಮ ನಿರರ್ಗಳ ಭಾಷಣದಲ್ಲಿ, "ಇಸ್ಕಾನ್ ಬೆಂಗಳೂರಿನ ಶ್ರೀ ಶ್ರೀ ಕೃಷ್ಣ ಬಲರಾಮರು ಹಲವಾರು ವರ್ಷಗಳಿಂದ ಲಕ್ಷಾಂತರ ಭಕ್ತರನ್ನು ಆಶೀರ್ವದಿಸುತ್ತಾ ಬಂದಿದ್ದಾರೆ. ಅವರ ಕೃಪೆಯಿಂದ, ನಾವು ಸದ್ಯದಲ್ಲೇ ಪ್ರತಿನಿತ್ಯ 6000ಕ್ಕೂ ಹೆಚ್ಚು ಯಾತ್ರಿಗಳಿಗೆ ಮಧ್ಯಾಹ್ನದ ಭೋಜನವನ್ನು ಒದಗಿಸುವ ಹೊಸ ಅನ್ನದಾನ ಭವನವನ್ನು ತೆರೆಯಲಿದ್ದೇವೆ" ಎಂದು ತಿಳಿಸಿದರು.
26 ಅಡಿ ಎತ್ತರದ ಭವ್ಯ ರಥವು, ಸುಂದರ ಅಲಂಕಾರಿಕ ವಸ್ತುಗಳು, ಆಧುನಿಕ ಸುರಕ್ಷಾ ಉಪಕರಣಗಳು ಮತ್ತು ವಿದ್ಯುಚ್ಚಾಲಿತ ಬ್ರೇಕ್ ವ್ಯವಸ್ಥೆಯನ್ನೊಳಗೊಂಡಿತ್ತು. ರಾಜಾಜಿನಗರದ ಬೀದಿಬೀದಿಗಳು ಮಧುರ ಕೀರ್ತನೆಗಳು, ಮೃದಂಗ, ಕರತಾಳಗಳ ಸುಶ್ರಾವ್ಯ ಶಬ್ದಗಳಿಂದ ತುಂಬಿ ಪರಿಸರವನ್ನು ಸಂಗೀತಮಯವಾಗಿಸಿದವು. ಈ ಅದ್ಭುತ ಆಧ್ಯಾತ್ಮಿಕ ಯಾತ್ರೆಯಲ್ಲಿ, ಭಕ್ತರು ಹೃತ್ಪೂರ್ವಕ ಪ್ರಾರ್ಥನೆಗಳ ಜತೆಗೆ, ರಥಾರೂಢರಾದ ಕೃಷ್ಣ-ಬಲರಾಮರಿಗೆ ಹಣ್ಣುಕಾಯಿ, ಬಗೆಬಗೆಯ ಹೂವುಗಳು, ಸಿಹಿತಿಂಡಿಗಳೇ ಮುಂತಾದ ಭಕ್ಷ್ಯಗಳನ್ನು ಅರ್ಪಿಸಿದರು.
ಈ ಸುದ್ದಿಯನ್ನೂ ಓದಿ | ISKCON elephants: ಅನಂತ್ ಅಂಬಾನಿಯ 'ವಂತಾರಾ' ಸೇರಲಿವೆ ಇಸ್ಕಾನ್ ಆನೆಗಳು
ನೂರಾರು ಸ್ವಯಂಸೇವಕರು ತಮ್ಮ ಅಚ್ಚುಕಟ್ಟಾದ ಸೇವೆಯಿಂದ, ಕಾರ್ಯಕ್ರಮವು ಸುಗಮವಾಗಿ ನಡೆಯಲು ಬೆಂಬಲ ನೀಡಿದರು. ರಥಯಾತ್ರೆಯ ಸಂದರ್ಭದಲ್ಲಿ ದಾರಿಯುದ್ದಕ್ಕೂ ನೆರೆದಿದ್ದ ಸಹಸ್ರಾರು ಜನರಿಗೆ ಉಚಿತ ಪ್ರಸಾದವನ್ನು ವಿತರಿಸಲಾಯಿತು.