ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru’s New Cricket Stadium: ಬೆಂಗಳೂರಿನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಸೂರ್ಯಗ್ರಾಮದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ, ಮುಖ್ಯಮಂತ್ರಿಗಳ "ನಮ್ಮ ಮನೆ" ಯೋಜನೆಗೆ ಚಾಲನೆ, ಸೂರ್ಯಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಸಾಂಕೇತಿಕ ನಿವೇಶನ ಹಂಚಿಕೆ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗೆ ಸಿಎಂ ಶಂಕುಸ್ಥಾಪನೆ

ಆನೇಕಲ್‌ನಲ್ಲಿ ನೂತನ ಕ್ರಿಕೆಟ್‌ ಸ್ಟೇಡಿಯಂಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. -

Prabhakara R
Prabhakara R May 23, 2026 3:29 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸೂರ್ಯನಗರ 4ನೇ ಹಂತದ ಕೆಹೆಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ದೇಶದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ (Bengaluru’s New Cricket Stadium) ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ವೇಳೆ ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳುʼ ನಮ್ಮ ಮನೆ ಯೋಜನೆʼಗೆ ಚಾಲನೆ, ಸೂರ್ಯ ಶೈನ್‌ ಮತ್ತು ಸೂರ್ಯ ಡಿವೈನ್‌ ವಸತಿ ಸಮುಚ್ಛಯ ಕಾಮಗಾರಿಗಳಿಗೆ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರುಗಳಿಗೆ ಸಾಂಕೇತಿಕ ನಿವೇಶನ ಹಂಚಿಕೆ, ಸಾರ್ವಜನಿಕ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡಿದರು.

Bengaluru’s New Cricket Stadium (2)

ಕ್ರೀಡೆ, ಪ್ರವಾಸೋದ್ಯಮ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾಂದಿ: ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ ಎಂದು ಹೇಳಿದರು.

ಇಲ್ಲಿಯವರೆಗೂ ಕೇವಲ ವಸತಿ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಮತ್ತು KHB ಈಗ 80 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಗತಿಯ ದೂರದೃಷ್ಟಿಯಾಗಿದೆ. ಇದಕ್ಕಾಗಿ ಶಿವಲಿಂಗೇಗೌಡರು ಮತ್ತು ಜಮೀರ್ ಅಹಮದ್ ಅವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Bengaluru’s New Cricket Stadium (3)

ಗುಜರಾತ್ ನಲ್ಲಿರುವ ಕ್ರೀಡಾಂಗಣ 90 ಸಾವಿರ ಆಸನ ವ್ಯವಸ್ಥೆ ಇರುವಂಥಾದ್ದು. ನಮ್ಮ ರಾಜ್ಯದ್ದು ಎರಡನೇ ದೊಡ್ಡ ಕ್ರೀಡಾಂಗಣವಾಗಿದೆ. ಇದರಿಂದ ಪ್ರವಾಸೋದ್ಯಮದ ಪ್ರಗತಿಯ ಜೊತೆಗೆ ಸುತ್ತ ಮುತ್ತಲ ಊರುಗಳ ಆರ್ಥಿಕತೆಯೂ ಹೆಚ್ಚುತ್ತದೆ. ಉದ್ಯೋಗವೂ ಹೆಚ್ವುತ್ತದೆ. ಸರ್ಕಾರದ ಆರ್ಥಿಕ ನೆರವಿಲ್ಲದೆ KHB ಹಣದಿಂದಲೇ ಕ್ರೀಡಾಂಗಣ ನಿರ್ಮಾಣ ಆಗಲಿದೆ ಎಂದು ಶಿವಲಿಂಗೇಗೌಡರು ಹೇಳಿದ್ದಾರೆ ಎಂದು ಸಿಎಂ ಉಲ್ಲೇಖಿಸಿದರು.

