ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ನೆನಪಿಸಲು ವಾಟರ್ ಬೆಲ್ (Water Bell) ಸಮಯ ನಿಗದಿ ಮಾಡಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ್ಗೆ, ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ ನೀರು ಕುಡಿಯುವಂತೆ ಜ್ಞಾಪಿಸಲು ʼವಾಟರ್ ಬೆಲ್' (ನೀರಿನ ಗಂಟೆ) ಬಾರಿಸುವುದು ಸೂಕ್ತವಾಗಿರುತ್ತದೆ. ಈ ಹಿನ್ನೆಲೆ ವಾಟರ್ ಬೆಲ್ ನಿಯಮ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಳಿಗೆ ಸೂಚಿಸಲಾಗಿದೆ.
ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕ ನೀರು ಅತ್ಯವಶ್ಯಕವಾಗಿರುತ್ತದೆ. ಏಕೆಂದರ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಸುರಕ್ಷಿತ ನೀರು ಕುಡಿಯುವುದರಿಂದ ನೀರಿನಿಂದ ಹರಡಬಹುದಾದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಮಕ್ಕಳು ಆಟವಾಡಲು ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೀರು ಅವಶ್ಯಕವಾಗಿರುತ್ತದೆ.
ಆದ್ದರಿಂದ ರಾಜ್ಯದಲ್ಲಿರುವ ಎಲ್.ಕೆ.ಜಿ, ಯು.ಕೆ.ಜಿ ಒಳಗೊಂಡಂತೆ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ, ನೀರು ಕುಡಿಯುವಂತೆ ಜ್ಞಾಪಿಸಲು 'ವಾಟರ್ ಬೆಲ್ʼ (ನೀರಿನ ಗಂಟೆ) ಬಾರಿಸುವ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಾಟರ್ ಬೆಲ್ ಪರಿಚಯಿಸಿದ ಮೊದಲ ರಾಜ್ಯ ಕೇರಳ
ದೇಶದಲ್ಲಿ ಕೇರಳ ಸರ್ಕಾರವು 2019ರಲ್ಲಿ ಮೊದಲ ಬಾರಿ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆ ಪರಿಚಯಿಸಿತ್ತು. ಅದಾದ ನಂತರ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಶಾಲೆಗಳಲ್ಲಿ ವಾಟರ್ ಬೆಲ್ ಅಳವಡಿಸಿಕೊಳ್ಳಲಾಗಿತ್ತು.
CM Siddaramaiah: ಅಭಿಯೋಜಕರ ಅಕಾಡೆಮಿ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
2019ರಲ್ಲೇ ಕರ್ನಾಟಕದ ಶಾಲೆಗಳಲ್ಲೂ ವಾಟರ್ ಬೆಲ್ ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಪ್ರತಿ ದಿನ ಮೂರು ಬಾರಿ ಮಕ್ಕಳು ನೀರು ಕುಡಿಯಲು ನೆನಪಿಸಲು ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಬೆಳಗ್ಗೆ 10:35, ಮಧ್ಯಾಹ್ನ 12 ಹಾಗೂ 2 ಗಂಟೆಗೆ ವಾಟರ್ ಬೆಲ್ ಬಾರಿಸಲು ಸೂಚಿಸಲಾಗಿತ್ತು. ಇದೀಗ ಈ ನಿಯಮವನ್ನು ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.