ಬೆಂಗಳೂರು, ಫೆ.27: ಒಂದು ದಿನ ಕರ್ನಾಟಕವನ್ನು ಭಾರತದ 'ಸಿಲಿಕಾನ್ ವ್ಯಾಲಿ' ಮಾತ್ರವಲ್ಲ, ಡಿಜಿಟಲ್ ಪ್ರಪಂಚದ 'ಸೃಜನಶೀಲ ರಾಜಧಾನಿ' ಅಂತ ಕರೆಯಬೇಕು. ಅದೇ ನಮ್ಮ ಕನಸು. ಈ ದೃಷ್ಟಿಕೋನದೊಂದಿಗೆ, ಬೆಂಗಳೂರು GAFX - 'ಎವಲ್ಯೂಷನ್ ರೀಲೋಡ್' ನ 7 ನೇ ಆವೃತ್ತಿಯನ್ನು (GAFX Bengaluru 2026) ಉದ್ಘಾಟಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಜಿಎಎಫ್‌ಎಕ್ಸ್-2026ರ 7ನೇ ಆವೃತ್ತಿ ಉದ್ಘಾಟಿಸಿ ಸಿಎಂ ಮಾತನಾಡಿ, “ಎವೊಲ್ಯೂಶನ್ ರಿಲೋಡೆಡ್” ಎಂಬ ವಿಷಯವನ್ನೊಳಗೊಂಡ ಬೆಂಗಳೂರು GAFX – ಗೇಮ್ಸ್, ಅನಿಮೇಶನ್ ಮತ್ತು ವಿಸುವಲ್ ಎಫೆಕ್ಟ್ಸ್ ಸಮ್ಮೇಳನದ 7ನೇ ಆವೃತ್ತಿಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದು ಹೇಳಿದರು.
ಪ್ರತಿಯೊಂದು ಕ್ರಾಂತಿಯಲ್ಲಿಯೂ ಬೆಂಗಳೂರು ಮುಂಚೂಣಿ
ಈ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲು ಬೆಂಗಳೂರು ಅತ್ಯಂತ ಸೂಕ್ತವಾದ ನಗರ. ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲ. ಇಲ್ಲಿ ಕಲ್ಪನೆ ಮತ್ತು ಎಂಜಿನಿಯರಿಂಗ್ ಸಂಗಮವಲ್ಲದೇ, ಕಲೆ ಮತ್ತು ಅಲ್ಗಾರಿದಮ್ಗಳ ಸಂಗಮವಿದೆ. ಸೃಜನಶೀಲತೆಯಿಂದ ಬಂಡವಾಳವರಗೆ, ಸಾಫ್ಟ್‌ವೇರ್‌ನಿಂದ ಬಾಹ್ಯಾಕಾಶ ಸಂಶೋಧನೆವರೆಗೆ, ಬಯೋಟೆಕ್‌ನಿಂದ ಡೀಪ್-ಟೆಕ್‌ವರೆಗೆ, ಪ್ರತಿಯೊಂದು ಕ್ರಾಂತಿಯಲ್ಲಿಯೂ ಬೆಂಗಳೂರು ಸದಾ ಮುಂಚೂಣಿಯಲ್ಲಿದೆ.
HD Kumaraswamy: ಉಪನಗರ ವರ್ತುಲ ರಸ್ತೆ ಭೂ ಪರಿಹಾರ ನೀಡಿಕೆ ಸದ್ಯದಲ್ಲೇ: ಸುಳಿವು ನೀಡಿದ ಸಚಿವ ಎಚ್‌ಡಿಕೆ

ಇಂದು GAFX ಮುಂದಿನ ಮಹತ್ವದ ಕ್ಷೇತ್ರವಾಗಿದ್ದು, ಗೇಮ್ಸ್, ಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ ಕ್ಷೇತ್ರವು ಸಣ್ಣಮಟ್ಟದ ಸೃಜನಾತ್ಮಕ ಉದ್ಯಮವಾಗಿ ಉಳಿದಿಲ್ಲ. ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಸ್ಟ್ರೀಮಿಂಗ್ ವೇದಿಕೆಗಳು, ಇ-ಸ್ಪೋರ್ಟ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ, ಇಂದು ಮಾನವನ ಕಥೆ, ಸಂಸ್ಕೃತಿ, ಶೀಕ್ಷಣ ಮತ್ತು ಆಡಳಿತದ ಅನುಭವಗಳನ್ನು GAFX ರೂಪಿಸುತ್ತಿದೆ ಎಂದು ತಿಳಿಸಿದರು.
