ಬೆಂಗಳೂರು: ರಾಜ್ಯದ ಶ್ರಮಿಕ ವರ್ಗಕ್ಕೆ ಕರ್ನಾಟಕ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕಾರ್ಮಿಕರ ಕನಿಷ್ಠ ವೇತನವನ್ನು (Minimum wages) ಶೇ.60ರಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ತೀರ್ಮಾನದಿಂದಾಗಿ ರಾಜ್ಯಾದ್ಯಂತ ಒಂದು ಕೋಟಿಗೂ ಅಧಿಕ ಅಸಂಘಟಿತ, ನಿಗದಿತ ವಲಯದ ಕಾರ್ಮಿಕರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.
ವೇತನ ಲೆಕ್ಕಾಚಾರ ಸುಲಭವಾಗಿಸಲು ಈ ಹಿಂದೆ ಇದ್ದ 4 ವಲಯಗಳ ವರ್ಗೀಕರಣವನ್ನು 3 ವಲಯಗಳಿಗೆ ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ವೇತನ ಪಟ್ಟಿಯು ಖಾಸಗಿ ಶಾಲೆ- ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಇ ಕಾಮರ್ಸ್ ಮತ್ತು ಕೊರಿಯರ್ ಸಂಸ್ಥೆಗಳ ನೌಕರರು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿಗೂ ಅನ್ವಯಿಸಲಿದೆ.
ಅಧಿಸೂಚನೆಯಲ್ಲಿ ಈ ಕೆಳಕಂಡಂತೆ ಮೂರು ವಲಯಗಳಾಗಿ ವಿಭಾಗಿಸಿ, ಉದ್ಯೋಗಿಗಳನ್ನು ಅಕುಶಲ, ಅರೆಕುಶಲ, ಕುಶಲ, ಅತಿಕುಶಲ ಎಂದು ನಾಲ್ಕು ಪ್ರವರ್ಗಗಳನ್ನಾಗಿ ವಿಂಗಡಿಸಲಾಗಿದೆ.
ವಲಯ-1: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ಬರುವ ಪ್ರದೇಶಗಳು.
ವಲಯ-2: ರಾಜ್ಯದ ಇತರೆ ಮಹಾನಗರ ಪಾಲಿಕೆಗಳು ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳು.
ವಲಯ-3: ವಲಯ-1 ಮತ್ತು 2 ರಲ್ಲಿ ನಮೂದಿಸಿದ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳು.

ಉದ್ಯೋಗದಾತರು, ಕೈಗಾರಿಕಾ ಮುಖ್ಯಸ್ಥರು ಮತ್ತು ಕಾರ್ಮಿಕ ಸಂಘಗಳಿಂದ ಸ್ವೀಕೃತವಾದ ಆಕ್ಷೇಪಣೆಗಳು, ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿ, ಕನಿಷ್ಠ ವೇತನ ಕಾಯ್ದೆ, 1948ರ (ಕೇಂದ್ರ ಕಾಯ್ದೆ: XI) ರ ಕಲಂ 3(1)(ಬಿ) ಮತ್ತು 5(1)(ಬಿ) ಅಡಿಯಲ್ಲಿ ಕನಿಷ್ಠ ವೇತನ ದರಗಳನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.
ಶ್ರಮಿಕರ ಬಾಳಿಗೆ ಹೊಸ ಭರವಸೆ: ಸಚಿವ ಸಂತೋಷ್ ಲಾಡ್
ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರತಿಕ್ರಿಯಿಸಿ, ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60 ಏರಿಕೆ ಮಾಡಿ ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ನಾಡಿನ ಶ್ರಮಿಕರ ಬಹು ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಈ ಅಧಿಸೂಚನೆಯು ರಾಜ್ಯದ ಅಸಂಘಟಿತ ವಲಯ ಹಾಗೂ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ. ಕನಿಷ್ಠ ವೇತನ ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸಿ, ಈ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ, ಈ ಮೊದಲಿದ್ದ ನಾಲ್ಕು ವಲಯಗಳ ವರ್ಗೀಕರಣದ ಬದಲಾಗಿ ಇದೇ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ. ಒಟ್ಟಿನಲ್ಲಿ ನಾಡಿನ 81 ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುವ ಲಕ್ಷಾಂತರ ಶ್ರಮಿಕರ ಬಾಳಿಗೆ ಈ ಪರಿಷ್ಕೃತ ವೇತನ ಹೊಸ ಭರವಸೆ ತುಂಬಲಿದೆ.
