Kiccha Sudeep: ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಅಧಿಕೃತ ವಿದಾಯ; ಈ ಬಾರಿಯ ಫಿನಾಲೆಯೇ ಕೊನೆಯ ನಿರೂಪಣೆ
Kiccha Sudeep: ಬಿಗ್‌ಬಾಸ್ ನಿರೂಪಣೆಗೆ ಗುಡ್ಬೈ ಹೇಳುವುದಾಗಿ ಸುದೀಪ್ ಈ ಸೀಸನ್ ಆರಂಭದಲ್ಲೇ ಹೇಳಿದ್ದರು. ಇದೀಗ ಬಿಗ್‌ಬಾಸ್ ನಿರೂಪಣೆಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 11) ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ನಿರೂಪಕರಾಗಿ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುದೀಪ್ ( Kiccha Sudeep) ಅವರು ತಮ್ಮ ಮಾತಿನ ಶೈಲಿಯಿಂದಲೇ ಪ್ರೇಕ್ಷಕರ ಮನ ಗೆದ್ದದ್ದರು. ಇದೀಗ ಬಿಗ್‌ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುದೀಪ್ ಅವರು ಬಿಗ್ ಬಾಸ್ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ. ಬಿಗ್ ಬಾಸ್‌ನ ಕಳೆದ ಎಲ್ಲ 11 ಸೀಸನ್‌ಗಳನ್ನು ನಾನು ತುಂಬಾ ಆನಂದಿಸಿದ್ದೇನೆ. ನನ್ನ ಮೇಲೆ ಪ್ರೀತಿ ಇಟ್ಟು ನನ್ನನ್ನು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಸೀಸನ್‌ನ ಫಿನಾಲೆಯೇ ನನ್ನ ಬಿಗ್‌ಬಾಸ್‌ನ ಕೊನೆ ಹೆಜ್ಜೆ ಎಂದಿದ್ದಾರೆ.
ಬಿಗ್ ಬಾಸ್ ನನಗೆ ಒಂದು ಅದ್ಭುತ ಹಾಗೂ ಅವಿಸ್ಮರಣಿಯ ಪಯಣವಾಗಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಶೋಗೆ ನ್ಯಾಯ ಒದಗಿಸಿ ನಿಮ್ಮನ್ನು ರಂಜಿಸಿದ್ದೇನೆ. ಇನ್ನೂ ಮುಂದೆಯೂ ರಂಜಿಸುತ್ತೇನೆ. ಅವಕಾಶ ಕೊಟ್ಟಿದ್ದ ಕಲರ್ಸ್ ಕನ್ನಡಕ್ಕೂ ನಾನು ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ನಟ ಸುದೀಪ್ ಅವರ ನಿರೂಪಣೆಯಿಂದ ಬಿಗ್ ಬಾಸ್ ಶೋ ಸಾಕಷ್ಟು ಪ್ರೇಕ್ಷಕರನ್ನು ಹಾಗೂ ಅಭಿಮಾನಿಗಳನ್ನು ಸಂಪಾದಿಸಿದೆ.
ಶನಿವಾರ ಬಿಗ್ ಬಾಸ್ ಫಿನಾಲೆಯ ಟ್ರೋಫಿಯನ್ನು ಅನಾವರಣ ಮಾಡಲಾಗಿದೆ. ಬರುವ ಭಾನುವಾರ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಈ ವಾರಾಂತ್ಯ ಗೌತಮಿ ಮನೆಯಿಂದ ಹೊರಹೋಗಿದ್ದು, ಭಾನುವಾರದ ಸಂಚಿಕೆಯಲ್ಲಿ ಧನರಾಜ್ ಆಚಾರ್ ಹೊರಹೋಗಿದ್ದಾರೆ. ಫಿನಾಲೆಗೆ ಹನುಮಂತು, ತ್ರಿವಿಕ್ರಮ್ ಮತ್ತು ಮೋಕ್ಷಿತಾ ಆಯ್ಕೆಯಾಗಿದ್ದಾರೆ.
BB is smthn I have enjoyed from past 11 seasons. Thank u all for all the love you have shown. Coming finale is my last as a host, and I hope to entertain u all to my best.
— Kichcha Sudeepa (@KicchaSudeep) January 19, 2025
It's an unforgettable journey, I'm glad to have handled it to my best.
Thank you, @ColorsKannada, for this…
ಬಿಗ್‌ಬಾಸ್ ನಿರೂಪಣೆಗೆ ಗುಡ್ಬೈ ಹೇಳುವುದಾಗಿ ಸುದೀಪ್ ಈ ಸೀಸನ್ ಆರಂಭದಲ್ಲೇ ಹೇಳಿದ್ದರು. ಈ ಹಿಂದೆಯೂ ಬಿಗ್ಬಾಸ್ನಿಂದ ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದರು. ಆದರೆ 11ನೇ ಸೀಸನ್ನಲ್ಲಿ ನಿರೂಪಣೆ ತೊರೆಯುವ ಧೃಡ ನಿರ್ಧಾರವನ್ನು ಸುದೀಪ್ ಕೈಗೊಂಡಿದ್ದಾರೆ.