ಈ ಪ್ರತಿಷ್ಠಿತ ಸಮ್ಮೇಳನದ 7ನೇ ಆವೃತ್ತಿ ನಿರಂತರತೆ, ಬೆಳವಣಿಗೆ ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಆವೃತ್ತಿಯೂ ತನ್ನ ದೂರದೃಷ್ಟಿಯನ್ನು ವಿಸ್ತರಿದೆ. ಈ ಆವೃತ್ತಿಯು ಕರ್ನಾಟಕವು ಈ ಕ್ರಾಂತಿಯಲ್ಲಿ ಭಾಗವಹಿಸುತ್ತಿರುವುದಷ್ಟೇ ಅಲ್ಲದೇ ಮುಂಚೂಣಿಯಲ್ಲಿಯೂ ಇದೆ. AVGC-XR ಕ್ಷೇತ್ರದ ಮೇಲಿನ ಕರ್ನಾಟಕದ ಬದ್ಧತೆ ಇತ್ತೀಚಿನದಲ್ಲ. ನಾವು ಈ ಕ್ಷೇತ್ರದಲ್ಲಿ ಮೊದಲಿಗರು.
ರಾಜ್ಯದಲ್ಲಿ ಭಾರತದಲ್ಲೇ ಮೊದಲ AVGC ನೀತಿ ಜಾರಿ
2017ರಲ್ಲಿ, ಭಾರತದಲ್ಲಿ ಮೊದಲ ಬಾರಿಗೆ AVGC ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಕೋಡ್' ರಚನೆಯಷ್ಟೇ ಕಂಟೆಂಟ್ ರಚನೆಯೂ ಶಕ್ತಿಯುತವಾಗಲಿದೆ ಎಂಬ ದೂರದೃಷ್ಠಿಯಿಂದ ಆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ನಾವು ಪ್ರಸ್ತುತ 2024–2029 ಅವಧಿಗೆ ಸಂಬಂಧಿಸಿದ ಮೂರನೇ AVGC-XR ನೀತಿಯನ್ನು ಜಾರಿಗೆ ತರುತ್ತಿದ್ದು. ಇದು ಆಡಳಿತದಲ್ಲಿ ನಿರಂತರತೆ ಮಾತ್ರವಲ್ಲದೇ, ಈ ವಲಯವನ್ನು ಬಲಪಡಿಸುವಲ್ಲಿ ನಮಗಿರುವ ದೃಢಸಂಕಲ್ಪವನ್ನು ಬಿಂಬಿಸುತ್ತದೆ.
ನಮ್ಮ AVGC-XR ನೀತಿಯು, ಈ ಎಕೋಸಿಸ್ಟಂ ಅನ್ನು ಬಲಪಡಿಸಲು ಪ್ರೋತ್ಸಾಹಕಗಳು, ಮೂಲಸೌಕರ್ಯಗಳ ಬೆಂಬಲ, ಕೌಶಲ್ಯ ಅಭಿವೃದ್ಧಿ, ಇನ್ಕ್ಯೂಬೇಶನ್ ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಸಹಯೋಗವನ್ನೂ ಒದಗಿಸಿದೆ. K-Tech, ಸ್ಟಾರ್ಟ್ಅಪ್ ಕರ್ನಾಟಕ, ಶ್ರೇಷ್ಠತಾ ಕೇಂದ್ರಗಳು (Centres of Excellence) ಹಾಗೂ ಉದ್ಯಮಗಳ ಸಹಭಾಗಿತ್ವದೊಂದಿಗೆ, ನಾವು ಕೇವಲ ನೀತಿಗಳನ್ನಷ್ಟೇ ಅಲ್ಲ, ಬೆಳವಣಿಗೆಗೂ ವೇದಿಕೆಯನ್ನು ನಿರ್ಮಿಸಿದ್ದೇವೆ.