ನಮ್ಮ ಕಾರ್ಮಿಕ ಇಲಾಖೆಯ ಇಂತಹ ದಿಟ್ಟ ನಿರ್ಧಾರಕ್ಕೆ ಸಲಹೆ ಸೂಚನೆಗಳನ್ನು ನೀಡಿ, ಪ್ರೋತ್ಸಾಹಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಅಮೂಲ್ಯ ಸಲಹೆಗಳನ್ನು ನೀಡಿದ ಎಲ್ಲ ತಜ್ಞರಿಗೆ ಸಮಸ್ತ ಶ್ರಮಿಕ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಾರ್ಮಿಕ ವರ್ಗದ ದಿಟ್ಟ ಹೋರಾಟಕ್ಕೆ ಸಂದ ಮಹತ್ವದ ಜಯ: AIUTUC
ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ಬಗ್ಗೆ ಎಐಯುಟಿಯುಸಿ ಪ್ರತಿಕ್ರಿಯಿಸಿ, ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಿರುವುದನ್ನು AIUTUC ರಾಜ್ಯ ಸಮಿತಿಯು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತದೆ. ಇದು ಕಾರ್ಮಿಕ ವರ್ಗದ ದೃಢ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದೆ.
ತೀವ್ರ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ವೇತನ ಹೆಚ್ಚಿಸುವಂತೆ AIUTUC ಅನೇಕ ಬಾರಿ ಸ್ವತಂತ್ರವಾಗಿ ಹಾಗೂ ಇತರ ಕಾರ್ಮಿಕ ಸಂಘಗಳೊಂದಿಗೆ ಸೇರಿ ಜಂಟಿ ಹೋರಾಟ ಮಾಡಿದ್ದನ್ನು, ಇತ್ತೀಚೆಗೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬೃಹತ್ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಕನಿಷ್ಠ ₹36,000 ವೇತನ ನಿಗದಿಪಡಿಸಬೇಕೆಂದು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದವು. ಆದರೆ ಮಾಲೀಕ ವರ್ಗವು ಇದಕ್ಕೆ ತೀವ್ರ ಅಡ್ಡಿಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ರೆಪ್ತಕೋಸ್ ಬ್ರೆಟ್ ಆಂಡ್ ಕಂ’ (Reptakos Brett) ಪ್ರಕರಣದ ಮಾನದಂಡಗಳನ್ನು ಆಧರಿಸಿ ವೇತನ ನಿಗದಿಪಡಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದ್ದು, ಕಾರ್ಮಿಕರ ಹೋರಾಟಕ್ಕೆ ಕಾನೂನಾತ್ಮಕ ಬಲ ದೊರೆತಂತಾಗಿತ್ತು. ಕನಿಷ್ಠ ವೇತನ ಸಲಹಾ ಮಂಡಳಿಯಲ್ಲಿ (Minimum Wages Advisory Board) ನಡೆದ ಹಲವಾರು ಸುತ್ತಿನ ತೀವ್ರ ಚರ್ಚೆಗಳ ನಂತರ ಈ ವೇತನ ಹೆಚ್ಚಳದ ಶಿಫಾರಸ್ಸನ್ನು ಸಲ್ಲಿಸಿದ್ದರೂ ಸಹ, ಮಾಲೀಕ ವರ್ಗದ ಒತ್ತಡಕ್ಕೆ ಮಣಿದಿದ್ದ ಸರ್ಕಾರವು ಆದೇಶ ಜಾರಿ ಮಾಡಲು ಮೀನಮೇಷ ಎಣಿಸುತ್ತಿತ್ತು. ಇದನ್ನು ಪ್ರತಿಭಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಇದೇ ಮೇ 27 ರಂದು ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ನೀಡಿತ್ತು. ಹೋರಾಟದ ತೀವ್ರತೆಯನ್ನು ಅರಿತ ಸರ್ಕಾರವು ಕೊನೆಗೂ ಮಣಿದು, ಈ ಆದೇಶವನ್ನು ಹೊರಡಿಸಿದೆ. ಇದು ಕಾರ್ಮಿಕರ ಹೋರಾಟದ ಶಕ್ತಿಗೆ ಸಿಕ್ಕ ಪ್ರತಿಫಲವಾಗಿದೆ.
ಆದರೆ ಗಾರ್ಮೆಂಟ್ ಹಾಗೂ ಪ್ಲಾಂಟೇಷನ್ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಈ ಪರಿಷ್ಕರಣೆಯಿಂದ ಹೊರಗೆ ಇಟ್ಟಿರುವುದು, ರಾಜ್ಯದಲ್ಲಿನ ಬಹುದೊಡ್ಡ ಕಾರ್ಮಿಕ ಸಮೂಹ, ಅದರಲ್ಲೂ ವಿಶೇಷವಾಗಿ ಮಹಿಳಾ ಕಾರ್ಮಿಕರನ್ನು ವೇತನ ಹೆಚ್ಚಳದಿಂದ ವಂಚಿತಗೊಳಿಸಿರುವುದು ಖಂಡನಾರ್ಹ. ತಕ್ಷಣವೇ ಈ ಕಾರ್ಮಿಕರ ಕನಿಷ್ಟ ವೇತನ ಪರಿಷ್ಕರಿಸಬೇಕೆಂದು AIUTUC ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ತಿಳಿಸಿದೆ.