ಬೆಂಗಳೂರು: ಮಗ, ಆತನ ಮಾವನಿಂದಲೇ ತನಗೆ 45 ಕೋಟಿ ರೂ. ವಂಚನೆ ನಡೆದಿದೆ ಎಂದು ಉದ್ಯಮಿ ಕೆಜಿಎಫ್ ಬಾಬು (ಯೂಸುಫ್ ಷರೀಫ್) ಆರೋಪಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಕೆಜಿಎಫ್ ಬಾಬು, ಈಗ ತನಗೆ ಮಗ ಮತ್ತು ಅವನ ಮಾವನೇ ಮೋಸ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಮಗನ ಮದುವೆಗೆ ಮುಂಚೆ, ಬೀಗರಾದ ಗುಲಾಂ ಮುಸ್ತಾಫಾ ಅವರು ಎಸ್‌ಬಿಐನಲ್ಲಿ 60 ಕೋಟಿ ರೂ. ಸಾಲ ಮಾಡಿದ್ದರು. ಅದರೆ ಅದರಲ್ಲಿ ಕೇವಲ 15 ಕೋಟಿ ಮರುಪಾವತಿ ಮಾಡಿ, 45 ಕೋಟಿ ಬಾಕಿ ಕಟ್ಟಿರಲಿಲ್ಲ. ಆಗ ನನ್ನ 200 ಕೋಟಿ ರೂ. ಆಸ್ತಿಯನ್ನು ಅಡಮಾನ ಇಟ್ಟು ಮುಸ್ತಾಫಾರನ್ನು ಸಂಕಷ್ಟದಿಂದ ಪಾರು ಮಾಡಿದ್ದೆ. ಮುಸ್ತಾಫಾ ಜತೆ ಪಾಲುದಾರನಾಗಿದ್ದ ಸಂಸ್ಥೆಯೊಂದು 45 ಕೋಟಿ ಬಾಕಿಯಲ್ಲಿ 15 ಕೋಟಿಯನ್ನು ಬ್ಯಾಂಕ್ಗೆ ಪಾವತಿಸಿದರೂ ಮುಸ್ತಾಫಾ ಮಾತ್ರ ಏನನ್ನೂ ಪಾವತಿಸಿಲ್ಲ. 30 ಕೋಟಿ ಬ್ಯಾಂಕ್ ಸಾಲ ಹಾಗೆಯೇ ಇದೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.
ಮಗನ ಮದುವೆಯಲ್ಲಿ 20 ಕೋಟಿ ರೂ. ಮೌಲ್ಯದ ವಜ್ರದ ಆಭರಣ ಮಾಡಿಸಿದ್ದೆ. ಅದನ್ನು ಇನ್ನೂ ವಾಪಸ್ ಕೊಟ್ಟಿಲ್ಲ. ಇದಾದ ಮೇಲೆ ಮಗ ಮತ್ತು ಆತನ ಮಾವ, 200 ಕೋಟಿ ರೂ. ಸಾಲ ಕೇಳಿದರು. ಮೊದಲೇ ನನಗೆ 45 ಕೋಟಿ ಟೋಪಿ ಹಾಕಿದ್ದೀರಿ, ಕ್ಷಮಿಸಿ ನಮ್ಮ ನಡುವೆ ಬ್ಯುಸಿನೆಸ್ ಬೇಡ ಎಂದು ಹೇಳಿದ್ದೆ. ಇದರಿಂದ ಮಗ ಹಾಗೂ ಸೊಸೆಯನ್ನು ಅವನ ಮಾವ ಗುಲಾಂ ಮುಸ್ತಾಫಾ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕೆಜಿಎಫ್ ಬಾಬು ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಸುಳ್ಳು ಭರವಸೆ; ಕೆಜಿಎಫ್ ಬಾಬು ಮನೆ ಮುಂದೆ ಪ್ರತಿಭಟನೆ
ಸುಳ್ಳು ಭರವಸೆ ನೀಡಿ ಮೋಸ ಮಾಡಿದ್ದಾರೆ ಎಂದು ಚಿಕ್ಕಪೇಟೆ ಕ್ಷೇತ್ರದ ಜನರು ಕೆಜಿಎಫ್ ಬಾಬು ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಕೆಜಿಎಫ್ ಬಾಬು, ಸಿಲಿಂಡರ್, ಚೆಕ್ ನೀಡುತ್ತೇನೆ ಮತ್ತು ಮನೆ ಕಟ್ಟಿಸಿ ಕೊಡುತ್ತೇನೆ ಅಂತ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದನ್ನು ಈಡೇರಿಸಿಲ್ಲ ಎಂದು ಪ್ರತಿಭಟನೆ ನಡೆಸಲಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ಪತಿಯನ್ನು ಕೊಂದು ದೇವರ ಕೋಣೆಯಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ
ಮನೆ ಕಟ್ಟಿಸಿ ಕೊಡುತ್ತಾರೆ ಎಂಬ ಭರವಸೆಯಿಂದ, ನಮ್ಮ ಮನೆಗಳನ್ನು ಬೀಳಿಸಿದ್ದೇವೆ. ಆದರೆ, ಈಗ ಮನೆ ಕಟ್ಟಿಸಿಕೊಡುತ್ತಿಲ್ಲ. ಇದರಿಂದ ನಾವು ಬೀದಿಗೆ ಬಂದಿದ್ದೇವೆ. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಸಿಲಿಂಡರ್ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ.