SSLC, 2nd PUC Exam 2026 Timetable: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯು ಫೆ. 28 ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ (SSLC, 2nd PUC Exam 2026 Timetable) ಪ್ರಕಟವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು ಫೆ. 28 ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ:
ಫೆಬ್ರವರಿ 28: ಕನ್ನಡ, ಅರೇಬಿಕ್
ಮಾರ್ಚ್ 2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3: ಇಂಗ್ಲಿಷ್
ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5: ಇತಿಹಾಸ
ಮಾರ್ಚ್ 6: ಭೌತಶಾಸ್ತ್ರ
ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10: ಅರ್ಥಶಾಸ್ತ್ರ
ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12: ಹಿಂದಿ
ಮಾರ್ಚ್ 13: ರಾಜ್ಯಶಾಸ್ತ್ರ
ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 17: ಹಿಂದುಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
(ದ್ವಿತೀಯ ಪಿಯುಸಿ ಪರೀಕ್ಷೆ-1 ಬೆಳಗ್ಗೆ 10 ರಿಂದ ಮಧ್ಯಾಹ್ನ 1ಗಂಟೆವರೆಗೆ ನಡೆಯಲಿದೆ.)
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ:
ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ)
ಮಾರ್ಚ್ 23: ವಿಜ್ಞಾನ
ಮಾರ್ಚ್ 25: ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮಾರ್ಚ್ 28: ಗಣಿತ
ಮಾರ್ಚ್ 30: ತೃತೀಯ ಭಾಷೆ
ಏಪ್ರಿಲ್ 2: ಸಮಾಜ ವಿಜ್ಞಾನ
(ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿದೆ.)
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ
ಮೇ 18: ಪ್ರಥಮ ಭಾಷೆ
ಮೇ 19: ವಿಜ್ಞಾನ
ಮೇ 20: ದ್ವಿತೀಯ ಭಾಷೆ
ಮೇ 21: ಗಣಿತ
ಮೇ 22: ತೃತೀಯ ಭಾಷೆ
ಮೇ 23: ಸಮಾಜ ವಿಜ್ಞಾನ
ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ
ದ್ವಿತೀಯ ಪಿಯುಸಿ
ಒಟ್ಟು ವಿದ್ಯಾರ್ಥಿಗಳ ಸಂಖ್ಯೆ- 7,10,363
ಹೊಸಬರು-6,46,801
ಪುನರಾವರ್ತಿತ- 50,540
ಖಾಸಗಿ ಅಭ್ಯರ್ಥಿಗಳು- 13,022
ಎಸ್‌ಎಲ್‌ಎಲ್‌ಸಿ
ಒಟ್ಟು ವಿದ್ಯಾರ್ಥಿಗಳು- 9,02,889
ಹೊಸಬರು-8,12,855
ಪುನರಾವರ್ತಿತ-62,845
ಖಾಸಗಿ ಅಭ್ಯರ್ಥಿಗಳು-27,189
ಲೋಪದೋಷಗಳಿಲ್ಲದೆ ಪರೀಕ್ಷೆ ನಡೆಸಲು ಸಿದ್ಧತೆ: ಮಧುಬಂಗಾರಪ್ಪ
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಯಾವುದೇ ಲೋಪದೋಷಗಳಿಲ್ಲದೆ, ಶಿಸ್ತುಬದ್ಧವಾಗಿ ನಡೆಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಲಾಗಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ನೇರವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಚೇರಿಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರಶ್ನೆಪತ್ರಿಕೆಗಳ ಸಾಗಾಟ ಮತ್ತು ಶೇಖರಣಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಇರಲಿದೆ.
ಪರೀಕ್ಷಾ ಕೇಂದ್ರದ ಒಳಗೆ ಸಿಬ್ಬಂದಿ ಸೇರಿದಂತೆ ಯಾರಿಗೂ ಮೊಬೈಲ್ ಫೋನ್ ಕೊಂಡೊಯ್ಯಲು ಅವಕಾಶವಿಲ್ಲ. ಡಿಜಿಟಲ್ ಉಪಕರಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.