Vishweshwar Bhat: ಯಶಸ್ಸನ್ನು ಗಳಿಸುವುದರೊಂದಿಗೆ ಉಳಿಸಿಕೊಳ್ಳುವುದೂ ಮುಖ್ಯ: ವಿಶ್ವೇಶ್ವರ ಭಟ್
Vishweshwar Bhat: ಸಂಸದ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಮಾತನಾಡಿದ್ದಾರೆ. ನಾವೇನಾದರೂ ಸಾಧನೆ ಮಾಡದಿದ್ದರೆ ಅದಕ್ಕೆ ನಾವು ಕಾರಣವಾಗುತ್ತೇವೆ ಹೊರತು ಬೇರೆಯವರಲ್ಲ. ಮುಂದಿನ 10 ವರ್ಷದಲ್ಲಿ ನೀವೇನಾಗಬೇಕು ಎನ್ನುವುದನ್ನು ನೀವು ನಿರ್ಧರಿಸಿ, ಆ ನಿಟ್ಟಿನಲ್ಲಿ ಪ್ರಯತ್ನಪಟ್ಟರೆ ಯಶಸ್ಸು ನಿಶ್ಚಿತವಾಗಿ ಸಿಗಲಿದೆ ಎಂದು ಸಲಹೆ ನೀಡಿದ್ದಾರೆ.

-

ಬೆಂಗಳೂರು: ಯಶಸ್ಸನ್ನು ಗಳಿಸುವುದಕ್ಕಿಂತ ಅದನ್ನು ಉಳಿಸಿಕೊಳ್ಳುವುದೂ ಮುಖ್ಯವಾಗುತ್ತದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರು ಅಭಿಪ್ರಾಯಪಟ್ಟರು. ಸಂಸದ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಯಶಸ್ಸನ್ನು ಗಳಿಸುವುದಕ್ಕಿಂತ ಅದನ್ನು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಯೊಬ್ಬ 99 ಅಂಕ ಪಡೆದ ಬಳಿಕ ಅದನ್ನು ಉಳಿಸಿಕೊಳ್ಳಲು ಅಥವಾ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದರೆ ಅದು ಆಕಸ್ಮಿಕವಾಗುತ್ತದೆ ಎಂದು ಹೇಳಿದರು.

ಇಂದಿನ ಕಾಲಘಟ್ಟದಲ್ಲಿರುವ ನಮಗೆ ಯಾವುದೇ ರೀತಿಯ ಸಾಧನೆಗೆ ಅವಕಾಶವಿದೆ. ಅಂತಹ ಅದ್ಭುತವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಯಾವುದೇ ರೀತಿಯ ಆಸೆ, ಗುರಿಯನ್ನು ಈಡೇರಿಸಿಕೊಳ್ಳಲು ನಾವು ಮನಸ್ಸು ಮಾಡಬೇಕು. ನಾವೇನಾದರೂ ಸಾಧನೆ ಮಾಡದಿದ್ದರೆ ಅದಕ್ಕೆ ನಾವು ಕಾರಣವಾಗುತ್ತೇವೆ ಹೊರತು ಬೇರೆಯವರಲ್ಲ. ಮುಂದಿನ 10 ವರ್ಷದಲ್ಲಿ ನೀವೇನಾಗಬೇಕು ಎನ್ನುವುದನ್ನು ನೀವು ನಿರ್ಧರಿಸಿ, ಆ ನಿಟ್ಟಿನಲ್ಲಿ ಪ್ರಯತ್ನಪಟ್ಟರೆ ಯಶಸ್ಸು ನಿಶ್ಚಿತವಾಗಿ ಸಿಗಲಿದೆ ಎಂದು ಸಲಹೆ ನೀಡಿದರು.
ಈ ಹಿಂದೆ ಅಮೆರಿಕ, ಲಂಡನ್‌ನಲ್ಲಿ ಓದಬೇಕು ಎಂದು ಅದು ಸುಲಭವಾಗಿರಲಿಲ್ಲ. ಆದರಿಂದು ಎಲ್ಲವೂ ಸಾಧ್ಯ. ಓದಿಗೆ ಹಣಕಾಸಿನ ಸಮಸ್ಯೆಯಿದ್ದರೆ, ತೇಜಸ್ವಿ ಸೂರ್ಯರಂತಹ ಅನೇಕ ದಾನಿಗಳು ಹಣಕಾಸಿನ ನೆರವಿಗೆ ಬರುತ್ತಾರೆ. ಆದರೆ ನಾವು ಮನಸ್ಸು ಮಾಡಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾವುದೇ ಭಾಷೆ, ಕಲೆಯನ್ನು ಮನೆಯಲ್ಲಿಯೇ ಕೂತು ಕಲಿಯಲು ಅವಕಾಶವಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ತೇಜಸ್ವಿ ಸೂರ್ಯ ಅವರು ಆರಂಭಿಸಿರುವ ನಮೋ ವಿದ್ಯಾನಿಧಿ ಯೋಜನೆಯಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್ ಛಬ್ಬಿ, ಬಿಎನ್‌ಎಂ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ನಾರಾಯಣ ರಾವ್ ಮಾನೆ, ಬಿಎನ್‌ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಎಸ್.ವಿ. ಕುಲಕರ್ಣಿ, ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್, ಬಸವರಾಜು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
![]()
ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ವೈಯಕ್ತಿಕವಾಗಿ ಇದು ನನಗೆ ತೃಪ್ತಿ ಸಿಗುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸಮಾಜದಲ್ಲಿ ಸಾಮಾಜಿಕ ಬದಲಾವಣೆಯಾಗಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎನ್ನುವ ಸಂದೇಶ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ.
-ತೇಜಸ್ವಿ ಸೂರ್ಯ, ಸಂಸದ
![]()
ಪರೀಕ್ಷೆಗೋಸ್ಕರ ತಯಾರಿ ನಡೆಸಿ ಅಂಕ ಪಡೆಯುವುದಕ್ಕಿಂತ ಹೆಚ್ಚಾಗಿ ಯಾವಾಗ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳುವ ರೀತಿಯಲ್ಲಿ ವಿದ್ಯಾರ್ಥಿಗಳು ಸಿದ್ಧವಾಗಬೇಕು. ಈ ರೀತಿಯ ತಯಾರಿಯನ್ನು ಎಂಎನ್‌ಸಿ ಸಂಸ್ಥೆಗಳು ನೋಡುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು, ಈ ನಿಟ್ಟಿನಲ್ಲಿ ತಯಾರಿ ನಡೆಸಬೇಕು.
-ನಾರಾಯಣರಾವ್ ಮಾನೆ, ಕಾರ್ಯದರ್ಶಿಗಳು, ಬಿಎನ್‌ಎಂ ವಿದ್ಯಾಸಂಸ್ಥೆ.