ಬಹುತೇಕ ಹಣ ನಗದು ರೂಪದಲ್ಲೇ ವರ್ಗಾವಣೆ: ಜಾಲಪತ್ತೆಗೆ ಶೋಧ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಿಐಡಿ ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ. 24 ಅಭ್ಯರ್ಥಿಗಳಿಂದ 12 ಕೋಟಿ ರು. ಪಡೆಯ ಲಾಗಿದೆ ಎಂಬ ಗಂಭೀರ ಅಂಶ ಪತ್ತೆ ಯಾಗಿದೆ. ತನಿಖೆಯ ಪ್ರಕಾರ, ಒಟ್ಟು 24 ಅಭ್ಯರ್ಥಿಗಳು ಹಣ ಪಾವತಿಸಿ ಸರಕಾರಿ ಹುದ್ದೆ ಪಡೆಯಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ನೇಮಕಾತಿ ಪರೀಕ್ಷೆ ನಡೆಯುವ ಮುನ್ನವೇ ಆರೋಪಿಗಳ ತಂಡವು ಆಯ್ದ ಅಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರಿಗೆ ಪ್ರತ್ಯೇಕ ತರಬೇತಿ ನೀಡಿತ್ತು ಎಂದು ಸಿಐಡಿ ತನಿಖೆಯಲ್ಲಿ ತಿಳಿದು ಬಂದಿದೆ. ಹುದ್ದೆ ಕೊಡಿಸುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಮುಂಗಡವಾಗಿ ಹಣ ಪಡೆದಿರುವ ಶಂಕೆಯೂ ವ್ಯಕ್ತವಾಗಿದೆ.
ತನಿಖೆಯ ಪ್ರಕಾರ, ಅಭ್ಯರ್ಥಿಗಳಿಂದ ಅವರ ಸಾಮರ್ಥ್ಯ ಮತ್ತು ಒಪ್ಪಂದದ ಆಧಾರದ ಮೇಲೆ ಭಾರೀ ಮೊತ್ತ ವನ್ನು ಸಂಗ್ರಹಿಸಲಾಗಿತ್ತು. ಕೆಲವರಿಂದ 20 ಲಕ್ಷ ರು., ಇನ್ನು ಕೆಲವರಿಂದ 40 ಲಕ್ಷ ರು. ಹಾಗೂ ಮತ್ತಿತರರಿಂದ 80 ಲಕ್ಷ ರು. ವರೆಗೆ ಹಣ ಪಡೆದಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.
ಇದನ್ನೂ ಓದಿ: KPSC Recruitment Scam: ನೇಮಕಾತಿ ಅಕ್ರಮ ವ್ಯವಸ್ಥಿತ ಸಂಚು: ಹೈ ತರಾಟೆ: ಅಮಾನತಿನಅಲ್ಲಿರುವ ಅಧ್ಯಕ್ಷರಿಗೆ ಈಗ ಬಂಧನ ಭೀತಿ
ಒಟ್ಟಾರೆ 24 ಅಭ್ಯರ್ಥಿಗಳಿಂದ 12 ಕೋಟಿ ರು.ಗೂ ಅಧಿಕ ಮೊತ್ತ ಸಂಗ್ರಹಿಸಲಾಗಿದೆ ಎಂದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮ ನೇಮಕಾತಿಗಾಗಿ ಸಂಗ್ರಹಿಸಿದ ಹಣದ ಬಹುಪಾಲು ನಗದು ರೂಪದ ಕೈ ಬದಲಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಹಣದ ವಹಿವಾಟಿನ ಸಂಪೂರ್ಣ ಜಾಲ ಪತ್ತೆ ಹಚ್ಚಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಆರೋಪಿ ಬಸವರಾಜ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯೊಂದರಲ್ಲಿ ಸುಮಾರು 75 ಲಕ್ಷ ರು. ಹಣದ ವಹಿವಾಟು ನಡೆದಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಈ ಖಾತೆ ಬೀದರ್‌ನ ಕೋ-ಆಪರೇಟಿವ್ ಬ್ಯಾಂಕ್‌ಗೆ ಸೇರಿದೆ ಎಂದು ತಿಳಿದುಬಂದಿದೆ.
ಬ್ಯಾಂಕ್ ಖಾತೆ, ದಾಖಲೆಗಳ ಪರಿಶೀಲನೆ: ಪ್ರಕರಣದ ತನಿಖೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳು ಬ್ಯಾಂಕ್ ಖಾತೆಗಳಲ್ಲಿನ ವಹಿವಾಟು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸು ತ್ತಿದ್ದಾರೆ. ಅಕ್ರಮ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಣಕಾಸಿನ ವಹಿವಾಟಿನ ಮಾಹಿತಿಯನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ, ಹಣದ ವಹಿವಾಟು ಯಾರ್ಯಾರಿಗೆ ತಲುಪಿದೆ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಹೇಗೆ ಅನುಕೂಲ ಮಾಡಿಕೊಡಲಾಯಿತು ಎಂಬು ದರ ಕುರಿತು ಸಿಐಡಿ ತನಿಖೆ ಮುಂದುವರಿದಿದೆ.
ನಕಲಿ ದಾಖಲೆ: ಶಿವಶಂಕರಪ ಗೆ ಮತ್ತೊಂದು ಸಂಕಷ್ಟ, ಯಾದಗಿರಿ ಜಿಲ್ಲೆಯ ಶಹಾಪುರ ಠಾಣೆಯಲ್ಲಿ ದೂರು, 27 ಎಕರೆ ಭೂಕಬಳಿಕೆಯಲ್ಲೂ ಸಾಹುಕಾರ್
ಬೆಂಗಳೂರು: ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಳಿಯ ಶಂಕರಗೌಡ ಮೂಲಕ ನಕಲಿ ದಾಖಲೆ ಸೃಷ್ಟಿಸಿ 27 ಎಕರೆ ಜಮೀನು ಭೂಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದ ಸರ್ವೇ ನಂಬರ್ 247 ಹಾಗೂ 245ರಲ್ಲಿರುವ 27 ಎಕರೆ ಜಮೀನು ಭೂಕಬಳಿಕೆ ಮಾಡಿರುವ ಆರೋಪ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿದೆ.
ಜಮೀನು ಮಾಲೀಕರಾದ ಬಸಮ್ಮ ಅವರ ಮಗ ಶಂಕರಗೌಡ ಎಂದು ನಕಲಿ ದಾಖಲೆ ಸೃಷ್ಟಿಸಿ, ಜಮೀನನ್ನು ಗಿಫ್ಟ್ ಡೀಡ್ ಮೂಲಕ ಶಂಕರಗೌಡ ಹೆಸರಿಗೆ ನೋಂದಣಿ ಮಾಡಲಾಗಿದೆ. ಬಳಿಕ ಶಂಕರಗೌಡ ಹೆಸರಿಗೆ ಬಂದಿದ್ದ ಜಮೀನನ್ನು ಶಿವಶಂಕರಪ್ಪ ಸಾಹುಕಾರ್ ತಮ್ಮ ಹೆಸರಿಗೆ ಮಾಡಿ ಕೊಂಡಿದ್ದಾರೆ. ಬಸಮ್ಮ ಅವರ ಮಗ ಶಂಕರಗೌಡ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಲು ಶಿವಶಂಕರಪ್ಪ ತಮ್ಮ ಪ್ರಭಾವ ಬಳಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಮೂಲಕ ಅನಧಿಕೃತವಾಗಿ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಜಮೀನು ಕಳೆದು ಕೊಂಡ ಕುಟುಂಬಸ್ಥರು ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.