ಬೆಂಗಳೂರು, ಡಿ.27: ಉತ್ತರ ಪ್ರದೇಶದಂತೆ ಕರ್ನಾಟಕ ಸರ್ಕಾರವು ʼಬುಲ್ಡೋಜರ್ ರಾಜ್ʼ (Bulldozer raj) ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ ನೀಡಿದ್ದಾರೆ. ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಿಣರಾಯಿ ವಿಜಯನ್ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು, ಅದು ಜನ ವಸತಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲ. ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟೀಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ ಜಾಗದಿಂದ ತೆರವುಗೊಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಅವರ ಜತೆ ಮಾತನಾಡಿ, ಅವರೆಲ್ಲರಿಗೂ ತಾತ್ಕಾಲಿಕ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ಅಲ್ಲಿ ಅತಿಕ್ರಮವಾಗಿ ವಾಸವಿದ್ದ ಬಹುತೇಕರು ವಲಸೆ ಕಾರ್ಮಿಕರು, ಸ್ಥಳೀಯ ನಿವಾಸಿಗಳಲ್ಲ, ಆದರೂ ಕೂಡ ಮಾನವೀಯತೆ ದೃಷ್ಟಿಯಿಂದ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ. ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ. ವಾಸ್ತವ ಸಂಗತಿಗಳ ಅರಿವಿಲ್ಲದೆ ಮಾತನಾಡಬಾರದು ಎಂದು ಟೀಕಿಸಿದ್ದಾರೆ.
ಕೇರಳ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆಯ ಪೋಸ್ಟ್
ಪಿಣರಾಯಿ ವಿಜಯನ್ ಏನು ಹೇಳಿದ್ದರು?
ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಮೂಲಕ ʼಬುಲ್ಡೋಜರ್ ರಾಜ್ʼ ಕಾನೂನನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನುಸರಿಸಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದ ಅವರು, ದುಃಖಕರ ವಿಚಾರವೆಂದರೆ ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡುತ್ತಿದೆ. ಭಯ ಮತ್ತು ಕ್ರೂರತೆಯ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ವ್ಯಕ್ತಿ ಘನತೆ ಮೊದಲು ಬಲಿಪಶುಗಳಾಗುತ್ತವೆ. ಈ ಕಪಟ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟುಗೂಡಬೇಕು ಎಂದು ಹೇಳಿದ್ದರು.