ಬೆಂಗಳೂರು: ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ (Karnataka MLC Election) ಎಲೆಕ್ಷನ್ಗೂ ದಿನಾಂಕವನ್ನು ಘೋಷಿಸಲಾಗಿದೆ. ಜೂನ್ 26ರಂದು ತೆರವಾಗಲಿರುವ ಪರಿಷತ್ನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಬಿಹಾರದ ಒಂಬತ್ತು ಹಾಗೂ ಕರ್ನಾಟಕದ ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದ್ದು, ಜೂನ್ 18 ರಂದು ಮತದಾನ ಪ್ರಕ್ರಿಯೆ ಜರುಗಲಿದೆ.
ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಜೂನ್ 1 ರಂದು ಅಧಿಕೃತವಾಗಿ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ತದನಂತರ ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸುವ ಅಭ್ಯರ್ಥಿಗಳಿಗೆ ಜೂನ್ 11 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೂನ್ 18 ರಂದು ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ಕಾರ್ಯವೂ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಲಿದೆ.
ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಪ್ರತಾಪ್ ಸಿಂಹ ನಾಯಕ್, ಎನ್. ನಾಗರಾಜು (ಎಂಟಿಬಿ), ಸುನಿಲ್ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್ನಲ್ಲಿ ಮುಕ್ತಾಯವಾಗಲಿದೆ. ಇನ್ನು ವಿಧಾನ ಸಭೆಯ ಹಾಲಿ ಬಲಾಬಲವನ್ನು ಗಮನಿಸಿದರೆ ತೆರವಾಗಲಿರುವ 7 ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ.
ರಾಜ್ಯಸಭೆ ಚುನಾವಣೆ
ರಾಜ್ಯಸಭೆಯ ಖಾಲಿಯಾಗಲಿರುವ ಸದಸ್ಯರ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಿಸಿದೆ. ಜೂನ್-ಜುಲೈ 2026ರಲ್ಲಿ ಅವಧಿ ಮುಗಿಯಲಿರುವ 24 ಸದಸ್ಯರ ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ ಎಂದು ಭಾರತ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೂನ್ 1ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದ್ದು, ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಿಗದಿಯಾಗಿದೆ.
ಜೂನ್ 18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಜೂನ್ 20 ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.