ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿಗ್‌ ಬಾಸ್‌ಗೆ ತೆರೆ ಬಿದ್ದ ಬೆನ್ನಲ್ಲೇ ಸುದೀಪ್‌ಗೆ ಎದುರಾಯ್ತು ಸಂಕಷ್ಟ; 90 ಲಕ್ಷ ರುಪಾಯಿ ವಂಚನೆ ಆರೋಪ

Kichcha Sudeepa: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 ಮುಕ್ತಾಯವಾದ ಬೆನ್ನಲ್ಲೇ ಸುದೀಪ್‌ ವಿರುದ್ಧ ದೂರು ದಾಖಲಾಗಿದೆ. 90 ಲಕ್ಷ ರುಪಾಯಿ ನೀಡದೆ ಸುದೀಪ್‌ ಮತ್ತು ಅವರ ಮ್ಯಾನೇಜರ್‌ ಚಕ್ರವರ್ತಿ ಚಂದ್ರಚೂಡ್‌ ವಂಚಿಸಿದ್ದಾರೆ ಎಂದು ಚಿಕ್ಕಮಗಳೂರು ಮೂಲದ, ಕಾಫಿ ತೋಟದ ಮಾಲಕ ದೀಪಕ್‌ ಠಾಣೆ ಮೆಟ್ಟಿಲೇರಿದ್ದಾರೆ.

ಕಿಚ್ಚ ಸುದೀಪ್‌ (ಸಂಗ್ರಹ ಚಿತ್ರ)

ಬೆಂಗಳೂರು, ಜ. 20: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 ಮುಕ್ತಾಯ ಕಂಡಿದೆ. ನಟ ಕಿಚ್ಚ ಸುದೀಪ್‌ (Kichcha Sudeepa) ನಿರೂಪಣೆಯಲ್ಲಿ ಈ ಶೋ ಭರ್ಜರಿ ಯಶಸ್ಸು ಕಂಡಿದೆ. ಸುದೀಪ್‌ ನಿರೂಪಣೆ, ಶೋ ನಡೆಸಿಕೊಡುವ ರೀತಿಗೆ ಫ್ಯಾನ್ಸ್‌ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ. 90 ಲಕ್ಷ ರುಪಾಯಿ ನೀಡದೆ ಸುದೀಪ್‌ ಮತ್ತು ಅವರ ಮ್ಯಾನೇಜರ್‌ ಚಕ್ರವರ್ತಿ ಚಂದ್ರಚೂಡ್‌ ವಂಚಿಸಿದ್ದಾರೆ ಎಂದು ಚಿಕ್ಕಮಗಳೂರು ಮೂಲದ, ಕಾಫಿ ತೋಟದ ಮಾಲಕ ದೀಪಕ್‌ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುದೀಪ್‌ ಮತ್ತು ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಸುದೀಪ್‌ ನಿರ್ಮಾಣದ ʼವಾರಸ್ದಾರʼ ಧಾರಾವಾಹಿಗೆ ಸಂಬಂಧಿಸಿದಂತೆ ಈ ವಂಚನೆ ನಡೆದಿದೆ ಎಂದು ದೀಪಕ್‌ ಆರೋಪಿಸಿದ್ದಾರೆ.

ದೂರಿನಲ್ಲಿ ಏನಿದೆ?

2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ 'ಕಿಚ್ಚ ಕ್ರಿಯೇಷನ್ಸ್​'ನಿಂದ 'ವಾರಸ್ದಾರ' ಧಾರಾವಾಹಿಯನ್ನು ನಿರ್ಮಿಸಲಾಗಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ಚಿತ್ರೀಕರಣವನ್ನು ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿತ್ತು. ಇದಕ್ಕಾಗಿ ದೀಪಕ್ ಅವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಹಣ ನೀಡಿಲ್ಲ ಎಂದು ದೀಪಕ್‌ ದೂರಿದ್ದಾರೆ.

ʼವಾರಸ್ದಾರʼ ಧಾರಾವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟ ಮತ್ತು ಮನೆಯನ್ನು 2 ವರ್ಷಗಳಿಗೆ ಅಗ್ರಿಮೆಂಟ್‌ ಮಾಡಿಸಿ ಬಾಡಿಗೆ ಪಡೆಯಲಾಗಿತ್ತು. ಆದರೆ ಬಳಿಕ 2 ತಿಂಗಳಿಗೆ ಜಾಗ ಖಾಲಿ ಮಾಡಿ ಹಣ ನೀಡಿಲ್ಲ ಎಂದು ದೀಪಕ್‌ ಆರೋಪಿಸಿದ್ದಾರೆ. 2 ತಿಂಗಳ ಅವಧಿಯ ಶೂಟಿಂಗ್‌ ವೇಳೆ ಕಾಫಿ ಗಿಡ ಮತ್ತು ಮರ ನಾಶವಾಗಿದ್ದು, 90 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಚಿತ್ರೀಕರಣದ ವೇಳೆ ಆದ ನಷ್ಟಕ್ಕೆ ಪರಿಹಾರ ನೀಡುವುದಾಗಿ ಸುದೀಪ್‌ ಭರವಸೆ ನೀಡಿದ್ದರು. ಆದರೆ ಇದುವರೆಗೆ ತಮಗೆ 10 ಲಕ್ಷ ರುಪಾಯಿಯ ಚೆಕ್‌ ಮಾತ್ರವೇ ಬಂದಿದೆ. ಹೀಗಾಗಿ ಸುದೀಪ್‌ ಮತ್ತು ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೀಪಕ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ಹಿಂದೆಯೂ ಆರೋಪ ಹೊರಿಸಿದ್ದ ದೀಪಕ್‌

ಸುದೀಪ್‌ ವಿರುದ್ಧ ಈ ಹಿಂದೆಯೂ ದೀಪಕ್‌ ಇದೇ ಆರೋಪವನ್ನು ಹೊರಿಸಿದ್ದರು. 2019ರ ಜನವರಿಯಲ್ಲಿ ಕಿಚ್ಚ ಸುದೀಪ್ ಮೇಲೆ ದೂರು ಸಲ್ಲಿಸಿದ್ದ ದೀಪಕ್, ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದೆ. ಮರ-ಗಿಡಗಳನ್ನು ಕಡಿದಿದ್ದರಿಂದ 60ರಿಂದ 70 ಲಕ್ಷ ರುಪಾಯಿ ಖರ್ಚಾಗಿದೆ. ಹೀಗಾಗಿ ನಷ್ಟವಾದ ಹಣವನ್ನು ನೀಡಬೇಕೆಂದು ನಿರ್ಮಾಣ ತಂಡವಾದ ಕಿಚ್ಚ ಕ್ರಿಯೇಷನ್ಸ್​ ಬಳಿ ಬೇಡಿಕೆ ಇಟ್ಟಿದ್ದರು. ಈ ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು. ಆ ವೇಳೆ ಇತ್ಯರ್ಥವಾಗಿದ್ದ ಪ್ರಕರಣ ಮತ್ತೆ ತಲೆ ಎತ್ತಿದೆ.