KV PraBhakar: ಜಚನಿ ಶ್ರೀಗಳು ಅಂತ್ಯಜರ ಪಾಲಿನ ಪ್ರಸಾದ ; ಕೆ.ವಿ.ಪ್ರಭಾಕರ್
ಮೇಲಿನವರ ಪಾಂಡಿತ್ಯ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದ ಅಧ್ಯಾತ್ಮವನ್ನು ಅಂತ್ಯಜರ ಪ್ರಸಾದವನ್ನಾಗಿಸಿದ್ದು ಜಚನಿ ಶ್ರೀಗಳ ಹೆಗ್ಗಳಿಕೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು. ಜನಮುಖಿ ಅಧ್ಯಾತ್ಮಿಕ ಶಿಖರ ಸೂರ್ಯರ ಕೃತಿಯನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಡುಮಾಮಿಡಿ ಶ್ರೀಗಳಿಗೆ ಧನ್ಯತೆಯನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು.
-
Vishakha Bhat
Oct 26, 2025 1:25 PM
ಬೆಂಗಳೂರು ಅ.26: ಮೇಲಿನವರ ಪಾಂಡಿತ್ಯ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದ ಅಧ್ಯಾತ್ಮವನ್ನು ಅಂತ್ಯಜರ ಪ್ರಸಾದವನ್ನಾಗಿಸಿದ್ದು ಜಚನಿ ಶ್ರೀಗಳ ಹೆಗ್ಗಳಿಕೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (KV PraBhakar) ಅಭಿಪ್ರಾಯ ಪಟ್ಟರು. ಶ್ರೀ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ಪ್ರಾರಂಭೋತ್ಸವದಲ್ಲಿ "ಶಿವ ಸಾಹಿತ್ಯ ಸೂರ್ಯ ಶ್ರೀ ಜಚನಿ" ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮನುಷ್ಯರನ್ನು ಮುಟ್ಟಿಸಿಕೊಳ್ಳದ ಚರ್ಮಶುದ್ಧಿಯ ಅಧ್ಯಾತ್ಮದ ಗೊಡ್ಡುತನವನ್ನು ಧಿಕ್ಕರಿಸಿ 1948ರಲ್ಲೇ ದಲಿತ ಸಮುದಾಯಕ್ಕೆ ತಮ್ಮ ಮಠವನ್ನು ಮುಕ್ತಗೊಳಿಸಿದ ಜಚನಿ ಶ್ರೀಗಳು ಸಾಮಾಜಿಕ ಮತ್ತು ಅಂತರಂಗದ ಶುದ್ಧಿಯನ್ನೇ ತಮ್ಮ ಅಧ್ಯಾತ್ಮದ ಉದ್ದೇಶವನ್ನಾಗಿಸಿಕೊಂಡಿದ್ದರು. ಆಡು ಮುಟ್ಟದ ಸೊಪ್ಪಿಲ್ಲ, ಜಚನಿ ಶ್ರೀಗಳು ಸಾಹಿತ್ಯ ಕೃಷಿ ಮಾಡದ ವಿಷಯಗಳೇ ಇಲ್ಲ ಎಂದು ಹೇಳಬಹುದು ಎಂದು ಅವರು ಹೇಳಿದರು.
ತಮ್ಮ ಬದುಕನ್ನು ಸಾಹಿತ್ಯ ಕೃಷಿ ಮತ್ತು ಅಧ್ಯಾತ್ಮದ ಪ್ರಸಾರಕ್ಕೆ ಮಾತ್ರ ಜಚನಿ ಶ್ರೀಗಳು ಸೀಮಿತಗೊಳಿಸಿಕೊಳ್ಳಲಿಲ್ಲ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಇಡೀ ರಾಜ್ಯ ಸುತ್ತಿದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರೂ ಆಗಿದ್ದಾರೆ ಎನ್ನುವುದು ಹೊರ ಜಗತ್ತಿಗೆ ಹೆಚ್ಚಾಗಿ ಗೊತ್ತಿಲ್ಲ.
ಭೌತವಿಜ್ಞಾನದಿಂದ ಸಮುದ್ರ ವಿಜ್ಞಾನದವರೆಗೂ, ರೈತರ ಸಮಸ್ಯೆಗಳಿಂದ ಕುಡುಕರ ಸಮಸ್ಯೆಗಳವರೆಗೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಹತ್ತಾರು ಮಂದಿ ಹಲವಾರು ಜೀವಮಾನದಲ್ಲಿ ಮಾಡಬಹುದಾದ ಸಾಧನೆಯನ್ನು ಜಚನಿ ಶ್ರೀಗಳು ಒಂದೇ ಜೀವಮಾನದಲ್ಲಿ ಮಾಡಿ ಮುಗಿಸಿದ್ದಾರೆ ಎಂದು ಕೆ.ವಿ.ಪ್ರಭಾಕರ್ ಹೇಳಿದ್ದಾರೆ.
