Karnataka Budget 2026: ನಗರಾಭಿವೃದ್ಧಿ ಇಲಾಖೆಗೆ ಭರಪೂರ ಅನುದಾನ; ಈ ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಭರ್ಜರಿ ಅನುದಾನ ನೀಡಲಾಗಿದೆ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು 2026-27ರ ಬಜೆಟ್‌ನಲ್ಲಿ ನಮ್ಮ ಸರ್ಕಾರವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ರಸ್ತೆಗಳ ಸುಧಾರಣೆ, ಮೆಟ್ರೋ ವಿಸ್ತರಣೆ ಮತ್ತು ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ -
ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ (Karnataka Budget 2026) ನಗರಾಭಿವೃದ್ಧಿ ಇಲಾಖೆ ಭರಪೂರ ಅನುದಾನ ಸಿಕ್ಕಿದೆ. ಆಯವ್ಯಯದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ ಒಟ್ಟು 22,203 ಕೋಟಿ ರೂ. ಮೀಸಲಿಡಲಾಗಿದೆ. ಬೆಂಗಳೂರನ್ನು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವ ಉದ್ದೇಶದೊಂದಿಗೆ ಹಲವು ಉಪಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
- ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
- ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ 1,255 ಕೋಟಿ ರೂ.ಗಳ ಮೊತ್ತದ ವಾರ್ಡ್ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ.
- 1,700 ಕೋಟಿ ರೂ.ಗಳ ಮೊತ್ತದಲ್ಲಿ 158 ಕಿ.ಮೀ. ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ.
- 1,936 ಕೋಟಿ ರೂ.ಗಳ ಮೊತ್ತದ ಮುಖ್ಯ ಮತ್ತು ಉಪಮುಖ್ಯ (Arterial and Sub Arterial) ರಸ್ತೆಗಳ ಅಭಿವೃದ್ಧಿ.
- ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ 450 ಕೋಟಿ ರೂ.ಗಳ ಯೋಜನೆ.
- 273 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳು.
- ಬೆಂಗಳೂರಿನ ನಾಗರಿಕರಿಗೆ ಪಾರದರ್ಶಕ, ಜನಸ್ನೇಹಿ, ಸಹಭಾಗಿತ್ವವುಳ್ಳ ತುರ್ತು ಸ್ಪಂದನೆಯ ಆಡಳಿತವನ್ನು ಒದಗಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಹಾಗೂ ಐದು ಮಹಾನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ.
- 2025-26ನೇ ಸಾಲಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ 3,000 ಕೋಟಿ ರೂ. ಅನುದಾನವನ್ನು 7,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿಯೂ ಈ ಅನುದಾನವನ್ನು ಮುಂದುವರಿಸಲಾಗುವುದು.
- ರಸ್ತೆಗಳ ದೀರ್ಘ ಕಾಲದ ಬಾಳಿಕೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 450 ಕಿ.ಮೀ ಗೂ ಹೆಚ್ಚು ಉದ್ದದ ರಸ್ತೆಗಳನ್ನು 3,000 ಕೋಟಿ ರೂ.ಗಳ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು.
- ಬೆಂಗಳೂರು ನಗರ ಪಾಲಿಕೆಗಳ ಸ್ವಂತ ಸಂಪನ್ಮೂಲದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 175 ಜಂಕ್ಷನ್‌ಗಳ ಸೌಂದರ್ಯೀಕರಣ, 500 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಮೇಲ್ದರ್ಜೆಗೇರಿಸಲು ಮತ್ತು 100 Sky Walk ಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
- ವಿಶ್ವಬ್ಯಾಂಕ್ ನೆರವಿನ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮದ ಕ್ರಿಯಾಯೋಜನೆಯಡಿ ರಾಜಕಾಲುವೆಗಳ ಅಭಿವೃದ್ಧಿ / ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಒಟ್ಟು 2,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಅನುಷ್ಠಾನಗೊಳಿಸಲಾಗುತ್ತಿದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯ ಐದು ಮಹಾನಗರ ಪಾಲಿಕೆಗಳು ತಮ್ಮ Balance Sheet ಆಧಾರದಲ್ಲಿ ʻಮುನಿಸಿಪಲ್ ಬಾಂಡ್’ಗಳನ್ನು ಹೊರಡಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು.
- 2027ರ ಅಂತ್ಯದೊಳಗೆ ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಅನ್ನು (RMP) ಜಾರಿಗೊಳಿಸಲಾಗುವುದು. ಇದರ ಜೊತೆಗೆ ಸಮಗ್ರ ಮೊಬಿಲಿಟಿ ಯೋಜನೆಯನ್ನು (CMP) ಆರು ತಿಂಗಳೊಳಗೆ ರೂಪಿಸಲಾಗುವುದು.
- ʻನಮ್ಮ ಮೆಟ್ರೋ’ ದೇಶದ ಎರಡನೇ ಅತಿದೊಡ್ಡ ಮೆಟ್ರೋ ರೈಲು ಜಾಲವಾಗಿದೆ. ಪ್ರಸ್ತುತ ಕಾರ್ಯಾಚರಣಾ ಜಾಲವು 96 ಕಿ.ಮೀ. ಆಗಿದ್ದು, ಇದರಿಂದ ಪ್ರತಿ ದಿನ 10 ಲಕ್ಷ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದೆ. ಇಲ್ಲಿಯವರೆಗೂ ವೆಚ್ಚವಾಗಿರುವ 67,460 ಕೋಟಿ ರೂ.ಗಳಲ್ಲಿ ನಮ್ಮ ಸರ್ಕಾರದ ಪಾಲು 56, 376 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಪಾಲು 8,084 ಕೋಟಿ ರೂ.ಗಳಾಗಿರುತ್ತದೆ. ಇದು ರಾಜ್ಯ ಸರ್ಕಾರದ ಪಾಲಿನ ಶೇ.88ರಷ್ಟರ ಎದುರಾಗಿ ಕೇಂದ್ರದ ಪಾಲು ಕೇವಲ ಶೇ.12 ರಷ್ಟಿರುತ್ತದೆ.
- 2026–27ರ ಹಣಕಾಸು ವರ್ಷದಲ್ಲಿ ಒಟ್ಟು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
- ಹೊರ ವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್ ಉದ್ದಕ್ಕೂ 9 ಕಿ.ಮೀ ಪಾದಚಾರಿ ನಡಿಗೆ ಮಾರ್ಗವನ್ನು ಅಂದಾಜು 160 ಕೋಟಿ ರೂ.ಗಳ ವೆಚ್ಚದಲ್ಲಿ ಹೊರ ವರ್ತುಲ ಕಂಪನಿಗಳ ಸಂಘದ (ORRCA) ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗುವುದು.
- ಬೆಂಗಳೂರು ನಗರದ ಸುಮಾರು 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನೀರು ಸರಬರಾಜು ಯೋಜನೆಯ 1 ರಿಂದ 5ನೇ ಹಂತಗಳ ಮೂಲಕ ಒಟ್ಟು 2,225 MLD ನೀರು ಪೂರೈಸಲಾಗುತ್ತಿದೆ. ಇದೀಗ JICA ನೆರವಿನಿಂದ 6,939 ಕೋಟಿ ರೂ.ಗಳ ವೆಚ್ಚದಲ್ಲಿ ಹೆಚ್ಚುವರಿಯಾಗಿ ಆರು ಟಿ.ಎಂ.ಸಿ. ನೀರನ್ನು ಪೂರೈಸಲು ಕಾವೇರಿ 6ನೇ ಹಂತದ ಯೋಜನೆಯನ್ನು ನಮ್ಮ ಸರ್ಕಾರದಿಂದ ರೂಪಿಸಲಾಗಿದೆ.
- ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ ಉದ್ದದ ಬೆಂಗಳೂರು ಬಿಸ್‌ನೆಸ್ ಕಾರಿಡಾರ್ ಭಾಗ-1 ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ರೈತರಿಗೆ ಸಮರೋಪಾದಿಯಲ್ಲಿ ಪರಿಹಾರ ವಿತರಿಸಲಾಗುತ್ತಿದೆ. ಈ ರಸ್ತೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
- ಹೆಬ್ಬಾಳ ಜಂಕ್ಷನ್‌ನಿಂದ ಎಚ್.ಎಸ್.ಆರ್ ಲೇಔಟ್ ಸಿಲ್ಕ್ ಬೋರ್ಡ್‌ವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಹಾಗೂ ಕೆ.ಆರ್.ಪುರಂ ನಿಂದ ಮೈಸೂರು ರಸ್ತೆಯವರೆಗಿನ ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆಯ ಒಟ್ಟಾರೆ 40 ಕಿ.ಮಿ. ಉದ್ದದ ಸುರಂಗ ಮಾರ್ಗವನ್ನು 40,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ BOOT ಮಾದರಿಯಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ. ಮೊದಲನೇ ಹಂತದಲ್ಲಿ 17 ಕಿ.ಮಿ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯನ್ನು 17,780 ಕೋಟಿ ರೂ.ಗಳ ಮೊತ್ತಕ್ಕೆ ಟೆಂಡರ್ ಕರೆಯಲಾಗಿದೆ.
- ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ಸರ್ಕಲ್ ವರೆಗೆ ಸುರಂಗ ಮಾರ್ಗ (Tunnel Road) ಹಾಗೂ ಮೇಲು ಸೇತುವೆ (Elevated) ರಸ್ತೆಯನ್ನು 2,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುವುದು.
- ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು BMRDA ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಿಸಲಾಗುವುದು.
ಅಮೃತ್ ಯೋಜನೆಯಡಿ 3,885 ಕೋಟಿ ರೂ. ವೆಚ್ಚದ ಕಾಮಗಾರಿಗಳ ಅನುಷ್ಠಾನ
ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4 ರಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು 3,885 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ 1,716 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ರಾಜ್ಯದ ನಗರಗಳ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಒಳಚರಂಡಿ ಕಾಮಗಾರಿಗಳನ್ನು ಅಣ್ಣಿಗೇರಿ, ಗುಂಡ್ಲುಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಕೈಗೊಳ್ಳಲಾಗುವುದು. ಜೊತೆಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ micro ಅನುದಾನದ ನೆರವಿನೊಂದಿಗೆ ಆಳಂದ, ಅಫ್ಜಲ್‌ಪುರ, ಚಿತ್ತಾಪುರ, ಯಾದಗಿರಿ, ಹರಪನಹಳ್ಳಿ, ಜೇವರ್ಗಿ ಹಾಗೂ ಸುರಪುರ ಪಟ್ಟಣಗಳಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
ಹೊಸದಾಗಿ ಮೇಲ್ದರ್ಜೆಗೇರಿಸಲಾದ ರಾಯಚೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ಮಹಾತ್ಮಾಗಾಂಧಿ ನಗರ ವಿಕಾಸ್ ಯೋಜನೆ 2.0ರಡಿ 2026-27ನೇ ಸಾಲಿನಲ್ಲಿ ತಲಾ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕೀಕೃತ ಆಸ್ತಿ ತೆರಿಗೆ ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜನೆಗೊಳಿಸಲಾಗುವುದು. ತೆರಿಗೆ ಬೇಡಿಕೆ ಮತ್ತು ಬಾಕಿ ವಿವರಗಳನ್ನು ಸ್ವಯಂ ಚಾಲಿತವಾಗಿ ಸೃಜಿಸುವ Unified Property Tax ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
100 ʻMiyawaki ಪಾರ್ಕ್‌ಗಳ ನಿರ್ಮಾಣ
ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ಹಾಗೂ ಏಕರೂಪದ ನೀತಿಯನ್ನು ಪಾಲಿಸಲು ʻThe Estate Management Rules, 2026ʼ ಅನ್ನು ಜಾರಿಗೊಳಿಸಲಾಗುವುದು. ನಗರ ಪ್ರದೇಶಗಳ ಆಯ್ದ ಜಾಗಗಳಲ್ಲಿ ಸ್ಥಳೀಯ ಸಸ್ಯಗಳನ್ನು ದಟ್ಟವಾಗಿ ನೆಟ್ಟು ನೈಸರ್ಗಿಕ ಹಸಿರು ಪ್ರದೇಶಗಳನ್ನಾಗಿಸಲು 100 ʻMiyawaki ಪಾರ್ಕ್ʼ ಗಳನ್ನು ನಿರ್ಮಿಸಲಾಗುವುದು.
ನಮ್ಮ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ನಾಲ್ಕು ನಗರಸಭೆಗಳನ್ನು ಮಹಾನಗರ ಪಾಲಿಕೆಗಳನ್ನಾಗಿ, 13 ಪುರಸಭೆಗಳನ್ನು ನಗರಸಭೆಗಳನ್ನಾಗಿ, ಮೂರು ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಹಾಗೂ 16 ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಧಾರವಾಡ, ಬೆಂಗಳೂರಿನಲ್ಲಿ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭ
ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬರುವ ವಿದ್ಯಾರ್ಥಿಗಳಿಗಾಗಿ ಧಾರವಾಡದಲ್ಲಿ ನಾಲ್ಕು ಹಾಗೂ ಬೆಂಗಳೂರಿನಲ್ಲಿ ಎರಡು ʻವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ʼ ಗಳನ್ನು ಪ್ರಾರಂಭಿಸಲಾಗುವುದು.
ಕಲಬುರಗಿ ನಗರಕ್ಕೆ 24/7 ಶಾಶ್ವತವಾಗಿ ಗುಣಮಟ್ಟದ ನೀರನ್ನು ಒದಗಿಸಲು ಅಂದಾಜು 1,863 ಕೋಟಿ ರೂ. ವೆಚ್ಚದ ಕಾಮಗಾರಿಗೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು.
Karnataka Budget 2026: ಎರಡು ಹಜ್ ಭವನ ಸೇರಿದಂತೆ ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಧಮಾಕಾ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ವಿವಿಧ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ವಿಶೇಷ ಮಹತ್ವ
- ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರದ ಅನುದಾನದ ಕೊರತೆಯ ನಡುವೆ ರಾಜ್ಯ ಸರ್ಕಾರದಿಂದ ಪ್ರಸ್ತುತ ಈ ಯೋಜನೆಗಾಗಿ 10,433 ಕೋಟಿ ರೂ. ಮೀಸಲು.
- 'ಪ್ರಗತಿ ಪಥ' ಯೋಜನೆಯಡಿ 783 ರಸ್ತೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 655 ರಸ್ತೆಗಳ ಡಿ.ಪಿ.ಆರ್.ಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಮೀಸಲು.
- ಗ್ರಾಮ ಪಂಚಾಯಿತಿಗಳನ್ನು ಸಬಲಗೊಳಿಸಿ ಗ್ರಾಮೀಣ ಜೀವನೋಪಾಯ ಬಲಪಡಿಸಿದ್ದ ಮನರೇಗಾ ಪುನಃಸ್ಥಾಪಿಸುವಂತೆ ತೀವ್ರ ಆಗ್ರಹ ಮಾಡಲಾಗುತ್ತದೆ. ಗ್ರಾಮೀಣ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಹಾಗೂ ವಿಕೇಂದ್ರೀಕೃತ ಆಡಳಿತದ ತತ್ವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಕ್ರಮ, ಅಗತ್ಯವಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.