ವಿಬಿ ಜಿ ರಾಮ್ ಜಿ ಬಗ್ಗೆ ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸಚಿವ ಸಂಪುಟ ತೀರ್ಮಾನ
ಸಂವಿಧಾನದ 73ನೇ ತಿದ್ದುಪಡಿಯಾದ ನಂತರ ದೇಶದಲ್ಲಿ ವಿಕೇಂದ್ರೀಕರಣವಾಗಿದೆ. ವಿಬಿ ಜಿ ರಾಮ್ ಜಿ ಯೋಜನೆಯಿಂದ ವಿಕೇಂದ್ರೀಕರಣಕ್ಕೆ ಕೊಡಲಿ ಏಟು ಬಿದ್ದಿದೆ. ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಮನರೇಗಾ ವಾಪಸ್ ಪಡೆಯಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜ.8: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (VB–G RAM G Bill) ಕೇಂದ್ರ ಸರ್ಕಾರ ಹಿಂಪಡೆದಿರುವ ಬಗ್ಗೆ ಸಚಿವ ಸಂಪುಟ ಸಭೆ ಚರ್ಚೆ ನಡೆಸಿದ್ದು, ಇದರ ಬದಲಿಗೆ ತಂದಿರುವ 'ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು. ಸಚಿವ ಸಂಪುಟ ಸಭೆ ನಂತರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾತನಾಡಿದ್ದಾರೆ.
ಜನರ ನ್ಯಾಯಾಲಯಕ್ಕೂ ವಿಬಿ ಜಿ ರಾಮ್ ಜಿ ಯೋಜನೆಯನ್ನು ತೆಗೆದುಕೊಂಡು ಹೋಗಲು ನಿರ್ಣಯಿಸಲಾಗಿದೆ ಎಂದ ಅವರು, ಸಂವಿಧಾನದ 73ನೇ ತಿದ್ದುಪಡಿಯಾದ ನಂತರ ದೇಶದಲ್ಲಿ ವಿಕೇಂದ್ರೀಕರಣವಾಗಿದೆ. ಈ ಯೋಜನೆಯಿಂದ ವಿಕೇಂದ್ರೀಕರಣಕ್ಕೆ ಕೊಡಲಿ ಏಟು ಬಿದ್ದಿದೆ. ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು MGNREGA ವಾಪಸ್ಸು ಪಡೆಯುವ ಮೂಲಕ ಮಾಡಲಾಗಿದೆ ಎಂದರು.
MGNREGA ಮೂಲಕ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣವಾಗುತ್ತಿತ್ತು. ಈಗ ಕರಾಳ ಕಾನೂನು ತಂದು ಕಾರ್ಮಿಕರು ಗುತ್ತಿಗೆದಾರರು ಮಾಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕಿದೆ. ಕೂಲಿಕಾರರ ಹಿತ ಕಾಪಾಡುವ ಆಸಕ್ತಿಯನ್ನು ಕೇಂದ್ರ ಸರ್ಕಾರ ತೋರಿಸಿಲ್ಲ . ಬದಲಿಗೆ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ. ಗ್ರಾಮಗಳಲ್ಲಿ ಯಾವ ಕೆಲಸವಾಗಬೇಕೆಂದು ತೀರ್ಮಾನಿಸುವ ಅಧಿಕಾರ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೆಲಸ ಎಲ್ಲಿ ಆಗಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಈ ಕರಾಳ ಶಾಸನವನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಹಾಗೂ ಜನರ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಮೇಲ್ನೋಟಕ್ಕೆ 125 ದಿನ ಕೆಲಸ ನೀಡುವುದು ಎಂದಿದ್ದರೂ, ನಿರ್ದಿಷ್ಟವಾಗಿ ಆಗುವಂತಿಲ್ಲ. ಇದಕ್ಕೆ ಹಣವೆಲ್ಲಿದೆ. ಶೇ.40% ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳುವಂತಿದ್ದರೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಚರ್ಚೆ ಮಾಡಬೇಕು. ಆದರೆ ಹಾಗೆ ಆಗಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸುಗಳು ಅನುಷ್ಠಾನಕ್ಕೆ ಬಂದ ನಂತರ ಇದನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದರು.
ಬಿ ಖಾತಾ ಆಸ್ತಿಗೆ ಎ ಖಾತಾ, ಗೃಹ ಕಾರ್ಮಿಕರ ಮಸೂದೆಗೆ ಅಸ್ತು; ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ
ಶೀಘ್ರದಲ್ಲಿ ಪಂಚಾಯತ್ ಚುನಾವಣೆ
ಪಂಚಾಯತಿ ಚುನಾವಣೆಯನ್ನು ಆದಷ್ಟು ಶೀಘ್ರವಾಗಿ ನಡೆಸಲು ತೀರ್ಮಾನಿಸಿದೆ. ಹಲವಾರು ಪಂಚಾಯ್ತಿಗಳು ಸುಪ್ರೀಂ ಕೋರ್ಟಿಗೆ ಹೋಗುವಂತೆ ರಾಜ್ಯ ಸರ್ಕಾರವನ್ನು ಕೋರಿವೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದರು.