HD Kumaraswamy: ಉಪನಗರ ವರ್ತುಲ ರಸ್ತೆ ಭೂ ಪರಿಹಾರ ನೀಡಿಕೆ ಸದ್ಯದಲ್ಲೇ: ಸುಳಿವು ನೀಡಿದ ಸಚಿವ ಎಚ್‌ಡಿಕೆ
ಯೋಜನೆಯು ಅನುಮೋದನೆಗಾಗಿ ಪರಿಗಣನೆಯಲ್ಲಿದೆ. ಯೋಜನೆಯ ಹೂಡಿಕೆಗೆ ಅನುಮೋದನೆ ನೀಡಿದ ನಂತರವೇ ಪರಿಹಾರ ವಿತರಣೆಯನ್ನು ಪುನರಾರಂಭಿಸಬಹುದು ಎಂದು ಹೆದ್ದಾರಿ ಸಚಿವರು ಪತ್ರ ಮುಖೇನ ನನಗೆ ತಿಳಿಸಿದ್ದಾರೆ. ಹೀಗಾಗಿ ಭೂಮಿ ಕಳೆದುಕೊಂಡಿರುವ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ, ನಿತಿನ್ ಗಡ್ಕರಿ -
ನವದೆಹಲಿ, ಫೆ. 27: ಬೆಂಗಳೂರು ಗ್ರಾಮಾಂತರ (Bengaluru rural) ಲೋಕಸಭಾ ಕ್ಷೇತ್ರದಲ್ಲಿ ಉಪನಗರ ವರ್ತುಲ ರಸ್ತೆ (STRR) ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಹಾಗೂ ಭೂಮಿ ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ಪರಿಹಾರ (compensation) ನೀಡುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರದ ಮಟ್ಟದಲ್ಲಿ ನಡೆಸಿರುವ ಪ್ರಯತ್ನಗಳು ಫಲಪ್ರದವಾಗುವ ಹಂತದಲ್ಲಿವೆ. ಪ್ರಸ್ತಾವನೆ ಇದೀಗ ಪ್ರಧಾನಿ ಕಾರ್ಯಾಲಯಕ್ಕೆ ಹೋಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಅಲ್ಲದೆ, ಹಲವು ಬಾರಿ ನವದೆಹಲಿಯಲ್ಲಿ ಇಬ್ಬರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ತ್ವರಿತವಾಗಿ ಪರಿಹಾರವನ್ನು ಬಿಡುಗಡೆ ಮಾಡಲು ಸಚಿವ ಸಂಪುಟದ ಅನುಮೋದನೆ ಕೋರುವ ಕುರಿತು ಕಳೆದ ಡಿಸೆಂಬರ್ ತಿಂಗಳಲ್ಲಿಯೇ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು.
ಈ ಮನವಿಗೆ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಮ್ಮ ಮನವಿಯನ್ನು, ಅದರ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಭೂ ಪರಿಹಾರ ನೀಡುವ ಬಗ್ಗೆ ಸಂಪುಟದ ಅನುಮೋದನೆ ಅಗತ್ಯವಾಗಿದ್ದು, ಅದಕ್ಕಾಗಿ ತಮ್ಮ ಮನವಿ ಪತ್ರ ಹಾಗೂ ಅದಕ್ಕೆ ಸಂಬಂಧಿತ ಪ್ರಸ್ತಾವನೆಯನ್ನು ಪ್ರಧಾನಿಗಳ ಕಾರ್ಯಾಲಯಕ್ಕೆ ರವಾನಿಸಿದ್ದೇನೆ ಎಂದು ಗಡ್ಕರಿ ಅವರು ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
HD Kumaraswamy: ಶಿಡ್ಲಘಟ್ಟದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಎಚ್ ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವ ಕುಮಾರಸ್ವಾಮಿ, ಯೋಜನೆಯು ಅನುಮೋದನೆಗಾಗಿ ಪರಿಗಣನೆಯಲ್ಲಿದೆ. ಯೋಜನೆಯ ಹೂಡಿಕೆಗೆ ಅನುಮೋದನೆ ನೀಡಿದ ನಂತರವೇ ಪರಿಹಾರ ವಿತರಣೆಯನ್ನು ಪುನರಾರಂಭಿಸಬಹುದು ಎಂದು ಹೆದ್ದಾರಿ ಸಚಿವರು ಪತ್ರ ಮುಖೇನ ನನಗೆ ತಿಳಿಸಿದ್ದಾರೆ. ಹೀಗಾಗಿ ಭೂಮಿ ಕಳೆದುಕೊಂಡಿರುವ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 948Aಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ತಾಲೂಕಿನ ತಾಲೂಕಿನ ಓಬಳಾಪುರದಿಂದ ರಾಮನಗರ ತಾಲೂಕಿನ ಕುಣಗಾಲುವರೆಗೆ ಹಾಗೂ ರಾಮನಗರದ ಕುಣಗಾಲುನಿಂದ ಹೊಸೂರು ತಾಲೂಕಿನ ಎಸ್. ಮುದುಗದಪಲ್ಲಿವರೆಗೆ ಉಪನಗರ ವರ್ತುಲ ರಸ್ತೆ ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸುವ ಹಾಗೂ ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈಗಾಗಲೇ 2023ರವರೆಗೆ ಮೇಲಿನ ಎರಡು ವಿಭಾಗಗಳಲ್ಲಿ ₹216.92 ಕೋಟಿ ಹಾಗೂ ₹52.70 ಕೋಟಿ ಭೂ ಪರಿಹಾರವನ್ನು ವಿತರಣೆ ಮಾಡಲಾಗಿದೆ ಎಂಬ ಅಂಶವನ್ನು ಗಡ್ಕರಿ ಅವರು ತಮಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಸಚಿವರಾದ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
HD Kumaraswamy: ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ?; ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು
ಪ್ರಧಾನಿಗಳಿಗೂ ಪತ್ರ ಬರೆದಿದ್ದ ಕೇಂದ್ರ ಸಚಿವರು
ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಾಗಡಿ, ರಾಮನಗರ, ಕನಕಪುರ, ಹಾರೋಹಳ್ಳಿ ಮತ್ತು ಆನೇಕಲ್ ಪ್ರದೇಶಗಳಲ್ಲಿ ಉಪನಗರ ಹೊರವರ್ತುಲ ರಸ್ತೆ (STRR-ಪಶ್ಚಿಮ ಭಾಗ) ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಸಾವಿರಾರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸಚಿವರು ಗಮನ ಸೆಳೆದಿದ್ದರು.
2021ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ವಿತರಣೆ ಪೂರ್ಣಗೊಂಡಿಲ್ಲ, ಇದು ರೈತರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಅಲ್ಲದೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಕೂಡ ತಮಗೆ ಪತ್ರ ಬರೆದು ಈ ಬಗ್ಗೆ ವಿನಂತಿಸಿದ್ದಾರೆ ಎಂಬ ಅಂಶವನ್ನು ಸಚಿವರು ಪ್ರಧಾನಿಗಳಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಯೋಜನೆಯ ಅನುಷ್ಠಾನ ಮತ್ತು ಭೂ ಪರಿಹಾರ ವಿತರಣೆಯ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಪ್ರಧಾನಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ. ಈ ಬಗ್ಗೆ ನಾನು ಪ್ರಧಾನಿಗಳು ಹಾಗೂ ಹೆದ್ದಾರಿ ಸಚಿವರಿಗೆ ಪತ್ರ ಬರೆದಿರುವುದು ಮಾತ್ರವಲ್ಲದೆ, ಖುದ್ದು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.