ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೋಮ-ಹವನ; ಅಹಿತಕರ ಘಟನೆ ನಡೆಯದಿರಲೆಂದು ದೇವರ ಮೊರೆ ಹೋದ ಕೆಎಸ್‌ಸಿಎ
Chinnaswamy Stadium: ಆರ್‌ಸಿಬಿ ತಂಡ ಐಪಿಎಲ್ ಚೊಚ್ಚಲ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಜೂನ್ 4ರಂದು ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಇದಾದ ನಂತರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ, ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನೆಲೆಯಲ್ಲಿ ಕೆಎಸ್‌ಸಿಎ ನೂತನ ಪದಾಧಿಕಾರಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೋಮ ನಡೆಯಿತು. -
ಬೆಂಗಳೂರು, ಡಿ.22: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಕಾಲ್ತುಳಿತ ದುರಂತ ನಡೆದ ಬಳಿಕ ಕ್ರಿಕೆಟ್ ಪಂದ್ಯಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಡುವೆ ನೂತನ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಪ್ರಯತ್ನದಿಂದಾಗಿ ರಾಜ್ಯ ಸರ್ಕಾರವು ಕೆಲ ಷರತ್ತುಗಳೊಂದಿಗೆ ಪಂದ್ಯಗಳನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ಇನ್ನುಮುಂದೆ ಕಾಲ್ತುಳಿತದಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಕೆಎಸ್‌ಸಿಎ ಪದಾಧಿಕಾರಿಗಳು ದೇವರ ಮೊರೆ ಹೋಗಿದ್ದು, ಕ್ರೀಡಾಂಗಣದಲ್ಲಿ ಹೋಮ-ಹವನ ಮಾಡಿಸಿದ್ದಾರೆ.
ಸುದರ್ಶನ ಹೋಮ, ನವಗ್ರಹ, ಗಣಪತಿ ಪೂಜೆ ಮಾಡಲಾಗಿದ್ದು, 6 ಜನ ಪುರೋಹಿತರು ಹೋಮ, ವಿಶೇಷ ಪೂಜೆ ನೆರವೇರಿಸಿದ್ದಾರೆ. ಪೂಜೆಯಲ್ಲಿ ಕೆಎಸ್‌ಸಿಎ ನೂತನ ಪದಾಧಿಕಾರಿಗಳು ಭಾಗಿಯಾಗಿದ್ದರು.
ಆರ್‌ಸಿಬಿ ತಂಡ ಐಪಿಎಲ್ ಚೊಚ್ಚಲ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಜೂನ್ 4ರಂದು ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ 11 ಮಂದಿ ಸಾವನ್ನಪ್ಪಿದ್ದರು. ಇದಾದ ನಂತರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಬಿದ್ದಿತ್ತು.
ನ್ಯಾ. ಮೈಕಲ್ ಡಿ. ಕುನ್ಹಾ ಅವರ ಸಮಿತಿಯು ತನಿಖಾ ವರದಿ ಸಲ್ಲಿಸಿತ್ತು. ಅಲ್ಲದೇ ಚಿನ್ನಸ್ವಾಮಿಯಲ್ಲಿ ಮತ್ತೆ ಇಂಥ ಅವಗಢಗಳು ಸಂಭವಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಶಿಫಾರಸು ಮಾಡಿತ್ತು. ಇತ್ತೀಚೆಗೆ ಬೆಂಗಳೂರು ನಗರ ಪೋಲಿಸರು 17 ಅಂಶಗಳುಳ್ಳ ಷರತ್ತುಬದ್ಧ ಮಾರ್ಗಸೂಚಿ ಹೊರಡಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಒಪ್ಪಿಗೆ ನೀಡಿದ್ದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳಿಗೆ ಅನುಮತಿ ನೀಡಲು ಮನವಿ
ಬೆಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಬಹುದೇ ಅಥವಾ ಬೇಡವೇ ಎಂಬ ಕುರಿತು ಪರಿಶೀಲಿಸಲು ರಾಜ್ಯ ಸರ್ಕಾರದಿಂದ ಬೆಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿಧಾನಸೌಧದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಸೋಮವಾರ ಸಭೆ ನಡೆಸಿದ್ದು, ಈ ವೇಳೆ ಸಮಿತಿ ರಚಿಸಲಾಗಿದೆ.
ಡಿ.24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ನೀಡುವಂತೆ ಕೆಎಸ್‌ಸಿಎ ಕೋರಿದೆ. ಪ್ರೇಕ್ಷಕರ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ. ಪಂದ್ಯ ಮಾತ್ರ ನಡೆಸುತ್ತೇವೆ ಎಂದು ಕೆಎಸ್‌ಸಿಎ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಲು ಬೆಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಬಿಎ ಆಯುಕ್ತರು, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳಿರುವ ಸಮಿತಿ ರಚಿಸಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ, ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ, ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.