ಖಾಲಿ ಇರುವ KHB ನಿವೇಶನಗಳ ಮಾರಾಟದಿಂದ KHB ಗೆ 20ಸಾವಿರ ಕೋಟಿ ಆದಾಯ ಬರುವ ಅಂದಾಜಿದೆ. ನೆತ್ತಿ ಮೇಲೆ ಸೂರು ಇರಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಈಗ ಭೂಮಿ ಬೆಲೆ ಹೆಚ್ಚುತ್ತಿರುವುದರಿಂದ ಬಡ, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ kHB ನಿವೇಶನಗಳನ್ನು ನಿರ್ಮಿಸಿ ಒದಗಿಸುತ್ತಿದೆ ಎಂದರು.

Bengaluru’s New Cricket Stadium (4)

ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಧಿಕಾರಿಗಳು ಈ ಕೆಲಸವನ್ನೂ ಆರಂಭಿಸುತ್ತಾರೆ. ಕ್ರೀಡಾಂಗಣ, ರಸ್ತೆ ಮಾತ್ರವಲ್ಲದೆ ವಸತಿ ಇಲಾಖೆ ಈ ಬಾರಿ ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳನ್ನೂ ರಾಜ್ಯದಲ್ಲಿ ನೀಡಲಾಗಿದೆ ಎಂದರು.

Bengaluru’s New Cricket Stadium (5)

ಹೀಗಾಗಿ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿಗೆ ನಾವು ನಾಂದಿ ಹಾಡಿದ್ದೇವೆ ಎಂದರು.

Bengaluru’s New Cricket Stadium (6)

ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ವಸತಿ ಸಚಿವ ಜಮೀರ್ ಅಹಮದ್, ಕೆಹೆಚ್ ಬಿ ಅಧ್ಯಕ್ಷರಾದ ಶಾಸಕ ಶಿವಲಿಂಗೇಗೌಡ, ಶಾಸಕ ಆನೇಕಲ್ ಶಿವಣ್ಣ, ಹಿರಿಯ ಶಾಸಕರುಗಳಾದ ಟಿ.ಬಿ.ಜಯಚಂದ್ರ, ಕೃಷ್ಣಪ್ಪ, ಮಾಜಿ ಸಂಸದ ಡಿ.ಕೆ.ಸುರೇಶ್, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ಅಬ್ಬಯ್ಯ, MLC ರಾಮೋಜಿಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.



943 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ

ನೂತನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಅನ್ನು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದಲ್ಲಿ (ಇಂಡ್ಲವಾಡಿ ಗ್ರಾಮ) ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ‘ಕೆಎಚ್‍ಬಿ ಸೂರ್ಯ ಕ್ರೀಡಾ ಗ್ರಾಮ’ ಯೋಜನೆಯಡಿ ನಿರ್ಮಿಸಲಾಗುತ್ತಿದೆ.

ನೂತನ ಕ್ರಿಕೆಟ್‌ ಸ್ಟೇಡಿಯಂ ವಿಶೇಷತೆಗಳೇನು?

  • 943 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
  • 80,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಸ್ಟೇಡಿಯಂ
  • ಭಾರತದ 2ನೇ ಅತಿದೊಡ್ಡ ಕ್ರೀಡಾಂಗಣ
  • ಮೆಟ್ರೋ ಸಂಪರ್ಕದೊಂದಿಗೆ ವಿಶ್ವಮಟ್ಟದ ಸೌಲಭ್ಯ
  • ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದು

ಕ್ರೀಡಾಂಗಣದಲ್ಲಿ ಆಧುನಿಕ ಸೌಲಭ್ಯಗಳು, ಹಾಸ್ಪಿಟಾಲಿಟಿ ಲೌಂಜ್‌ಗಳು, ವಿಐಪಿ ಬಾಕ್ಸ್‌ಗಳು ಹಾಗೂ ಮೀಡಿಯಾ ಸೌಲಭ್ಯಗಳನ್ನು ಒಳಗೊಂಡಂತೆ ಪ್ರೇಕ್ಷಕರ ಅನುಭವವನ್ನು ಉತ್ತಮಗೊಳಿಸುವ ವ್ಯವಸ್ಥೆಗಳು ಇರಲಿವೆ. ಜತೆಗೆ ಭಾರಿ ಜನಸಂದಣಿ ನಿರ್ವಹಣೆಗೆ ಅಗತ್ಯವಾದ ಸುರಕ್ಷತಾ ವ್ಯವಸ್ಥೆ ಈ ಕ್ರೀಡಾಂಗಣ ಹೊಂದಿರಲಿದೆ.

ಮೊದಲ ಹಂತದಲ್ಲಿ 943 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ, ವಿದ್ಯುತ್‌ ಸೌಲಭ್ಯ ಇತ್ಯಾದಿಗಳನ್ನು ಕಲ್ಪಿಸಲಾಗುತ್ತದೆ. ಎರಡನೇ ಹಂತದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತದೆ. ಇದರಲ್ಲಿ ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ ಸಮಾವೇಶ ಕೇಂದ್ರ, ಸುಸಜ್ಜಿತವಾದ ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ.

75 ಎಕರೆ ಜಾಗದಲ್ಲಿ ನಿರ್ಮಾಣ

ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ 32 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್‌ ಪಂದ್ಯಗಳಿಗೆ ಇದು ಸಾಕಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಈ ಕ್ರೀಡಾಂಗಣದ ಮೇಲಿನ ಒತ್ತಡ ತಗ್ಗಿಸಲು ಹೀಗಾಗಿ ನೂತನ ಕ್ರೀಡಾಂಗಣವನ್ನು ಬಹಳ ದೊಡ್ಡದಾಗಿ 75 ಎಕರೆ ಜಾಗದಲ್ಲಿ ನಿರ್ಮಿಸಲು ಯೋಜಿಲಾಗಿದ್ದು, ಸ್ಟೇಡಿಯಂನಲ್ಲಿ 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಇರಲಿದೆ. ಆ ಮೂಲಕ ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದಾಗಿರಲಿದೆ. ನೂತನ ಕ್ರೀಡಾಂಗಣ ನಿರ್ಮಾಣವು 3 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

IPL 2026: ಸನ್‌ರೈಸರ್ಸ್‌ ಎದುರು ಸೋತರೂ ಅಗ್ರ ಸ್ಥಾನವನ್ನು ಉಳಿಸಿಕೊಂಡ ಆರ್‌ಸಿಬಿ!

ಈ ಸ್ಟೇಡಿಯಂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಕ್ರೀಡೆಗಳ ಉತ್ತೇಜನ ಸಂಬಂಧವೂ ಮಹತ್ವದ ಪಾತ್ರವಹಿಸಲಿದೆ. ಕ್ರಿಕೆಟ್ ತರಬೇತಿ ಕೇಂದ್ರಗಳು, ಯುವಕರ ಕ್ರೀಡಾ ಕಾರ್ಯಕ್ರಮಗಳಿಗೆ ಇದು ವೇದಿಕೆಯಾಗಲಿದೆ. ಶಾಲೆ, ಕಾಲೇಜು ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೂ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಕ್ರಿಕೆಟ್ ಮಾತ್ರವಲ್ಲದೆ, ಈ ಸ್ಟೇಡಿಯಂನ್ನು ಬಹು ಉದ್ದೇಶೀಯ ವೇದಿಕೆಯಾಗಿ ರೂಪಿಸುವ ಯೋಜನೆಯೂ ಇದೆ. ಸಂಗೀತ ಕಾರ್ಯಕ್ರಮಗಳು, ಸಮ್ಮೇಳನಗಳು, ಸಾರ್ವಜನಿಕ ಸಭೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳಿಗೂ ಇದನ್ನು ಬಳಸುವ ಉದ್ದೇಶವಿದೆ.