ಜನಮುಖಿ ಅಧ್ಯಾತ್ಮಿಕ ಶಿಖರ ಸೂರ್ಯರ ಕೃತಿಯನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಡುಮಾಮಿಡಿ ಶ್ರೀಗಳಿಗೆ ಧನ್ಯತೆಯನ್ನು ಅರ್ಪಿಸುತ್ತೇನೆ. 12ನೇ ಶತಮಾನದ ವಚನಕ್ರಾಂತಿಯ ರಾಯಭಾರಿಯಾಗಿ 20ನೇ ಶತಮಾನದಲ್ಲಿ ಜಚನಿ ಶ್ರೀಗಳು ಬೆಳಗಿದ್ದಾರೆ. 6000 ಕ್ಕೂ ಹೆಚ್ಚು ಆಧುನಿಕ ವಚನಗಳು, 400ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿರುವುದು ನನ್ನ ಕಲ್ಪನಾ ಶಕ್ತಿಗೂ ನಿಲುಕದ ಅಧ್ಯಾತ್ಮಿಕ ಸಾಧನೆಯಾಗಿದೆ. ಇಂಥಾ ಮಾನವೀಯ ಸಾಧಕ ಗುರುಗಳ ಬಗ್ಗೆ ನಿಡುಮಾಮಿಡಿ ಶ್ರೀಗಳು ಸಂಪಾದಿಸಿರುವ ಈ ಪುಸ್ತಕ ಕೂಡ ಅತ್ಯಂತ ಮೌಲಿಕವಾದದ್ದು. ಈ ಪುಸ್ತಕ ಜಚನಿ ಶ್ರೀಗಳ ಒಟ್ಟಾರೆ ಸಾಧನೆಯನ್ನು ತಿಳಿಯಲು ಮತ್ತು ಅವರ ಮಾರ್ಗದಲ್ಲಿ ಹೋಗಲು ಬಯಸುವವರಿಗೆ ಹೆದ್ದಾರಿಯಾಗಿದೆ ಎಂದು ಹೇಳಲು ಬಯಸುತ್ತೇನೆ.
ಈ ಸುದ್ದಿಯನ್ನೂ ಓದಿ: ಪ್ರತಿಭೆ ಸಮಾಜದ ಉತ್ಪತ್ತಿ, ಸಮಾಜಮುಖಿಗಳಾಗೋಣ: ಕೆವಿಪಿ ಕರೆ
ಬೈಲಹೊಂಗಲದ ಅಂಬಡಗಟ್ಟಿ ಗ್ರಾಮದಲ್ಲಿ ಜನಿಸಿ, ನನ್ನ ಕೋಲಾರ ಜಿಲ್ಲೆಯ ಗೂಳೂರಿನ ನಿಡುಮಾಮಿಡಿ ಮಠದ ಪೀಠಾಧಿಪತಿಯಾಗಿ ಕೋಲಾರದ ಮಣ್ಣಿನಲ್ಲಿ ವನಚ ಕ್ರಾಂತಿಯ ಬೆಳಕಿನ ದೀವಿಗೆ ಹಚ್ಚಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ. ಜಗದ್ಗುರು ಚನ್ನಬಸವರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಗಳು "ಜಚನಿ ಶ್ರೀ" ಹೆಸರಿನಲ್ಲಿ ಕನ್ನಡ ಮಣ್ಣಿನಲ್ಲಿ ಶಾಶ್ವತ ನೆಲೆ ಗಳಿಸಿದ್ದಾರೆ. ಇವರ ಪುಸ್ತಕ ಬಿಡುಗಡೆ ಮಾಡುವ ಮೂಲಕ "ಜಚನಿ ಶ್ರೀ" ಗಳು ನನ್ನ ಅಂತರಂಗದಲ್ಲೂ ದಾಖಲಾಗಿದ್ದಾರೆ ಎನ್ನುವ ಧನ್ಯತೆಯನ್ನು ಅರ್ಪಿಸುತ್ತೇನೆ ಎಂದು ಕೆ.ವಿ.ಪ್ರಭಾಕರ್ ಹೇಳಿದರು.