ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 2ನೇ ದಿನಕ್ಕೆ ಡಿ.ಕೆ. ಶಿವಕುಮಾರ್‌ಗೆ ತಟ್ಟಿದ ಅಸಮಾಧಾನದ ಬಿಸಿ; ಸಿಟ್ಟಿಗೆದ್ದು ಸಭೆಯಿಂದ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ

Ramalinga Reddy: ಬುಧವಾರವಷ್ಟೇ ಅಸ್ತಿತ್ವಕ್ಕೆ ಬಂದ ಡಿ.ಕೆ. ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಅಸಮಾಧಾನದ ಬಿಸಿ ತಟ್ಟಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ಮಧ್ಯೆಯೇ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಹೊರ ನಡೆದಿದ್ದಾರೆ. ಖಾತೆ ಹಂಚಿಕೆಗೆ ಸಂಬಂಧಿಸಿದ ಅಸಮಾಧಾನದಿಂದ ಅವರು ಹೊರ ಬಂದಿದ್ದಾರೆ ಎನ್ನಲಾಗಿದೆ.

ರಾಮಲಿಂಗಾ ರೆಡ್ಡಿ ಮತ್ತು ಡಿ.ಕೆ. ಶಿವಕುಮಾರ್‌

ಬೆಂಗಳೂರು, ಜೂ. 4: ಬುಧವಾರ (ಜೂನ್‌ 3) ನಡೆದ ಅದ್ಧೂರಿ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್‌ (DK Shivakumar) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರೊಂದಿಗೆ 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಗುರುವಾರ ವಿಧಾನಸೌಧದಲ್ಲಿ ಮಹತ್ವದ ಸಭೆಯ ನಡೆಸಿದರು. ಈ ವೇಳೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದಿರುವ ಬೆಳವಣಿಗೆ ನಡೆದಿದೆ. ಇದರಿಂದ ಡಿಕೆಶಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.

ಸಚಿವರಿಗೆ ಇನ್ನೂ ಖಾತೆಗಳ ಹಂಚಿಕೆಯಾಗಿಲ್ಲ. ಈ ವಿಚಾರದ ಬಗ್ಗೆಯೇ ರಾಮಲಿಂಗಾ ರೆಡ್ಡಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಸಚಿವ ಸಂಪುಟದ ಜವಾಬ್ದಾರಿ ಹಂಚಿಕೆ ಚರ್ಚೆಯ ಸಂದರ್ಭದಲ್ಲಿ ಡಿಕೆಶಿ ಅವರ ಪ್ರಸ್ತಾಪಕ್ಕೆ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಆರ್‌ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌; ಅಧಿಕಾರಿಗಳಿಗೆ ಖಡಕ್‌ ಸೂಚನೆ

ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು

ಮೂಲಗಳ ಪ್ರಕಾರ ರಾಮಲಿಂಗಾ ರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕು. ಅದಿಲ್ಲದಿದ್ದರೆ ಮಂತ್ರಿಗಿರಿಯೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ವಿಷಯ ಮುನ್ನೆಲೆಗೆ ಬಂದಾಗ ಸಿಟ್ಟಿಗೆದ್ದ ರಾಮಲಿಂಗಾರೆಡ್ಡಿ, "ಜಲ ಸಂಪನ್ಮೂಲಕ್ಕೂ ನನಗೂ ಏನು ಸಂಬಂಧ? ನಾನು ಬೆಂಗಳೂರಿನವನು, ನನಗೆ ಬೆಂಗಳೂರೇ ಬೇಕು" ಎಂದು ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮಾಧಾನದ ಮಾತುಗಳಿಗೆ ಒಪ್ಪದ ಅವರು, ಸಭೆಯ ನಡುವೆಯೇ ಎದ್ದು ಹೊರ ನಡೆದಿದ್ದಾರೆ.

ಡಿಕೆಶಿ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, "ನನಗೆ ಬೇರೆ ಇಲಾಖೆ ಬೇಡ, ನಾನು ಕೇವಲ ಶಾಸಕನಾಗಿ ಇರುತ್ತೇನೆ ಸಾಕು" ಎಂದು ಬೇಸರದಿಂದ ನುಡಿದು ಸಭೆಯಿಂದ ನಿರ್ಗಮಿಸಿದ್ದಾರೆ. ಸದ್ಯ ಈ ವಿಚಾರ ಡಿಕೆಶಿ ಅವರಿಗೆ ತಲೆನೋವು ತಂದಿದ್ದು, ಮನವೊಲಿಕೆಗೆ ಪ್ರಯತ್ನ ನಡೆಯುತ್ತಿದೆ.

ಖಾತೆ ಹಂಚಿಕೆ ಕಸರತ್ತು

ಸದ್ಯ ಡಿಕೆಶಿ ಮುಂದೆ ಖಾತೆ ಹಂಚಿಕೆಯ ದೊಡ್ಡ ಸವಾಲೇಎದುರಾಗಿದೆ. ಯಾರಿಗೂ ಅಸಮಾಧಾನವಾಗದಂತೆ ಖಾತೆ ಹಂಚುವುದು ದೊಡ್ಡ ತಲೆನೋವು ಎನಿಸಿಕೊಂಡಿದೆ. ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, “ಹೊತ್ತು ಮುಳುಗುವುದರೊಳಗೆ ಆಗಲಿದೆ” ಎಂದು ಡಿಕೆಶಿ ಹೇಳಿದ್ದರು. ಖಾತೆ ಹಂಚಿಕೆಯಲ್ಲಿ ಗೊಂದಲಗಳಿವೆ, ಇಂತಹುದೇ ಖಾತೆ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂಬ ಬಗ್ಗೆ ಕೇಳಿದಾಗ, “ನಿಮ್ಮಲ್ಲಿ ಗೊಂದಲವಿರಬೇಕು. ನನ್ನ ಬಳಿ ಬಂದು ಯಾರು ಚರ್ಚೆ ಮಾಡಿಲ್ಲ” ಎಂದು ತಿಳಿಸಿದ್ದರು.

ಸಾರ್ವಜನಿಕರ ಸಮಸ್ಯೆ ಆಲಿಸಲು ಹೊಸ ಸಚಿವಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

“ಗಾಳಿ ಮಾತಿಗೆ ಉತ್ತರ ನೀಡಲು ಆಗುವುದಿಲ್ಲ. ಊಹಾಪೋಹದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಖಾತೆ ಹಂಚಿಕೆ ವಿಚಾರವಾಗಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ. ನಾನು ಯಾವ ಕೆಲಸ ಮಾಡಬೇಕು ಎಂದು ಹೇಳಿದೆ. ನಾನು ಆ ಕೆಲಸ ಮಾಡುತ್ತೇನೆ. ಪಕ್ಷ ಯಾರಿಗೆ ಯಾವ ಕೆಲಸ ಹೇಳಿದೆಯೋ ಆ ಕೆಲಸ ಮಾಡುತ್ತಾರೆ” ಎಂದು ವಿವರಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author