ಬೆಂಗಳೂರು: ದಕ್ಷಿಣ ಏಷ್ಯಾದ ಅತಿದೊಡ್ಡ LGBTQ+ ಚಲನಚಿತ್ರೋತ್ಸವವಾದ ಕಾಶಿಶ್ ಪ್ರೈಡ್ ಫಿಲ್ಮ್ ಫೆಸ್ಟಿವಲ್ ಇದೇ (Kashish LGBTQ+ Film Festival in Bengaluru) ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ ಸಹಯೋಗದಲ್ಲಿ ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಕಾಶಿಶ್ x ಬೆಂಗಳೂರು 2026 ಚಿತ್ರೋತ್ಸವದಲ್ಲಿ 15 ದೇಶಗಳ 44 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವದ ಅಂಗವಾಗಿ ನವೆಂಬರ್ 17ರಂದು ಬೆಂಗಳೂರಿನ ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೋಗ್ರಫಿ ನಲ್ಲಿ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಪೂರ್ವಭಾವಿ ಕರ್ಟನ್ ರೈಸರ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಚಿತ್ರ ನಿರ್ದೇಶಕರು, ಕಲಾವಿದರು, ಸಾಂಸ್ಕೃತಿಕ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ನಟಿ ಪದ್ಮಾವತಿ ರಾವ್, ರಂಗಭೂಮಿ ಮತ್ತು ಚಿತ್ರ ನಿರ್ದೇಶಕ ಅರ್ಜುನ್ ಸಜ್ಜನಿ ಹಾಗೂ ಲೇಖಕ ವಸುಧೇಂದ್ರ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಟ ಹಾಗೂ ನಿರ್ದೇಶಕ ಆಕಾಶ್ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಲಿದ್ದು, ಕಥಕ್ ಕಲಾವಿದ ಸುನಿಲ್ ಸುಂಕರ ಮತ್ತು ಡ್ರ್ಯಾಗ್ ಕಲಾವಿದ ವಿಪ್ಸ್‌ಆರ್ಟ್ ವಿಶೇಷ ಪ್ರದರ್ಶನ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ “ಕ್ವಿಯರ್ ಹಕ್ಕುಗಳು ಮತ್ತು ಸಿನಿಮಾ: ಸವಾಲೊಡ್ಡುವ ಕಥೆಗಳು, ಮಹತ್ವದ ಧ್ವನಿಗಳು” ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಚಿತ್ರ ನಿರ್ದೇಶಕಿ ರೂಪಾ ರಾವ್, ಚಿತ್ರ ನಿರ್ದೇಶಕ ಹಾಗೂ ಗಾಯಕ ಸಿದ್ಧಾಂತ್ ಸುಂದರ್, ಹೋರಾಟಗಾರ ವಿನಯ್ ಚಂದ್ರನ್ ಮತ್ತು ಶಿಕ್ಷಣ ತಜ್ಞೆ ನದಿಕಾ ಭಾಗವಹಿಸಲಿದ್ದಾರೆ. ಕ್ವಿಯರ್ ಸಮುದಾಯದ ಪ್ರಾತಿನಿಧ್ಯ, ಸಮಾನತೆ, ಸಾಮಾಜಿಕ ಸ್ವೀಕಾರ ಮತ್ತು ಜಾಗೃತಿ ಮೂಡಿಸುವಲ್ಲಿ ಸಿನಿಮಾದ ಪಾತ್ರದ ಕುರಿತು ಚರ್ಚೆ ನಡೆಯಲಿದೆ.
ಚಿತ್ರೋತ್ಸವದ ನಿರ್ದೇಶಕ ಶ್ರೀಧರ್ ರಂಗಾಯಣ್ ಮಾತನಾಡಿ, “ಕಾಶಿಶ್ ಅನ್ನು ಮೊದಲ ಬಾರಿಗೆ ಬೆಂಗಳೂರಿಗೆ ತರುತ್ತಿರುವುದು ಸಂತಸದ ಸಂಗತಿ. ಕ್ವಿಯರ್ ಸಿನಿಮಾಗಳ ಮೂಲಕ ವೈವಿಧ್ಯಮಯ ಧ್ವನಿಗಳಿಗೆ ವೇದಿಕೆ ಕಲ್ಪಿಸಿ, ಸಮಾನತೆ ಮತ್ತು ಸಾಮಾಜಿಕ ಸ್ವೀಕಾರದ ಕುರಿತು ಅರ್ಥಪೂರ್ಣ ಸಂವಾದಗಳನ್ನು ಬೆಳೆಸುವುದು ನಮ್ಮ ಉದ್ದೇಶ” ಎಂದು ತಿಳಿಸಿದ್ದಾರೆ. ಬೆಂಗಳೂರಿನ ಚಲನಚಿತ್ರ, ಕಲೆ ಮತ್ತು ಸಾಂಸ್ಕೃತಿಕ ಸಮುದಾಯಗಳೊಂದಿಗೆ ಹೊಸ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಚಿತ್ರೋತ್ಸವವು ವೈವಿಧ್ಯಮಯ ಬದುಕು, ಗುರುತು, ಸಂಬಂಧಗಳು ಮತ್ತು ಅನುಭವಗಳನ್ನು ಪ್ರತಿಬಿಂಬಿಸುವ ಜಾಗತಿಕ ಚಿತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸಲಿದೆ.
ಈ ಉತ್ಸವದ ಎಲ್ಲಾ ಚಲನಚಿತ್ರ ಪ್ರದರ್ಶನಗಳಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತ ಪ್ರೇಕ್ಷಕರು https://freecomers.com/festivals/14679/kashish-x-bengaluru-2026 ಮೂಲಕ ಮುಂಗಡವಾಗಿ ಉಚಿತ ಪಾಸ್‌ಗಳನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.