ಜ್ಞಾನೇಂದ್ರ ಮನೆಗೆ ನುಗ್ಗಿದ ಇಡಿ, ನಕಲಿ ಕೀ ಬಳಸಿ ಬಾಗಿಲು ಓಪನ್
ನಾಪತ್ತೆ ಅಧಿಕಾರಿಗೆ ಇಡಿ ಫೋನ್ ಕರೆ, ಅಕ್ರಮದ ಮಾಹಿತಿಗೆ ಶೋಧ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಕ್ರಮಕ್ಕೆ ಸಂಬಂಧ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ ನಡೆಸಿ ಭಾನುವಾರ ತೀವ್ರ ಶೋಧ ನಡೆಸಿದ್ದಾರೆ.
ಕೆಪಿಎಸ್‌ಸಿ ಇತಿಹಾಸದ ಇದೇ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಹಾಲಿ ಸದಸ್ಯೆ ಶಾಂತಾ ಹೊಸಮನಿ ಸೇರಿದಂತೆ ಹಲವರ ಮನೆ ಹಾಗೂ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ತನಿಖೆಯ ಮುಂದುವರಿದ ಭಾಗವಾಗಿ, ಪರೀಕ್ಷಾ ಉಸ್ತುವಾರಿ ವಹಿಸಿದ್ದ ಜ್ಞಾನೇಂದ್ರ ಕುಮಾರ್ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ. ಭಾನುವಾರ ಮಧ್ಯಾಹ್ನ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ಆಗಮಿಸಿದ ಅಧಿಕಾರಿಗಳಿಗೆ ಅಪಾರ್ಟ್‌ಮೆಂಟ್ ಬಳಿ ಅಡ್ಡಿ ಎದುರಾಯಿತು.
ಅಧಿಕಾರಿಗಳು ಆಗಮಿಸುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಮುಖ್ಯ ಗೇಟ್‌ಗೆ ಬೀಗ ಹಾಕಿ, ಮೇಲಧಿಕಾರಿಗಳ ಅಥವಾ ಮನೆಯವರ ಅನುಮತಿ ಇಲ್ಲದೆ ಯಾರನ್ನೂ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಬಳಿಕ ಇಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಅಧಿಕಾರಿಗಳೊಂದಿಗೆ ಮಾತನಾಡಿದ ಜ್ಞಾನೇಂದ್ರ ಕುಮಾರ್, ಸೆಕ್ಯೂರಿಟಿಗೆ ಸೂಚನೆ ನೀಡಿದ ನಂತರ ಗೇಟ್ ತೆರೆಯಲಾಗಿದೆ.
ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್
ಜ್ಞಾನೇಂದ್ರ ಅವರ ಫ್ಲ್ಯಾಟ್‌ಗೆ ಬೀಗ ಹಾಕಲ್ಪಟ್ಟಿದ್ದರಿಂದ ಕೀ ಮೇಕರ್ ಅನ್ನು ಸ್ಥಳಕ್ಕೆ ಕರೆಸ ಲಾಯಿತು. ಕೀ ಮೇಕರ್ ಸಮ್ಮುಖದ ನಕಲಿ ಕೀ ತಯಾರಿಸಿ, ಫ್ಲ್ಯಾಟ್‌ನ ಬೀಗವನ್ನು ಯಶಸ್ವಿಯಾಗಿ ತೆರೆಯಲಾಯಿತು. ಮನೆ ಬಾಗಿಲು ತೆರೆದ ತಕ್ಷಣ ಇಡಿ ಅಧಿಕಾರಿಗಳು ತಪಾಸಣೆ ಪ್ರಕ್ರಿಯೆಯನ್ನು ವಿಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್ (ಇನ್‌ಕ್ಯಾಮೆರಾ ಪರಿಶೀಲನೆ) ಮಾಡುವ ಮೂಲಕ ಆರಂಭಿಸಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ಅಪಾರ್ಟ್‌ಮೆಂಟ್ ಸುತ್ತಲೂ ಬಿಗಿ ಬಂದೋಬಸ್ತ್ ಒದಗಿಸಿದ್ದು, ಪ್ರಸ್ತುತ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ ಎಂದು ಇಡಿ ಮೂಲಗಳು ಖಚಿತಪಡಿಸಿವೆ.
ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದ ಜ್ಞಾನೇಂದ್ರ ಕುಮಾರ್ ಅವರ ಪಾತ್ರ ದ ಕುರಿತು ತನಿಖೆ ನಡೆಯುತ್ತಿರುವ ನಡುವೆಯೇ ಅವರು ದೆಹಲಿಗೆ ತೆರಳಿರುವುದು ಮತ್ತು ಬಳಿಕ ಸಂಪರ್ಕಕ್ಕೆ ಸಿಗದಿರುವುದು ತನಿಖೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಪಶುವೈದ್ಯಾಧಿ ಕಾರಿ ನೇಮಕಾತಿ ಪರೀಕ್ಷೆ ಹಾಗೂ ಕೆಎಎಸ್ ಪರೀಕ್ಷೆ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದರು.
ತುರ್ತು ಕಾರಣಕ್ಕೆ ತವರಿಗೆ
ಈ ನಡುವೆ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದಾರೆ ಎಂಬ ವರದಿಗಳಿಗೆ ಸರಕಾರದೊಂದಿಗೆ ಸಂಪರ್ಕ ಸಾಧಿಸಿ, ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ರಜೆ ಕೋರಿ ತಮ್ಮೂರಿಗೆ ತೆರಳಿದ್ದಾಗಿ ಜ್ಞಾನೇಂದ್ರ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಅವಧಿಯಲ್ಲಿ ಅಧಿಕೃತ ದೂರವಾಣಿ ಸಂಪರ್ಕಕ್ಕೆ ಸಿಗದಿರುವುದು ಅವರ ಇರುವಿಕೆಯ ಬಗ್ಗೆ ಗೊಂದಲ ಮತ್ತು ಊಹಾಪೋಹಗಳಿಗೆ ಕಾರಣವಾದಂತಿದೆ.
ದಿಢೀರ್ ದಿಲ್ಲಿಗೆ ಪ್ರಯಾಣ
ತನಿಖೆಯ ನಡುವೆ ಜ್ಞಾನೇಂದ್ರ ಕುಮಾರ್ ಆಗ 20ರಂದು ದೆಹಲಿಗೆ ತೆರಳಿದ್ದರು ಎಂಬ ಮಾಹಿತಿ ತನಿಖಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮಧ್ಯಾಹ್ನ 3 ಗಂಟೆಗೆ ಹೊರಡಬೇಕಿದ್ದ ವಿಮಾನಕ್ಕೆ ಸುಮಾರು ಒಂದೂವರೆ ಗಂಟೆ ಮೊದಲು ಟಿಕೆಟ್ ಕಾಯ್ದಿರಿಸಲಾಗಿತ್ತು ಎಂದು ವರದಿಯಾಗಿದೆ. ಇಂಡಿಗೋ ವಿಮಾನದ ಟಿಕೆಟ್‌ಗಾಗಿ 30,253 ರು. ಪಾವತಿಸಲಾಗಿದ್ದು, ಎಚ್‌ಡಿಎಫ್ʼಸಿ ಕ್ರೆಡಿಟ್ ಕಾರ್ಡ್ ಬಳಸಿ ಕಾಯ್ದಿರಿಸಲಾಗಿದೆ. ದಿಢೀರ್ ಪ್ರಯಾಣದ ಹಿನ್ನೆಲೆಯಲ್ಲಿ ಟಿಕೆಟ್ ಕಾಯ್ದಿರಿಸಿರು ವುದು ಮತ್ತು ನಂತರ ಅಧಿಕಾರಿ ಸಂಪರ್ಕಕ್ಕೆ ಸಿಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
*
ಏನೇನಾಯ್ತು? ?
ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ವಿರುದ್ಧ 8 ಜಿಲ್ಲೆಗಳಲ್ಲಿ ಇಡಿ ದಾಳಿ
ಸೋಮವಾರ ಕೆಪಿಎಸ್ಸಿ ಮಾಜಿ ಕಾರ್ಯದರ್ಶಿ ಜ್ಞಾನೇಂದ್ರ ಕುಮಾರ್ ಮನೆಗೆ ನುಗ್ಗಿದ ಇಡಿ
ಭದ್ರತಾ ಸಿಬ್ಬಂದಿಯಿಂದ ವಿರೋಧ, ಇಡಿಯಿಂದ ಜ್ಞಾನೇಂದ್ರಗೆ ಕರೆ, ಅನುಮತಿ
ಫ್ಲ್ಯಾಟ್‌ಗೆ ಬೀಗ,ತೆರೆಯಲು ನಕಲಿ ಕೀ ಬಳಕೆ, ಇಡಿ ಶೋಧ ಸಂಪೂರ್ಣ ವಿಡಿಯೋ ರೆಕಾರ್ಡ್
ಸಿಆರ್‌ಪಿಎಫ್ ಸಿಬ್ಬಂದಿಯಿಂದ ಅಧಿಕಾರಿಗಳಿಗೆ ಭದ್ರತೆ, ಅಪಾರ್ಟ್‌ಮೆಂಟ್ ತೀವ್ರ ಕಣ್ಗಾವಲು
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಶಾಂತಾ ಹೊಸಮನಿ ಮನೆಯಲ್ಲೂ ಪರಿಶೀಲನೆ