ಇನೋವೇಟರ್‌ಗಳು ಪ್ರತಿಯೊಂದು ಜಿಲ್ಲೆಯಿಂದಲೂ ಹೊರಹೊಮ್ಮಬೇಕು
ನಾವು ಮುಖ್ಯವಾಗಿ ಬೆಂಗಳೂರನ್ನು ಮಾತ್ರ ಕೇಂದ್ರೀಕರಿಸದೇ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ ಹಾಗೂ ಇತರ ಪ್ರಮುಖ ನಗರಗಳಲ್ಲಿ ಡಿಜಿಟಲ್ ಕ್ರಿಯೇಟಿವ್ ಕ್ಲಸ್ಟರ್ಗಳನ್ನು ಸೃಜಿಸಲಾಗುತ್ತಿದೆ. ನಮ್ಮ ಮುಂದಿನ ಶ್ರೇಷ್ಠ ಗೇಮ್ ಡಿಸೈನರ್ ಅಥವಾ VFX ಇನೋವೇಟರ್ಗಳು ಕೇವಲ ರಾಜಧಾನಿಯಿಂದಲ್ಲ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದಲೂ ಹೊರಹೊಮ್ಮಬೇಕೆಂಬುದು ನಮ್ಮ ಆಶಯ. ಪಾರಂಪರಿಕ ಮತ್ತು ಪ್ರವಾಸಿ ಗಮ್ಯಗಳ ಬಗ್ಗೆ ಆಳವಾದ ಕಲಿಕೆ ಮತ್ತು ಗ್ರಹಿಕೆಗೆ ಡಿಜಿಟಲ್ ಪ್ರವಾಸಗಳನ್ನು ಸಾಧ್ಯವಾಗಿಸುವ ಉದ್ದೇಶದಿಂದ ನಮ್ಮ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಯ ವಾಸ್ತವಿಕತೆಗೆ ಸಜ್ಜುಗೊಳಿಸುತ್ತಿದೆ.
ರಾಜ್ಯ ಬಜೆಟ್ ಬಳಿಕ ಆಟೋಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
AVGC-XR ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಸಂಯೋಜಿಸಲು ಹಾಗೂ ವೈದ್ಯಕೀಯ ತರಬೇತಿಯಲ್ಲಿ ಬಳಸಲು , ಮತ್ತು ಭವಿಷ್ಯದ ಪೀಳಿಗೆಗೆ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಕ್ರಮ ಕೈಗೊಂಡಿದ್ದೇವೆ. ಬೆಳವಣಿಗೆಯು ಭೌಗೋಳಿಕವಾಗಿ, ಸಾಮಾಜಿಕವಾಗಿ ಒಳಗೊಳ್ಳುವಂತಿದ್ದು, ಜನರನ್ನು ಸಶಕ್ತರನ್ನಾಗಿಸಿ, ಅವರ ಚಿಂತನೆಗಳಿಗೆ ಬಲ ತುಂಬುವುದು ನಮ್ಮ ನಂಬಿಕೆಯಾಗಿದೆ.
ಅಭಿವೃದ್ಧಿಯೂ ಎಲ್ಲ ಪ್ರದೇಶಗಳಿಗೂ ವ್ಯಾಪಿಸಬೇಕು, ಸಾಮಾಜಿಕವಾಗಿ ಒಳಗೊಳ್ಳುವಂತಿರಬೇಕು. ಎಲ್ಲ ಜಾತಿಧರ್ಮಗಳ ಪ್ರತಿಭೆಗಳನ್ನು ತಲುಪಬೇಕು ಜೊತೆಗೆ ಪ್ರತಿಯೊಂದು ಆಲೋಚನೆಗೂ ಶಕ್ತಿತುಂಬಿರವಂತಿರಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. GAFX ಕ್ಷೇತ್ರವು ಕೇವಲ ಆರ್ಥಿಕ ಅವಕಾಶವಲ್ಲ; ಇದು ಒಂದು ನಾಗರಿಕತೆಗೆ ನೀಡಿರುವ ಅವಕಾಶ. ಇದು ಯುವಜನರಿಗೆ ತಮ್ಮ ಕಲ್ಪನಾಶಕ್ತಿಯನ್ನು ಜೀವನೋಪಾಯವಾಗಿ ಪರಿವರ್ತಿಸಲು, ಕಥೆಗಾರರಿಗೆ ತಮ್ಮ ಕಥಾನಿರೂಪಣೆಗೆ ಡಿಜಿಟಲ್ ರೂಪ ನೀಡಲು ಅವಕಾಶ ನೀಡುತ್ತದೆ. ಸಣ್ಣ ಪಟ್ಟಣದಲ್ಲಿ ಕುಳಿತ ಗ್ರಾಮೀಣ ಪ್ರತಿಭೆಯೊಬ್ಬ, ಕೇವಲ ತನ್ನ ಲ್ಯಾಪ್ಟಾಪ್ ಮತ್ತು ಅಂತರ್ಜಾಲದಿಂದ ಜಾಗತಿಕ ಮಟ್ಟದ ಕಂಟೆಂಟ್ ಸೃಜಿಸಲು ಅವಕಾಶ ನೀಡುತ್ತದೆ.
ಇಂದು ಕರ್ನಾಟಕದ ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಲ್ಲ, ಅವರು ವರ್ಚುವಲ್, ಸಿನಿಮೀಯ ಮತ್ತು ಸಂವಾದಾತ್ಮಕ ಪ್ರಪಂಚದ ಸೃಷ್ಟಿಕರ್ತರು. ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರ 20 ಲಕ್ಷ ಉದ್ಯೋಗಗಳನ್ನು ಕೊಡುತ್ತದೆ. ವಿನ್ಯಾಸ, ಕೋಡಿಂಗ್, ಕಥೆ ಹೇಳುವುದು, ಸಂಗೀತ, ಮೋಷನ್ ಕ್ಯಾಪ್ಚರ್, AI ಮಾಡೆಲಿಂಗ್, ನಿರ್ವಹಣೆ ಹೀಗೆ ಎಲ್ಲ ಕಡೆ ಅವಕಾಶಗಳಿವೆ. ಇಲ್ಲಿ ಕಲೆ, ಗಣಿತ, ಮನೋವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವೂ ಒಂದಾಗುತ್ತವೆ.
ನಮ್ಮ ಯುವಕರು ಈಗಾಗಲೇ ಹಾಲಿವುಡ್ ಸಿನಿಮಾಗಳಲ್ಲಿ, ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಗೇಮಿಂಗ್ ಕಂಪನಿಗಳಲ್ಲಿ, ವಿಶ್ವದರ್ಜೆಯ ಅನಿಮೇಷನ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಪ್ರತಿಭೆ ಜಾಗತಿಕ OTT ವೇದಿಕೆಗಳಿಗೆ, ಗೇಮಿಂಗ್ ಸ್ಟುಡಿಯೋಗಳಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಈ ಬೆಳವಣಿಗೆಯನ್ನು ಮುಂದುವರಿಸಬೇಕಾದರೆ ನಮ್ಮ ಮಕ್ಕಳಿಗೆ ಬೇಕಾದ ಕೌಶಲ್ಯಗಳನ್ನು ಕಲಿಸಬೇಕು. ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್ ಕಾಲೇಜುಗಳು, ವಿನ್ಯಾಸ ಶಾಲೆಗಳು, ಪಾಲಿಟೆಕ್ನಿಕ್ಗಳು ಎಲ್ಲವೂ ತಮ್ಮ ಪಾಠದ ಜೊತೆಗೆ AVGC-XR ಕ್ಷೇತ್ರದ ತರಬೇತಿಯನ್ನೂ ಕೊಡಬೇಕು.

ಕರ್ನಾಟಕವು 'ಆರೆಂಜ್ ಆರ್ಥಿಕತೆ'ಯಲ್ಲಿ ಮುಂದಿದೆ. ಅಂದರೆ ಸೃಜನಶೀಲತೆ, ನಮ್ಮ ಸಂಸ್ಕೃತಿ, ಹೊಸ ಆವಿಷ್ಕಾರಗಳು - ಇವುಗಳೇ ಇಲ್ಲಿ ಬೆಳವಣಿಗೆಯ ಬಲ. ನಮ್ಮ ಬೌದ್ಧಿಕ ಆಸ್ತಿಯೇ ನಮ್ಮ ಶಕ್ತಿ. AVGC-XR ಕ್ಷೇತ್ರಕ್ಕಾಗಿ ನಮ್ಮ ಕನಸು ಐದು ಮುಖ್ಯ ಆದ್ಯತೆಗಳನ್ನು ಹೊಂದಿದೆ:
ಮೊದಲನೇಯದು - ಪ್ರತಿಭೆಗೆ ತರಬೇತಿ: ಉದ್ಯಮಕ್ಕೆ ಬೇಕಾದ ಕಲಿಕೆಯನ್ನು ಶಾಲೆ-ಕಾಲೇಜುಗಳಲ್ಲೇ ಕಲಿಸಬೇಕು. ಇಂದಿನ ತಂತ್ರಜ್ಞಾನ ಮಾತ್ರವಲ್ಲ, ನಾಳೆ ಬರುವ ಹೊಸ ತಂತ್ರಜ್ಞಾನಕ್ಕೂ ನಮ್ಮ ಯುವಕರು ಸಿದ್ಧರಾಗಿರಬೇಕು.
ಎರಡನೇಯದು - ಮೂಲಸೌಕರ್ಯ: ಸ್ಟುಡಿಯೋಗಳು, ಮೋಷನ್ ಕ್ಯಾಪ್ಚರ್ ಸೌಲಭ್ಯಗಳು, ಲ್ಯಾಬ್‌ಗಳು, ಇನ್ಕ್ಯುಬೇಷನ್ ಸೆಂಟರ್‌ಗಳು ಸುಲಭ ಬೆಲೆಯಲ್ಲಿ ಸಿಗುವಂತಾಗಬೇಕು. ಕರ್ನಾಟಕದಲ್ಲಿ ವಿಶ್ವದರ್ಜೆಯ ಉತ್ಪಾದನಾ ಸೌಲಭ್ಯಗಳನ್ನು ಬಲಪಡಿಸುತ್ತೇವೆ.
ಮೂರನೇಯದು - ಸ್ಟಾರ್ಟಪ್‌ಗಳಿಗೆ ಬೆಂಬಲ: ಇನ್ನು ಮುಂದೆ ಬೇರೆಯವರಿಗೆ ಕೆಲಸ ಮಾಡಿಕೊಡುವುದಷ್ಟೇ ಅಲ್ಲ, ನಮ್ಮದೇ ಆದ ಕಥೆಗಳು, ಪಾತ್ರಗಳು, ಕಲ್ಪನೆಗಳನ್ನು ಸೃಷ್ಟಿ ಮಾಡಬೇಕು. ಕರ್ನಾಟಕದ ಮಣ್ಣಿನಿಂದ ಹುಟ್ಟಿದ ಪಾತ್ರಗಳು ಜಗತ್ತಿನಾದ್ಯಂತ ಮೆರೆಯಬೇಕು.
ನಾಲ್ಕನೇಯದು - ಬೆಂಗಳೂರಿನಾಚೆಗೂ ಅವಕಾಶ: ಸೃಜನಶೀಲ ಕೆಲಸಗಳು ಬೆಂಗಳೂರಿನಲ್ಲೇ ನಿಲ್ಲಬಾರದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲ್ ಸೌಲಭ್ಯಗಳನ್ನು ಒದಗಿಸಿ, ಎಲ್ಲ ಕಡೆಯ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡುತ್ತೇವೆ.
