ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಮದ್ಯದ ದರ ಏರಿಕೆ (Liquor Price Hike) ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮೇ 1 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಇದು ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ.
ರಾಜ್ಯದ ಮದ್ಯ ಅಬಕಾರಿ ತೆರಿಗೆ ವ್ಯವಸ್ಥೆಯನ್ನು ಪರಿಶೀಲಿಸಲು ಕರ್ನಾಟಕ ಸರ್ಕಾರ ರಚಿಸಿದ್ದ ಸಂಪನ್ಮೂಲ ಸಂಗ್ರಹ ಸಮಿತಿ (RMC) ಇತ್ತೀಚೆಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ಮದ್ಯದ ಅಂಶದ ಆಧಾರದ ಮೇಲೆ ತೆರಿಗೆ ವಿಧಿಸಲು ಶಿಫಾರಸು ಮಾಡಲಾಗಿತ್ತು. ಹೀಗಾಗಿ ಶೀಘ್ರದಲ್ಲೇ ಅಬಕಾರಿ ತೆರಿಗೆ ಪರಿಷ್ಕರಣೆಯಾಗಲಿದ್ದು, ಮದ್ಯದ ದರ ಏರಿಕೆ ಸಾಧ್ಯತೆ ಇದೆ.
ಏನಿದು ಹೊಸ ಎಐಬಿ ನೀತಿ?
ರಾಜ್ಯ ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ (Alcohol-in-Beverage) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದರೂ, ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ.20ರಷ್ಟು ಏರಿಕೆಯಾಗಲಿದೆ.
ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಶೇ. 80ರಷ್ಟು ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮದ್ಯದ ದರ ಎಷ್ಟು ಹೆಚ್ಚಾಗಲಿದೆ?
- ಸ್ಲ್ಯಾಬ್-1: 80 ರಿಂದ 95 ರೂ.ಗೆ ಏರಿಕೆ
- ಸ್ಲ್ಯಾಬ್-2: 95 ರಿಂದ 110ರೂ. ಏರಿಕೆ
- ಸ್ಲ್ಯಾಬ್-3: 120 ರಿಂದ 135 ರೂ.ಗೆ ಏರಿಕೆ
- ಸ್ಲ್ಯಾಬ್-4: 150 ರಿಂದ 170 ರೂ.ಗೆ ಏರಿಕೆ
ಒಂದು ಫುಲ್ ಬಾಟಲ್ ಮದ್ಯದ ಮೇಲೆ ಎಂಆರ್‌ಪಿ ದರದಲ್ಲಿ ಸುಮಾರು 50 ರಿಂದ 100 ರೂಪಾಯಿಗಳಷ್ಟು ಹೆಚ್ಚಳವಾಗಲಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಈ ಹೊರೆ ಮತ್ತಷ್ಟು ಹೆಚ್ಚಾಗಲಿದೆ.
ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರದ ನಿರ್ಬಂಧ ಸಡಿಲಿಸಿ; ಕೇಂದ್ರ ರಕ್ಷಣಾ ಸಚಿವರಿಗೆ ಡಿ.ಕೆ.ಶಿವಕುಮಾರ್ ಮನವಿ
ಮದ್ಯಪ್ರಿಯರ ಆಕ್ರೋಶ
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಐದನೇ ಬಾರಿಗೆ ದರ ಏರಿಕೆ ಮಾಡುತ್ತಿರುವುದಕ್ಕೆ ಮದ್ಯಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕುಡುಕರನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಪಾನಪ್ರಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.