ಐದನೇಯದು - ಜಾಗತಿಕ ಸಂಪರ್ಕ: ಈ ಕ್ಷೇತ್ರ ಸ್ವಭಾವತಃ ಜಾಗತಿಕವಾದುದು. ಅಂತಾರಾಷ್ಟ್ರೀಯ ಸ್ಟುಡಿಯೋಗಳು, ಹೂಡಿಕೆದಾರರು, ಶಿಕ್ಷಣ ಸಂಸ್ಥೆಗಳ ಜೊತೆ ಸಹಕಾರವನ್ನು ಬೆಳೆಸುತ್ತೇವೆ. ಕರ್ನಾಟಕವು ಭಾರತದ ಯುವ ಸೃಜನಶೀಲರಿಗೂ ಜಗತ್ತಿಗೂ ನಡುವಿನ ಸೇತುವೆಯಾಗಬೇಕು.
ಮನುಷ್ಯನ ಕಲ್ಪನೆಗೆ ಎಐ ಬದಲಾಗಲು ಸಾಧ್ಯವಿಲ್ಲ
ಇವತ್ತು AI (ಕೃತಕ ಬುದ್ಧಿಮತ್ತೆ) ಬಗ್ಗೆ ಮಾತಾಡದೆ ಯಾವ ಚರ್ಚೆಯೂ ಮುಗಿಯೋದಿಲ್ಲ. AI ಕಥೆ, ಸಿನಿಮಾ, ಗೇಮ್ ಎಲ್ಲವನ್ನೂ ಬದಲಾಯಿಸುತ್ತಿದೆ. ಅನಿಮೇಷನ್ನಿಂದ ಹಿಡಿದು ಧ್ವನಿ ನಿರ್ಮಾಣದವರೆಗೆ, AI ಕೆಲಸವನ್ನು ಸುಲಭ ಮಾಡುತ್ತದೆ, ವೆಚ್ಚವನ್ನು ಕಡಿಮೆ ಮಾಡುತ್ತದೆ. ಆದರೆ AI ಕೆಲವು ಕಠಿಣ ಪ್ರಶ್ನೆಗಳನ್ನೂ ಕೇಳುತ್ತದೆ. ಇದು ಕಲಾವಿದರನ್ನೇ ಇಲ್ಲದಂತೆ ಮಾಡುತ್ತದೆಯೇ? ಯಂತ್ರಗಳೇ ಸೃಜನಶೀಲತೆಯನ್ನು ತೆಗೆದುಕೊಳ್ಳುತ್ತವೆಯೇ? ಹೊಸತನ ಎಲ್ಲಿಗೆ ಹೋಗುತ್ತದೆ?
ಇದಕ್ಕೆ ನಮ್ಮ ಉತ್ತರ ಸ್ಪಷ್ಟವಾಗಿರಬೇಕು - ಸಮತೋಲಿತ ಮತ್ತು ಮಾನವೀಯ. AI ಕೇವಲ ಒಂದು ಸಾಧನ. ಅದು ಮನುಷ್ಯನ ಕಲ್ಪನೆಗೆ ಬದಲಾಗಲು ಸಾಧ್ಯವಿಲ್ಲ. ತಂತ್ರಜ್ಞಾನ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸಬೇಕೇ ಹೊರತು ಅದನ್ನು ಅಳಿಸಿಹಾಕಬಾರದು. ಒಳ್ಳೆಯ ಕಥೆ ಹೇಳುವ ಹಿಂದೆ ಇರುವುದು ಮನುಷ್ಯನ ಭಾವನೆಗಳು. ಯಾವ ಕ್ರಮವಿಧಿಯೂ (algorithm) ಅದನ್ನು ಸಂಪೂರ್ಣವಾಗಿ ಅನುಕರಿಸಲು ಸಾಧ್ಯವಿಲ್ಲ. AI ಅನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬೌದ್ಧಿಕ ಆಸ್ತಿಯ ಹಕ್ಕುಗಳು, ದತ್ತಾಂಶದ ಗೌಪ್ಯತೆ, ಕೆಲಸಕ್ಕೆ ನ್ಯಾಯವಾದ ಸಂಭಾವನೆ, ಹೊಸ ಕೌಶಲ್ಯ ಕಲಿಯಲು ಅವಕಾಶ - ಇವುಗಳ ಬಗ್ಗೆ ನಾವು ಯಾವಾಗಲೂ ಗಮನವಾಗಿರಬೇಕು ಎಂದು ತಿಳಿಸಿದರು.
ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸುತ್ತೇವೆ:
ಅನಿಮೇಷನ್ ಮತ್ತು ಗೇಮಿಂಗ್‌ನಲ್ಲಿ ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸುತ್ತೇವೆ. ಆದರೆ ಜವಾಬ್ದಾರಿಯನ್ನು ಮರೆಯಬಾರದು. ಹಿಂಸೆಯನ್ನು ತೋರಿಸುವುದು, ವೈಭವೀಕರಿಸುವುದು ಬೇಡ. ಮಕ್ಕಳ ಮನಸ್ಸಿಗೆ ಚಿಂತೆ ಮಾಡುವಂಥದ್ದು ಬೇಡ. ಸೃಜನಶೀಲತೆ, ವಿಮರ್ಶಾತ್ಮಕ ಯೋಚನೆ, ಒಳ್ಳೆಯ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಆಟಗಳನ್ನು ಪ್ರೋತ್ಸಾಹಿಸುತ್ತೇವೆ. ನಮ್ಮ ಸರ್ಕಾರದ ನೀತಿಗಳು ಮನುಷ್ಯ ಸೃಷ್ಟಿಕರ್ತರಿಗೆ ಬೆಂಬಲವಾಗಿರುತ್ತವೆ. ಹೊಸ ತಂತ್ರಜ್ಞಾನಗಳನ್ನು ಬಳಸಲು ಅವರಿಗೆ ಶಕ್ತಿ ನೀಡುವ ಜೊತೆಗೆ, ಅವರ ಹಕ್ಕುಗಳನ್ನು ರಕ್ಷಿಸುತ್ತವೆ.
ಪ್ರಗತಿ ಎಲ್ಲರನ್ನೂ ತಲುಪಬೇಕು. ಡಿಜಿಟಲ್ ಕ್ರಾಂತಿಯು ಶ್ರೀಮಂತ-ಬಡ ಅಂತರವನ್ನು ಹೆಚ್ಚಿಸಬಾರದು; ಬದಲಾಗಿ, ಅವಕಾಶಗಳನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕು. ಕರ್ನಾಟಕದ ಕಥೆ ಯಾವಾಗಲೂ ಬದಲಾವಣೆಯನ್ನು ಸ್ವೀಕರಿಸಿದ ಕಥೆ. ಕೃಷಿಯಿಂದ ಕೈಗಾರಿಕೆಗೆ, ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದ ಜೈವಿಕ ತಂತ್ರಜ್ಞಾನದ ವಿಸ್ತರಣೆಯವರೆಗೆ, ನಾವು ಬದಲಾವಣೆಯನ್ನು ಧೈರ್ಯದಿಂದ ಎದುರಿಸಿದ್ದೇವೆ.
BS Yediyurappa: ಬಿಎಸ್ ಯಡಿಯೂರಪ್ಪ 84ನೇ ಹುಟ್ಟುಹಬ್ಬ, ಶಿಕಾರಿಪುರದಲ್ಲಿ ಸಂಭ್ರಮ
ನಾನು ಉದ್ಯಮದ ನಾಯಕರನ್ನು ನಮ್ಮದೇ ಆದ ಮೂಲ ಕಥೆಗಳಲ್ಲಿ ಹೂಡಿಕೆ ಮಾಡಲು ಆಹ್ವಾನಿಸುತ್ತೇನೆ. ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮವನ್ನು ಹೊಸ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಕರೆ ನೀಡುತ್ತೇನೆ. ಯುವ ಸೃಷ್ಟಿಕರ್ತರು ಧೈರ್ಯದಿಂದ ಕನಸು ಕಾಣಲು ಕರೆ ನೀಡುತ್ತೇನೆ. ಜಾಗತಿಕ ಪಾಲುದಾರರು ಕರ್ನಾಟಕದ ಜೊತೆ ಕೈಜೋಡಿಸಲು ನಾನು ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ.